ಕನ್ನಡಪ್ರಭ ವಾರ್ತೆ ಹಳಿಯಾಳ
ತಾಲೂಕಿನ ಕೆಸರೊಳ್ಳಿ ಗ್ರಾಮದ ಕೆರೆಯ ಬಳಿ ಕೆಲಸ ಮಾಡುತ್ತಿದ್ದ ಗ್ರಾಮಸ್ಥ ಮಿನಿನ್ ಪಾವ್ಲು ಸೋಜ ಎಂಬ ಕೃಷಿಕಾರ್ಮಿಕನ ಮೇಲೆ ಅದೇ ಗ್ರಾಮದ ಗಣಪತಿ ಸಹದೇವ ಕರಂಜೇಕರ ಎಂಬವರು ತಮ್ಮ ಸಹೋದರ ಜೊತೆಗೂಡಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಖಂಡಿಸಿ ಕೆಸರೊಳ್ಳಿ ಗ್ರಾಮಸ್ಥರು ಹಾಗೂ ಹಳಿಯಾಳ ತಾಲೂಕಿನ ಕ್ರೈಸ್ತ ಸಮುದಾಯದವರು ಶುಕ್ರವಾರ ತಾಲೂಕಾಡಳಿತಕ್ಕೆ ಪ್ರತ್ಯೇಕ ಮನವಿ ಸಲ್ಲಿಸಿದ್ದಾರೆ.ಗ್ರಾಮದಲ್ಲಿ ಅಶಾಂತಿ ವಾತಾವರಣ ನಿರ್ಮಾಣ ಮಾಡಿದ ಗಣಪತಿ ಸಹದೇವ ಕರಂಜೇಕರ ಅವರನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿದ್ದಾರೆ.
ಕೆಸರೊಳ್ಳಿ ಗ್ರಾಮದ ಗಣಪತಿ ಸಹದೇವ ಕರಂಜೇಕರ ತಮ್ಮ ಕುಟುಂಬದ ಪ್ರಭಾವ ಬಳಸಿ ಗ್ರಾಮದ ಅಮಾಯಕರ ಮೇಲೆ ನಿರಂತರ ಹಲ್ಲೆ ನಡೆಸುತ್ತಾ ಬಂದಿರುತ್ತಾರೆ. ಈ ಹಿಂದೆಯೋ ಪೊಲೀಸ್ ಇಲಾಖೆ, ಹೆಸ್ಕಾಂ ಹಾಗೂ ವಿವಿಧ ಸರ್ಕಾರಿ ಇಲಾಖೆಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಇವರ ಕುಟುಂಬದ ಸಹೋದರರ ಮೇಲೆ ಪ್ರಕರಣದ ದಾಖಲಾಗಿದ್ದು, ಗಣಪತಿ ಕರಂಜೇಕರ ಮೇಲೂ ರೌಡಿಶೀಟರ್ ತೆರೆಯಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.ಈ ವೇಳೆ ಕೆಸರೊಳ್ಳಿ ಗ್ರಾಮಸ್ಥರ ಪರವಾಗಿ ಡೊಂಗ್ರು ಕೆಸರೇಕರ, ಡೊಂಗ್ರು ಜುವೇಕರ, ಗಿರಿಜಾರಾಮ ಅಳ್ವಣಕರ, ಮುಸ್ಲಿಂ ಸಮುದಾಯದ ಪ್ರಮುಖ ಮೆಹಬೂಬ ಸುಭಾನಿ ಸನದಿ, ಉಮರಖಾನ್ ಮುಕ್ತೆಸರ್, ಕ್ರೈಸ್ತ ಸಮುದಾಯದ ಪ್ರಮುಖರಾದ ದಿಯೇಗಬಾಳಾ ಪಿಂಟೋ, ಮೇರಿ ರೋಜಾರಿಯೋ, ಕಮಲ ಸಿಕ್ವೇರಾ, ಸಂತಾನ ಸಾವಂತ, ಅನಿಲ ಫರ್ನಾಂಡೀಸ್, ರೋಹನ ಬೃಗಾಂಜಾ, ರೋಖಿ ಕ್ರಾಸ್ತಾ, ಎಪಿಪನ್ ಪಿರೇರಾ ಹಾಗೂ ಇತರರು ಇದ್ದರು.
ಎರಡು ಪ್ರಕರಣ ದಾಖಲು
ಹಳಿಯಾಳ ತಾಲೂಕಿನ ಕೆಸರೊಳ್ಳಿ ಗ್ರಾಮದ ಮೀನಿನ್ ಪಾವಲು ಸೋಜ ಎಂಬವರ ಮೇಲೆ ಹಲ್ಲೆ ನಡೆಸಿದ ಕುರಿತು ಹಳಿಯಾಳ ಠಾಣೆಯಲ್ಲಿ ಗುರುವಾರ ರಾತ್ರಿ ದೂರು ದಾಖಲಾಗಿದೆ. ಗ್ರಾಮದ ಕರಂಜೇಕರ ಸಹೋದರರಾದ ಗಣಪತಿ ಸಹದೇವ ಕರಂಜೇಕರ, ಸತೀಶ ಅಶೋಕ ಕರಂಜೇಕರ, ಶಿವಾಜಿ ಸಹದೇವ ಕರಂಜೇಕರ, ಲೋಕಪ್ಪಾ ಸಹದೇವ ಕರಂಜೇಕರ ಮಾರಣಾಂತಿಕವಾಗಿ ಹಲ್ಲೆಮಾಡಿ ಜೀವಬೆದರಿಕೆ ಒಡ್ಡಿದಾರೆಂದು ಅಂತೋನ ಪಾವ್ಲು ಸೋಜ ಎಂಬವರು ದೂರು ದಾಖಲಿಸಿದ್ದಾರೆ.
ಪ್ರತಿದೂರು: ಕೆಸರೊಳ್ಳಿ ಗ್ರಾಮದಲ್ಲಿನ ಕೆರೆಯ ಕೋಡಿಯ ಮುಚ್ಚುವ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದದಲ್ಲಿ ಮೀನಿನ ಪಾವಲು ಸೋಜ ಹಾಗೂ ಇವರ ಸಹಪಾಠಿಗಳಾದ ಜೋಯಲ್ ಅಂತೋನ್ ಸೋಜ್, ರಾಯಲ್ ಅಂತೋನ್ ಸೋಜ್, ಅಂತೋನ್ ಪಾವಲು ಸೋಜ್ ಸೇರಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆಂದು ಅಶೋಕ ಸಹದೇವ ಕರಂಜೇಕರ ಪ್ರತಿದೂರು ಸಲ್ಲಿಸಿದ್ದಾರೆ. ಹಳಿಯಾಳ ಪಿಎಸ್‌ಐ ಮಹೇಶ ಮಾಳಿ ಎರಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.