ಸಾರಾಂಶ
ಬಳ್ಳಾರಿ: ಇಲ್ಲಿನ ಗಡಗಿಚನ್ನಪ್ಪ ವೃತ್ತದಿಂದ ಸಂಗಮ್ ವೃತ್ತದವರೆಗೆ ಕೈಗೊಂಡಿರುವ ಮಾರ್ಗ ನಿರ್ಮಾಣ ಕಾಮಗಾರಿ ಮತ್ತಷ್ಟು ಚುರುಕು ಪಡೆದುಕೊಂಡಿದ್ದು, ಡಾಂಬರೀಕರಣ ಕಾರ್ಯ ಆರಂಭಗೊಂಡಿದೆ.
ಸುಮಾರು ₹6 ಕೋಟಿ ವೆಚ್ಚದಲ್ಲಿ ಸುಸಜ್ಜಿತ ದ್ವಿಪಥ ರಸ್ತೆ ಹಾಗೂ ಒಂದೂವರೆ ಮೀಟರ್ ಪಾದಚಾರಿ ಮಾರ್ಗ ನಿರ್ಮಾಣ ಮಾಡಲಾಗುತ್ತಿದೆ. ರಸ್ತೆ ಅಗಲೀಕರಣ ಬಳಿಕ ಶುರುಗೊಂಡಿದ್ದ ರಸ್ತೆ ಡಾಂಬರೀಕರಣ ಕಾರ್ಯ ವೇಗ ಪಡೆದಿದೆ.ಈಗಾಗಲೇ ಕೇಬಲ್ ಅಳವಡಿಕೆ, ಒಳಚರಂಡಿ ವ್ಯವಸ್ಥೆ ಕಾಮಗಾರಿ ಭಾಗಶಃ ಪೂರ್ಣಗೊಂಡಿದೆ. ಉಳಿದಂತೆ ರಸ್ತೆ ವಿಭಜಕ ಹಾಗೂ ಬೀದಿದೀಪಗಳ ವ್ಯವಸ್ಥೆ ಕೆಲಸವಷ್ಟೇ ಬಾಕಿ ಉಳಿದಿದೆ.ನವೆಂಬರ್ 2 ರಂದು ನೂತನ ಗಡಗಿಚನ್ನಪ್ಪ ಟವರ್ ಕ್ಲಾಕ್ ಹಾಗೂ ಗಡಗಿ ಚನ್ನಪ್ಪ ವೃತ್ತದಿಂದ ಸಂಗಮ್ ವೃತ್ತವರೆಗಿನ ರಸ್ತೆ ಮಾರ್ಗವನ್ನು ಲೋಕಾರ್ಪಣೆಗೊಳಿಸಲು ನಿರ್ಧರಿಸಿರುವುದರಿಂದ ಬಾಕಿ ಕೆಲಸ ಮತ್ತಷ್ಟೂ ಚುರುಕು ಪಡೆದಿದೆ.
ಬಹುವರ್ಷಗಳ ಬೇಡಿಕೆಗೆ ಕೂಡಿ ಬಂದ ಕಾಲ:ಗಡಗಿಚನ್ನಪ್ಪ ವೃತ್ತದಿಂದ ಸಂಗಮ್ ವೃತ್ತದವರೆಗೆ ರಸ್ತೆ ಅಗಲೀಕರಣಗೊಳಿಸಬೇಕು ಎಂಬ ಕೂಗು ಬಹುವರ್ಷಗಳಿಂದಲೂ ಕೇಳಿ ಬಂದಿತ್ತು. ಇಕ್ಕಟ್ಟಾದ ರಸ್ತೆಯಿಂದ ರಸ್ತೆ ಅಪಘಾತಗಳು ಹೆಚ್ಚಾಗಿದ್ದವು. ಸದಾ ಸಂಚಾರ ದಟ್ಟಣೆಯಿಂದಾಗಿ ಸಾರ್ವಜನಿಕರು ತೊಂದರೆಗೀಡಾಗುತ್ತಿದ್ದರು. ಇದು ಅಂತರಾಜ್ಯ ಗಡಿ ಸಂಪರ್ಕಿಸುವ ರಸ್ತೆಯಾಗಿರುವುದರಿಂದ ಈ ರಸ್ತೆಯನ್ನು ಅಗಲೀಕರಣಗೊಳಿಸಿ, ಅಭಿವೃದ್ಧಿಗೊಳಿಸಬೇಕು ಎಂಬ ಒತ್ತಾಯಗಳಿದ್ದವು.
ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿಯವರ ಒತ್ತಾಸೆಯಂತೆ ಈ ಮಾರ್ಗವನ್ನು ವಿಸ್ತಾರಗೊಳಿಸಲು ನಿರ್ಧರಿಸಲಾಯಿತಲ್ಲದೆ, ಜಿಲ್ಲಾ ಖನಿಜನಿಧಿ (ಡಿಎಂಎಫ್) ಅನುದಾನದಲ್ಲಿ ರಸ್ತೆ ಅಗಲೀಕರಣ ಕಾರ್ಯ ಶುರುಗೊಳಿಸಲಾಯಿತು. ಇದಕ್ಕಾಗಿ ಸುಮಾರು 35 ಕ್ಕೂ ಹೆಚ್ಚು ವಾಣಿಜ್ಯ ಕಟ್ಟಡಗಳನ್ನು ತೆರವುಗೊಳಿಸಿ, ರಸ್ತೆ ಅಭಿವೃದ್ಧಿ ಕೆಲಸ ಆರಂಭಿಸಲಾಯಿತು.ನಗರದ ಅಂದ ಹೆಚ್ಚಿಸಿದ ರಸ್ತೆ ನಿರ್ಮಾಣ: ಗಡಗಿಚನ್ನಪ್ಪ ವೃತ್ತದಿಂದ ಸಂಗಮ್ ವೃತ್ತದವರೆಗಿನ ರಸ್ತೆ ಅಗಲೀಕರಣದಿಂದ ಸಾರ್ವಜನಿಕರ ಓಡಾಟಕ್ಕೆ ಅನುಕೂಲವಾಗಿದೆಯಷ್ಟೇ ಅಲ್ಲ; ಅಂದವೂ ಹೆಚ್ಚಿದೆ.
ವಿಶಾಲವಾದ ರಸ್ತೆಯಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲು ನಿರ್ಧರಿಸಿದ್ದು ರಸ್ತೆ ವಿಸ್ತಾರದಿಂದ ಜನರು ಸಂತಸಗೊಂಡಿದ್ದಾರೆ. ಸದಾ ಜನರಿಂದ ಗಿಜಿಗುಡುವ ಶ್ರೀಕನಕ ದುರ್ಗಮ್ಮ ರಸ್ತೆಯನ್ನು ಅಗಲೀಕರಣಗೊಳಿಸಲಾಗಿದೆ.ಇದೀಗ ಗಡಗಿಚನ್ನಪ್ಪ ವೃತ್ತದ ರಸ್ತೆಗೆ ಅಗಲೀಕರಣ ಹಾಗೂ ಅಭಿವೃದ್ಧಿ ಯೋಗ ಕೂಡಿ ಬಂದಂತಾಗಿದೆ. ನಗರದ ಉಳಿದ ರಸ್ತೆಗಳನ್ನು ವಿಸ್ತಾರಗೊಳಿಸುವ ಕೆಲಸಕ್ಕೆ ನಗರ ಶಾಸಕರು ಹಾಗೂ ಜಿಲ್ಲಾಡಳಿತ ಮುಂದಾಗಬೇಕು ಎಂಬ ಒತ್ತಾಸೆಗಳು ಕೇಳಿ ಬಂದಿವೆ.
ಗಡಗಿಚನ್ನಪ್ಪ ವೃತ್ತದಿಂದ ಸಂಗಮ್ ವೃತ್ತದವರೆಗಿನ ರಸ್ತೆ ಅಗಲೀಕರಣದಿಂದ ಸಾರ್ವಜನಿಕರಿಗೆ ಬಹಳ ಅನುಕೂಲವಾಗಲಿದೆ. ಶ್ರೀಕನಕ ದುರ್ಗಮ್ಮ ದೇವಸ್ಥಾನದಿಂದ ಗಡಗಿಚನ್ನಪ್ಪ ಟವರ್ ಕ್ಲಾಕ್ ರಸ್ತೆ ಅಗಲೀಕರಣ ಹಾಗೂ ಎಸ್ಪಿ ವೃತ್ತದ ಅಗಲೀಕರಣ ಕಾರ್ಯ ಶೀಘ್ರವೇ ಶುರುಗೊಳಿಸುತ್ತೇವೆ ಎನ್ನುತ್ತಾರೆ ನಗರ ಶಾಸಕ ನಾರಾ ಭರತ್ ರೆಡ್ಡಿ.