ಮೂವರು ಕಳ್ಳರ ಬಂಧನ: ₹7.30 ಲಕ್ಷ ಸ್ವತ್ತು ಜಪ್ತಿ

| Published : May 23 2025, 12:02 AM IST

ಸಾರಾಂಶ

ಟೈಲ್ಸ್‌ ಕೆಲಸಕ್ಕೆ ಬೇರೆ ಜಿಲ್ಲೆಗೆ ಹೋಗಿದ್ದ ವ್ಯಕ್ತಿಯ ಮನೆಯಲ್ಲಿ ಚಿನ್ನಾಭರಣ, ಬೆಳ್ಳಿ ವಸ್ತುಗಳನ್ನು ಕಳವು ಮಾಡಿದ್ದ ಮೂವರು ಆರೋಪಿಗಳನ್ನು ಬಂಧಿಸಿ, ಒಟ್ಟು ₹7.30 ಲಕ್ಷ ಮೌಲ್ಯದ ಸ್ವತ್ತನ್ನು ವಿದ್ಯಾನಗರ ಪೊಲೀಸರು ಜಪ್ತಿ ಮಾಡಿದ್ದಾರೆ.

ದಾವಣಗೆರೆ: ಟೈಲ್ಸ್‌ ಕೆಲಸಕ್ಕೆ ಬೇರೆ ಜಿಲ್ಲೆಗೆ ಹೋಗಿದ್ದ ವ್ಯಕ್ತಿಯ ಮನೆಯಲ್ಲಿ ಚಿನ್ನಾಭರಣ, ಬೆಳ್ಳಿ ವಸ್ತುಗಳನ್ನು ಕಳವು ಮಾಡಿದ್ದ ಮೂವರು ಆರೋಪಿಗಳನ್ನು ಬಂಧಿಸಿ, ಒಟ್ಟು ₹7.30 ಲಕ್ಷ ಮೌಲ್ಯದ ಸ್ವತ್ತನ್ನು ವಿದ್ಯಾನಗರ ಪೊಲೀಸರು ಜಪ್ತಿ ಮಾಡಿದ್ದಾರೆ.

ಶಾಂತಿ ನಗರದ ಪ್ರದೀಪ ಅಲಿಯಾಸ್ ಕರಿಯಾ (29), ಎಸ್.ನಿಜಲಿಂಗಪ್ಪ ಬಡಾವಣೆ ವಾಸಿ ಮಣಿಕಂಠ (28) ಹಾಗೂ ಯಲ್ಲಮ್ಮ ನಗರದ ಎನ್.ಸಂಜಯ್ (23) ಬಂಧಿತ ಆರೋಪಿಗಳು. ಮಹಾಂತೇಶ ಈರಣ್ಣ ಎಂಬವರು ಏ.29ರಂದು ಟೈಲ್ಸ್ ಕೆಲಸಕ್ಕೆಂದು ಹಿರಿಯೂರಿನ ಸಮಗ್ರಹಳ್ಳಿ ಗ್ರಾಮಕ್ಕೆ ಹೋಗಿದ್ದರು. ವಾಪಸ್‌ ಬಂದ ನಂತರ ಮನೆಯಲ್ಲಿದ್ದ ಬಟ್ಟೆ, ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿದ್ದವು. 35 ಗ್ರಾಂ ತೂಕದ ಚಿನ್ನಾಭರಣ ಕಳುವಾದ ಬಗ್ಗೆ ದೂರು ನೀಡಿದ್ದರು.

ವಿದ್ಯಾನಗರ ಠಾಣೆ ಇನ್‌ಸ್ಪೆಕ್ಟರ್‌ ವೈ.ಎಸ್.ಶಿಲ್ಪ ನೇತೃತ್ವದ ಅಧಿಕಾರಿ, ಸಿಬ್ಬಂದಿ ತಂಡ ಆರೋಪಿಗಳಾದ ಪ್ರದೀಪ ಅಲಿಯಾಸ್ ಕರಿಯ, ಮಣಿಕಂಠ ಹಾಗೂ ಎನ್.ಸಂಜಯನನ್ನು ಮೇ 19ರಂದು ಬಂಧಿಸಿ, ವಿದ್ಯಾನಗರ ಠಾಣೆ, ಕೆಟಿಜೆ ನಗರ ಠಾಣೆ ವ್ಯಾಪ್ತಿಯ ಕಳ್ಳತನ ಪ್ರಕರಣ ಪತ್ತೆ ಹಚ್ಚಿ, ಚಿನ್ನಾಭರಣ, ಬೆಳ್ಳಿ ಆಭರಣ, ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಕೆಟಿಜೆ ನಗರ ಠಾಣೆ ಕೇಸ್‌ಗೆ ಸಂಬಂಧಿಸಿದಂತೆ ತಲೆಮರೆಸಿಕೊಂಡ ಇನ್ನೂ ಇಬ್ಬರಿಗಾಗಿ ಪೊಲೀಸರು ಶೋಧ ಕೈಗೊಂಡಿದ್ದಾರೆ.

ಒಟ್ಟು 3 ಪ್ರಕರಣಗಳಿಗೆ ಸಂಬಂಧಿಸಿದಂತೆ ₹7 ಲಕ್ಷ ಮೌಲ್ಯದ 87 ಗ್ರಾಂ ಚಿನ್ನಾಭರಣ, ₹30 ಸಾವಿರ ಮೌಲ್ಯದ 404 ಗ್ರಾಂ ಬೆಳ್ಳಿ ಆಭರಣ ಜಪ್ತಿ ಮಾಡಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ ತಂಡದ ಅಧಿಕಾರಿ-ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ.

- - -

-21ಕೆಡಿವಿಜಿ10:

ದಾವಣಗೆರೆ ವಿದ್ಯಾನಗರ ಠಾಣೆ ಪೊಲೀಸ್‌ ಅಧಿಕಾರಿ-ಸಿಬ್ಬಂದಿ ಮೂವರು ಮನೆಗಳ್ಳರನ್ನು ಬಂಧಿಸಿ, ₹7.30 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ಆಭರಣ ಜಪ್ತಿ ಮಾಡಿದ್ದಾರೆ.