ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿಯಲ್ಲಿ ಆಯೋಜಿಸುವ ಮರಾಠಿ ಸಾಹಿತ್ಯ ಸಮ್ಮೇಳನಕ್ಕೆ ಮಹಾರಾಷ್ಟ್ರ ಸರ್ಕಾರದಿಂದ ನೆರವು ನೀಡಲಾಗವುದು ಎಂದು ಹೇಳುವ ಮೂಲಕ ಚಂದಗಡ ಶಾಸಕ ರಾಜೇಶ್ ಪಾಟೀಲ ಉದ್ದಟತನ ಪ್ರದರ್ಶಿಸಿದ್ದಾರೆ.ಬೆಳಗಾವಿ ತಾಲೂಕಿನ ಉಚಗಾಂವ ಗ್ರಾಮದಲ್ಲಿ ಭಾನುವಾರ ನಡೆದ 22ನೇ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಮರಾಠಿ ಸಾಹಿತ್ಯ ಸಮಾವೇಶದ ಮೂಲಕ ಮರಾಠಿ ಭಾಷೆಯ ಸಂರಕ್ಷಣೆ, ಪ್ರಸಾರ ಮಾಡಲಾಗುತ್ತಿದೆ. ಪ್ರತಿಯೊಬ್ಬರಿಗೂ ಅವರವರ ಜಾತಿ, ಧರ್ಮದ ಹಾಗೂ ಭಾಷೆಯ ಬಗ್ಗೆ ಅಭಿಮಾನ ಇರಬೇಕಾಗಿದೆ. ಭಾಷೆಯನ್ನು ಉಳಿಸಲು ಮತ್ತು ವಿಸ್ತರಿಸಲು ಇಂತಹ ಸಾಹಿತ್ಯ ಸಭೆಗಳು ನಡೆಯುತ್ತವೆ. ಹೊಸ ಯುವ ಪೀಳಿಗೆ ಉತ್ತಮ ಚಿಂತನೆಗಳನ್ನು ಮಾಡಲು ಇಂತಹ ಕಾರ್ಯಕ್ರಮಗಳು ಅಗತ್ಯ. ಈ ಪ್ರದೇಶದ ಅಗತ್ಯವನ್ನು ಅರಿತು ಮಹಾರಾಷ್ಟ್ರ ಸರ್ಕಾರವು ಶಿನೋಳಿಯಂತಹ ಸ್ಥಳದಲ್ಲಿ ಶಿವಾಜಿ ವಿಶ್ವವಿದ್ಯಾಲಯದ ಉಪಕೇಂದ್ರವನ್ನು ಪ್ರಾರಂಭಿಸಿದೆ. ಬೆಳಗಾವಿ ಹಾಗೂ ಖಾನಾಪುರ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮರಾಠಿ ಸಾಹಿತ್ಯ ಸಮ್ಮೇಳನಕ್ಕೆ ಮಹಾರಾಷ್ಟ್ರ ಸರ್ಕಾರದಿಂದ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.ಇದಕ್ಕೂ ಮೊದಲು ಬೆಳಗಾವಿಯಲ್ಲಿರುವ ಮರಾಠಿಗರಿಗೆ ಆರೋಗ್ಯ ವಿಮೆ ಕಾರ್ಡ್ ವಿತರಿಸುವ ಕಾರ್ಯಕ್ಕೆ ಮುಂದಾಗಿತ್ತು. ಈ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾಡಳಿತ ಕಾರ್ಡ್ ನೋಂದಣಿ ಕೇಂದ್ರಗಳನ್ನು ಸ್ಥಗಿತಗೊಳಿಸುವ ಮೂಲಕ ಬಿಸಿ ಮುಟ್ಟಿಸಿತ್ತು. ಆದರೂ ಮಾರಾಠಿ ಜನಪ್ರತಿನಿಧಿಗಳು ಉದ್ದಟತನ ಹೇಳಿಕೆ ನೀಡುವ ಮೂಲಕ ಗಡಿಭಾಗದಲ್ಲಿರುವ ಮರಾಠಿಗರನ್ನು ಪ್ರಚೋದಿಸುವ ಕಾರ್ಯಕ್ಕೆ ಕೈ ಹಾಕಿದ್ದಾರೆ.