ಆಸ್ತಿ ನಗದೀಕರಣ ಸರ್ಕಾರ ದಿವಾಳಿತನಕ್ಕೆ ಸಾಕ್ಷಿ: ಬಸವರಾಜ ಬೊಮ್ಮಾಯಿ

| Published : Jun 19 2024, 01:00 AM IST

ಆಸ್ತಿ ನಗದೀಕರಣ ಸರ್ಕಾರ ದಿವಾಳಿತನಕ್ಕೆ ಸಾಕ್ಷಿ: ಬಸವರಾಜ ಬೊಮ್ಮಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಬಡವರು ಹಾಗೂ ಸಾಮಾನ್ಯ ಜನರ ಮೇಲೆ ಒಂದಾದ ಮೇಲೆ ಒಂದು ಬರೆ ಎಳೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಗದಗ: ಸರ್ಕಾರದ ಆಸ್ತಿ ನಗದೀಕರಣ ಮಾಡಲು ಹೊರಟಿರುವುದು ರಾಜ್ಯ ಸರ್ಕಾರದ ದಿವಾಳಿತನಕ್ಕೆ ಸಾಕ್ಷಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಹಾವೇರಿ, ಗದಗ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.ಅವರು ಮಂಗಳವಾರ ಗದಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಬಡವರು ಹಾಗೂ ಸಾಮಾನ್ಯ ಜನರ ಮೇಲೆ ಒಂದಾದ ಮೇಲೆ ಒಂದು ಬರೆ ಎಳೆಯುತ್ತಿದೆ. ಕಳೆದ ವರ್ಷ ಆಸ್ತಿ ನೋಂದಣಿಯ ಸ್ಟ್ಯಾಂಪ್ ಡ್ಯೂಟಿಯನ್ನು ಹೆಚ್ಚಿಸಿದ್ದು, ಮೋಟರ್ ವೆಹಿಕಲ್ ಟ್ಯಾಕ್ಸ್, ಹಾಲು, ಮದ್ಯದ ದರ ಹೆಚ್ಚಿಸಿ ಹಾಗೂ ಇತ್ತೀಚೆಗೆ ಪೆಟ್ರೋಲ್, ಡೀಸೆಲ್ ದರ ಹೆಚ್ಚಿಸಿ ಬಡವರಿಗೆ ನೇರವಾಗಿ ಬರೆ ಎಳೆದಿದೆ. ಎಲ್ಲ ವರ್ಗದ ಬಡವರ ಹೆಸರಿನಲ್ಲಿ ಆಯ್ಕೆಯಾದ ಕಾಂಗ್ರೆಸ್ ಅವರಿಗೇ ದ್ರೋಹ ಮಾಡಿದೆ. ಈಗ ಅದೆಲ್ಲ ಸಾಲದೆಂಬಂತೆ ಆಸ್ತಿ ನಗದೀಕರಣ ಮಾಡಲು ಹೊರಟಿರುವುದು ಕಾಂಗ್ರೆಸ್ ಸರ್ಕಾರ ಸಂಪೂರ್ಣ ದಿವಾಳಿಯಾಗಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.ಒಂದು ಕುಟುಂಬ ಆರ್ಥಿಕ ಸಂಕಷ್ಟದಲ್ಲಿದ್ದಾಗ ಅದು ಕೊನೆಯದಾಗಿ ಪಿತ್ರಾರ್ಜಿತ ಆಸ್ತಿ ಮಾರುವುದನ್ನು ನಾವು ನೋಡಿದ್ದೇವೆ. ಅದೇ ರೀತಿ ಈ ಸರ್ಕಾರ ಕೊನೆಯ ಹಂತ ತಲುಪಿದೆ. ರಾಜ್ಯದ ಸಾವಿರಾರು ವರ್ಷದ ಆಸ್ತಿಯನ್ನು ಮಾರಲು ಮತ್ತು ನಗದೀಕರಣ ಮಾಡಲು ಹೊರಟಿರುವುದು ರಾಜ್ಯವನ್ನು ಹಣಕಾಸಿನ ದುರ್ಗತಿಗೆ ತೆಗೆದುಕೊಂಡು ಹೋಗಿರುವುದು ಸಾಕ್ಷಿ. ಈ ರೀತಿಯ ಕ್ರಮಗಳನ್ನು ಹಿಂದಿನ ಯಾವುದೇ ಸರ್ಕಾರಗಳು ತೆಗೆದುಕೊಂಡಿರಲಿಲ್ಲ. ಇದೊಂದು ದೊಡ್ಡ ಅಪರಾಧ ಎಂದರೆ ತಪ್ಪಾಗಲಾರದು ಎಂದು ಬೊಮ್ಮಾಯಿ ಹೇಳಿದರು.

ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹೇಳುವ ಪ್ರಕಾರ ಆಸ್ತಿಯನ್ನು ಖಾಸಗಿ ಸಹಭಾಗಿತ್ವದಲ್ಲಿ ನಗದೀಕರಣ ಮಾಡುವುದರ ಹಿಂದೆ ರಿಯಲ್ ಎಸ್ಟೇಟ್ ಕುಳಗಳಿಗೆ ಸಾವಿರಾರು ಕೋಟಿ ರು. ಲಾಭ ಮಾಡಿಕೊಡುವ ಹುನ್ನಾರ ಇದೆ ಮತ್ತು ಇದರಲ್ಲಿ ಸರ್ಕಾರ ಸಾವಿರಾರು ಕೋಟಿ ಭ್ರಷ್ಟಾಚಾರದ ಡೀಲನ್ನು ಮಾಡಿಕೊಳ್ಳುವ ಹುನ್ನಾರವೂ ಕಾಣಿಸುತ್ತದೆ. ಮುಖ್ಯಮಂತ್ರಿಗಳು ಏನೇ ಹೇಳಿದರೂ ರಾಜ್ಯದ ಆರ್ಥಿಕ ಸ್ಥಿತಿಯ ಬಗ್ಗೆ ಸತ್ಯ ಮುಚ್ಚಿಡಲು ಸಾಧ್ಯವಿಲ್ಲ. ಇಂತಹ ಗಂಭೀರ ಪರಿಸ್ಥಿತಿಯಲ್ಲೂ ಡೀಲ್ ಮಾಡಲು ಹೊರಟಿರುವ ರಾಜ್ಯ ಸರ್ಕಾರ ರಾಜ್ಯ ದ್ರೋಹ ಹಾಗೂ ಜನದ್ರೋಹ ಮಾಡುತ್ತಿದೆ. ಇದರ ವಿರುದ್ಧ ಬಿಜೆಪಿ ಜನಾಂದೋಲನ ಅತ್ಯಂತ ಅವಶ್ಯ ಮತ್ತು ಅನಿವಾರ್ಯವಾಗಿ ಮಾಡುತ್ತದೆ ಎಂದು ಅವರು ಹೇಳಿದರು.ಈಗಾಗಲೇ ಬಜೆಟ್‌ನಲ್ಲಿ ₹1.05 ಲಕ್ಷ ಕೋಟಿ ಸಾಲವನ್ನು ರಾಜ್ಯ ಸರ್ಕಾರ ಪಡೆದುಕೊಳ್ಳುತ್ತಿದೆ. ₹20 ಸಾವಿರ‌ ಕೋಟಿ ಹೊಸ ತೆರಿಗೆಯ ಭಾರವನ್ನು ರಾಜ್ಯದ ಬಡ ಜನತೆಯ ಮೇಲೆ ಹೇರುತ್ತಿದೆ. ಈ ಎಲ್ಲದರ ಬಗ್ಗೆಯೂ ಸಂಪೂರ್ಣ ವಿವರಗಳನ್ನು ಮುಖ್ಯಮಂತ್ರಿ ಜನರಿಗೆ ಕೊಡಬೇಕು ಎಂದು ಆಗ್ರಹಿಸಿದರು.

