ಅಸ್ಸಾಂ ಮೂಲದ ಕಾರ್ಮಿಕ ಕೊಲೆ ಪ್ರಕರಣ: ಆರೋಪಿ ಬಂಧನ

| Published : Dec 13 2024, 12:48 AM IST

ಸಾರಾಂಶ

ದೀಪಕ್‌ ಬೆಂಗೆರ ಕಳೆದ ಬುಧವಾರದಂದು ಕೊಲೆಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಈತ ನಿರ್ಗತಿಕನಂತೆ ಬೀದಿ ಬದಿ, ಜನ ವಸತಿ ಇಲ್ಲದ ಕಟ್ಟಡದಲ್ಲಿ ಮಲಗುತ್ತಿದ್ದರಿಂದ ಆತನ ಒಡನಾಡಿಗಳ ಬಗ್ಗೆ ತಿಳಿಯದೆ ಹಂತಕನನ್ನು ಪತ್ತೆ ಹಚ್ಚುವುದು ಪೊಲೀಸ್ ಇಲಾಖೆಗೆ ಕಗ್ಗಂಟಾಗಿತ್ತು.

ಉಪ್ಪಿನಂಗಡಿ: ಬಸ್‌ ನಿಲ್ದಾಣ ಸಮೀಪದ ಗ್ರಾಪಂ ಸ್ವಾಮ್ಯದ ನಿರ್ಮಾಣ ಹಂತದ ಕಟ್ಟಡದಲ್ಲಿ ನಡೆದಿದ್ದ ಅಸ್ಸಾಂ ಮೂಲದ ಕಾರ್ಮಿಕ ದೀಪಕ್‌ ಬೆಂಗೆರ ಕೊಲೆ ಪ್ರಕರಣವನ್ನು ಭೇದಿಸಿರುವ ಉಪ್ಪಿನಂಗಡಿ ಪೊಲೀಸರು ಆರೋಪಿ ಬಾಬು ಯಾನೆ ರುದ್ರ (೬೮) ಎಂಬಾತನನ್ನು ಬಂಧಿಸಿದ್ದಾರೆ.

ದೀಪಕ್‌ ಬೆಂಗೆರ ಕಳೆದ ಬುಧವಾರದಂದು ಕೊಲೆಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಈತ ನಿರ್ಗತಿಕನಂತೆ ಬೀದಿ ಬದಿ, ಜನ ವಸತಿ ಇಲ್ಲದ ಕಟ್ಟಡದಲ್ಲಿ ಮಲಗುತ್ತಿದ್ದರಿಂದ ಆತನ ಒಡನಾಡಿಗಳ ಬಗ್ಗೆ ತಿಳಿಯದೆ ಹಂತಕನನ್ನು ಪತ್ತೆ ಹಚ್ಚುವುದು ಪೊಲೀಸ್ ಇಲಾಖೆಗೆ ಕಗ್ಗಂಟಾಗಿತ್ತು.

ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ ಪೊಲೀಸರು ಬಸ್ ನಿಲ್ದಾಣದ ಪರಿಸರದಲ್ಲಿನ ಎಲ್ಲ ಸಿಸಿ ಕ್ಯಾಮರಾಗಳ ದೃಶ್ಯಾವಳಿಗಳನ್ನು ಅಮೂಲಾಗ್ರ ಪರಿಶೀಲನೆಗೆ ಒಳಪಡಿಸಿದಾಗ ಶಂಕಿತ ಆರೋಪಿಯ ಚಲನವಲನಗಳು ರಾತ್ರಿ ವೇಳೆ ಆ ಪರಿಸದರಲ್ಲಿ ದಾಖಲಾಗಿತ್ತು. ಅದರ ಆಧಾರದ ಮೇಲೆ ಬೆಳ್ತಂಗಡಿ ತಾಲೂಕು ಕಲ್ಮಂಜ ಗ್ರಾಮದ ಬಾಬು ಯಾನೆ ರುದ್ರನನ್ನು ದೇರಳಕಟ್ಟೆಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದರು. ವಿಚಾರಣೆ ನಡೆಸಿದಾಗ ರುದ್ರ ತನ್ನ ಕೃತ್ಯವನ್ನು ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಹನ್ನೆರಡು ವರ್ಷಗಳ ಹಿಂದೆ ಜಿಲ್ಲೆಯ ಹಲವಾರು ದೇವಸ್ಥಾನಗಳಲ್ಲಿ ಕಳ್ಳತನ ಮಾಡಿರುವ ಪ್ರಕರಣಗಳಲ್ಲಿ ಬಂಧಿತ ರುದ್ರ ಆರೋಪಿಯಾದ್ದಾನೆ. ಉಪ್ಪಿನಂಗಡಯ್ಲಿಲ ಅಂದು ರಾತ್ರಿ ಗಸ್ತು ನಿರತ ಪೊಲೀಸರಿಗೆ ತನ್ನ ಪರಿಚಯ ಸಿಗಬಹುದೆಂಬ ಭೀತಿಯಿಂದ ತಪ್ಪಿಸಿಕೊಳ್ಳಲು ಗ್ರಾಪಂ ನಿರ್ಮಾಣ ಹಂತದ ಕಟ್ಟಡ ಪ್ರವೇಶಿಸಿದ್ದಾನೆ. ಅಲ್ಲಿ ಮಲಗಿದ್ದ ದೀಪಕ್‌ ಬೆಂಗೆರ ಇಲ್ಲಿ ಮಲಗದಂತೆ ರುದ್ರನಿಗೆ ಆಕ್ಷೇಪಿಸಿದ್ದಾನೆ. ಆತ ಕಟ್ಟಡದ ಕಾವಲುಗಾರನಿರಬಹುದೆಂದು ಅಂದಾಜಿಸಿ ಆರೋಪಿ ರುದ್ರ ಅಲ್ಲಿಂದ ಬಸ್‌ ನಿಲ್ದಾಣಕ್ಕೆ ವಾಪಸ್‌ ಹೋಗಿದ್ದಾನೆ. ತನ್ನ ಪ್ಯಾಂಟ್‌ ಜೇಬಿನಲ್ಲಿದ್ದ ಹಣ, ಮೊಬೈಲ್‌ ನಾಪತ್ತೆಯಾಗಿರುವುದನ್ನು ಕಂಡು ದೀಪಕ್‌ ಬೆಂಗೆರ ಕದ್ದಿರಬಹುದೆಂದು ಕುಪಿತಗೊಂಡು ದೊಣ್ಣೆಯೊಂದನ್ನು ಹಿಡಿದುಕೊಂಡು ವಾಪಸ್‌ ಕಟ್ಟಡಕ್ಕೆ ಬಂದಿದ್ದಾನೆ. ಮಲಗಿದ್ದ ದೀಪಕ್‌ ಬೆಂಗೆರ ತಲೆಗೆ ಬಲವಾಗಿ ಹೊಡೆದು ಅಲ್ಲಿಂದ ಪರಾರಿಯಾಗಿದ್ದಾಗಿ ವಿಚಾರಣೆ ವೇಳೆ ಆರೋಪಿ ರುದ್ರ ಬಾಯಿಬಿಟ್ಟಿದ್ದಾನೆ.

ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋದವನು ಅಸ್ಸಾಂ ಮೂಲದ ಕಾರ್ಮಿಕನ ಪಾಲಿಗೆ ಮೃತ್ಯುರೂಪದಲ್ಲಿ ಕಾಡಿದ್ದಾನೆ.

ಎಸ್‌ಪಿ ಮಾರ್ಗದರ್ಶನದಲ್ಲಿ ಉಪ್ಪಿನಂಗಡಿ ವೃತ್ತ ನಿರೀಕ್ಷಕ ರವಿ ಬಿ.ಎಸ್., ಉಪ ನಿರೀಕ್ಷಕ ಅವಿನಾಶ್ ಎಚ್‌., ಪೊಲೀಸ್ ಸಿಬ್ಬಂದಿ ಶಿವರಾಮ್, ಹಿತೋಷ್, ಗಿರೀಶ್, ರಾಮಣ್ಣ ಗೌಡ, ಹೇಮರಾಜ್, ಮಹಾದೇವ, ನಾಗರಾಜ್, ಪುತ್ತೂರು ಗ್ರಾಮಾಂತರ ಠಾಣಾ ಸಿಬ್ಬಂದಿ ಪ್ರವೀಣ್ ರೈ, ಬಂಟ್ವಾಳ ಗ್ರಾಮಾಂತರ ಠಾಣಾ ಸಿಬ್ಬಂದಿ ಹರಿಶ್ಚಂದ್ರ, ತಾಂತ್ರಿಕ ವಿಭಾಗದ ಸಿಬ್ಬಂದಿ ದಿವಾಕರ್ ಅವರನ್ನು ಒಳಗೊಂಡ ತಂಡ ಘಟನೆ ನಡೆದ ವಾರದೊಳಗೆ ಆರೋಪಿಯನ್ನು ಬಂಧಿಸಿದ್ದಾರೆ.