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 15 ಬಜೆಟ್ ಮಂಡನೆ ಮಾಡಿರುವ ಆರ್ಥಿಕ ತಜ್ಞರೆಂದು ಹೇಳಿಕೊಂಡಿದ್ದಾರೆ. ಇಬ್ಬರು ಆರ್ಥಿಕ ಸಲಹೆಗಾರರನ್ನು ತೆಗೆದುಕೊಂಡಿದ್ದಾರೆ. ಆದರೆ, ಅವರಿಗೂ ಯಾವುದೇ ಕವಡೆ ಕಾಸಿನ ಕಿಮ್ಮತ್ತಿಲ್ಲ. ಬಾಸ್ಟನ್ ಎಂಬ ಸಂಸ್ಥೆಯಿಂದ ಆರ್ಥಿಕ ಸಲಹೆ ಪಡೆಯುವ ದಡ್ಡತನ ಮಾಡಿ ಈ ಥರದ ಕ್ರಮ ತೆಗೆದುಕೊಳ್ಳಲು ಮುಂದಾಗಿರುವ ಸರ್ಕಾರ ಈ ಹಂತದಲ್ಲೇ ಒಪ್ಪಂದ ರದ್ದು ಪಡಿಸಲು ಆಗ್ರಹಿಸುತ್ತೇನೆ ಎಂದರು.

ಬಸವರಾಜ ಬೊಮ್ಮಾಯಿಗೆ ಸ್ವಾಗತ:

ಹಾವೇರಿ-ಗದಗ ಸಂಸದರಾದ ಆನಂತರ ಮಂಗಳವಾರ ಪ್ರಥಮ ಬಾರಿಗೆ ಗದಗ ನಗರಕ್ಕೆ ಆಗಮಿಸಿ ಸಂಸದ ಬಸವರಾಜ ಬೊಮ್ಮಾಯಿ ಅವರನ್ನು ಜಿಲ್ಲಾ ಬಿಜೆಪಿ ವತಿಯಿಂದ ಆತ್ಮೀಯವಾಗಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಸಚಿವ, ನರಗುಂದ ಶಾಸಕ ಸಿ.ಸಿ. ಪಾಟೀಲ, ಜಿಲ್ಲಾ ಬಿಜೆಪಿ ಅಧ್ಯಕ್ಷ ತೋಟಪ್ಪ (ರಾಜು) ಕುರುಡಗಿ, ಮಾಜಿ ಜಿಲ್ಲಾಧ್ಯಕ್ಷ ಮೋಹನ ಮಾಳಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ, ಅಶೋಕ ಸಂಕಣ್ಣವರ, ಬಸವರಾಜ ಕೊರ್ಲಹಳ್ಳಿ, ನಾಗರಾಜ ಕುಲಕರ್ಣಿ, ಅನಿಲ ಅಬ್ಬಿಗೇರಿ, ಗಂಗಾಧರ ಹಬೀಬ, ಬೂದಪ್ಪ ಹಳ್ಳಿ, ಮುತ್ತಣ್ಣ ಮೂಲಿಮನಿ, ಸಂತೋಷ ಮೇಲಗಿರಿ, ರಮೇಶ ಸಜ್ಜಗಾರ, ಮಂಜುನಾಥ ಶಾಂತಗೇರಿ, ಉಮೇಶ ಹಡಪದ, ಜಯಶ್ರೀ ಉಗಲಾಟದ, ಶಾರದಾ ಸಜ್ಜನ, ಅಶ್ವಿನಿ ಜಗತಾಪ, ರೇಖಾ ಬಂಗಾರಶೆಟ್ಟರ, ವಂದನಾ ವೆರ್ಣೇಕರ, ರಾಜು ಹೊಂಗಲ, ಕೆ.ಪಿ. ಕೊಟಿಗೌಡ್ರ, ರತ್ನಾ ಕುರಗೊಡ, ಅಕ್ಕಮ್ಮ ವಸ್ತ್ರದ, ಯೋಗೇಶ್ವರಿ ಭಾವಿಕಟ್ಟಿ, ಸುಮಂಗಲಾ ಕೊನೆವಾಲ, ತಕ್ಕಲಕೋಟಿ, ಶೇಖಮ್ಮ ಮಾಸರೆಡ್ಡಿ, ಕಿರಣ ಕಲಾಲ, ಸಿದ್ರಾಮೇಶ ಹಿರೇಮಠ, ಹನುಮಂತಪ್ಪ ದಿಂಡೆಣ್ಣವರ, ವಿಶ್ವನಾಥ ಶಿರಿಗಣ್ಣವರ, ವಿನೋದ ಹಂಸನೂರ ಹಾಜರಿದ್ದರು.