ಸಾರಾಂಶ
ಕನ್ನಡಪ್ರಭವಾರ್ತೆ ಚಿತ್ರದುರ್ಗಜಿಲ್ಲೆಯ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದು ಆಶಾ ಕಿರಣ ಸಂಸ್ಥೆ ಗುರಿಯಾಗಿದೆ. ಸಹಾಯ ಪಡೆದವರು ಮುಂದಿನ ದಿನದಲ್ಲಿ ಬೇರೆಯವರಿಗೆ ನೆರವಾಗುವ ಮೂಲಕ ಸಮಾಜದ ಋಣ ತೀರಿಸಿ ಎಂದು ಆಶಾಕಿರಣ ಸಂಸ್ಥೆ ಅಧ್ಯಕ್ಷ ಗಿರೀಶ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಚಿತ್ರದುರ್ಗ ನಗರದ ಎಸ್ಆರ್ ಬಿಎಂಎಸ್ ರೋಟರಿ ಬಾಲಭವನದಲ್ಲಿ ಆಶಾಕಿರಣ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಸೌಲಭ್ಯ ವಿತರಿಸಿ ಮಾತನಾಡಿದರು.ಆಶಾಕಿರಣ ನಗರದ 13 ಜನ ಸೇರಿ ನಿರ್ಮಾಣ ಮಾಡಿದ ಸಂಸ್ಥೆ. ಸಹಾಯ ಪಡೆದ ಈ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಉದ್ದೇಶದಿಂದ ಸಂಸ್ಥೆ ಹುಟ್ಟು ಹಾಕಿದ್ದೇವೆ. ಜಿಲ್ಲೆಯ ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರು ಪದವಿ ಪಡೆಯುವವರೆಗೂ ಆರ್ಥಿಕ ಸಹಾಯ ಮಾಡಲಾಗುವುದು. ಇದುವರೆವೆಗೂ ಸುಮಾರು 800 ವಿದ್ಯಾರ್ಥಿಗಳ ಶಿಕ್ಷಣಕ್ಕೆ ಊರುಗೋಲು ಆಗಿದ್ದೇವೆ ಎಂದರು.
ಎಸ್ಎಸ್ಎಲ್ ಸಿ ಮುಗಿದ ನಂತರ ಹಲವಾರು ವಿದ್ಯಾರ್ಥಿಗಳಿಗೆ ಓದಲು ಆರ್ಥಿಕ ನೆರವಿಲ್ಲದೆ ಕಷ್ಟ ಪಡುತ್ತಾರೆ. ಇಂತಹವರನ್ನು ಗುರುತಿಸಿ ಅವರಿಗೆ ಸಹಾಯ ಮಾಡಲಾಗುತ್ತದೆ. ಯಾವುದೇ ಜಾತಿ, ಧರ್ಮ, ಲಿಂಗ ಬೇಧ, ಜನಾಂಗದ ಲೆಕ್ಕಾಚಾರ ಇಲ್ಲದೆ ಅರ್ಜಿ ಸಲ್ಲಿಸಿದವರ ಅರ್ಥಿಕ ಪರಿಸ್ಥಿತಿ ಪರಿಶೀಲಿಸಿ ಸಹಾಯಧನ ನೀಡಲಾಗುವುದು ಎಂದು ತಿಳಿಸಿದರು.ಪರೀಕ್ಷೆಯಲ್ಲಿ ಶೇ.70 ರಷ್ಟು ಫಲಿತಾಂಶ ಬಂದರೆ ಮಾತ್ರ, ಮುಂದಿನ ವರ್ಷದ ಸಹಾಯಧನ ಪಡೆಯಲು ಅರ್ಹರಿರುತ್ತಾರೆ. ಇದಲ್ಲದೇ ವಿದ್ಯಾರ್ಥಿಗಳಿಗೆ ವರ್ಷಕ್ಕೊಮ್ಮೆ ಬಿಡ್ಜ್ ಕೋರ್ಸ್ ಹಮ್ಮಿಕೊಳ್ಳಲಾಗುವುದು. ಇದರಲ್ಲಿ ವಿದ್ಯಾರ್ಥಿಗಳಿಗೆ ಉಪಯಕ್ತವಾಗುವ ಸಂಪನ್ಮೂಲ ವ್ಯಕ್ತಿಗಳನ್ನು ಕರೆಯಿಸಿ 4 ದಿನಗಳ ಕಾಲ ವಸತಿ ಸಹಿತ ತರಬೇತಿ ನೀಡುವುದರ ಮೂಲಕ ಆತ್ಮ ವಿಶ್ವಾಸ ಮೂಡಿಸಲಾಗುವುದೆಂದರು.ಆಶಾಕಿರಣ ಸಂಸ್ಥೆಯ ನಿರ್ದೇಶಕ ಮಹೇಶ್ ಮಾತನಾಡಿ, ಸಂಸ್ಥೆ ಸ್ಥಾಪನೆಯಲ್ಲಿ ಯಾವುದೇ ನಿರ್ದೇಶಕರ ಸ್ವಾರ್ಥ ಇಲ್ಲ. ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಪ್ರಗತಿಗೆ ಸಹಾಯವನ್ನು ಮಾಡುವ ಉದ್ದೇಶದಿಂದ ಕಳೆದ 13 ವರ್ಷದಿಂದ ಈ ಕೆಲಸ ಮಾಡಲಾಗುತ್ತಿದೆ. ನಾವು ಕೊಡುವ ಹಣಕಾಸು ನೆರವು ಸರಿಯಾದ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.ಸಂಸ್ಥೆ ಮತ್ತೋರ್ವ ನಿರ್ದೆಶಕ ಮಧು ಪ್ರಸಾದ್ ಮಾತನಾಡಿ, ಸಂಸ್ಥೆ ಚೆನ್ನಾಗಿ ಓದುವವರಿಗೆ ಸಹಾಯ ಮಾಡುವುದರ ಮೂಲಕ ಪ್ರೋತ್ಸಾಹ ನೀಡಲಿದೆ. ವಿದ್ಯಾರ್ಥಿಗಳು ಸಮಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಅನಾವಶ್ಯಕವಾಗಿ ಕಾಲಹರಣ ಮಾಡದೆ ತಮ್ಮ ಪಾಲಿನ ಕರ್ತವ್ಯವನ್ನು ಜವಾಬ್ದಾರಿಯುತವಾಗಿ ನಿಭಾಯಿಸಿ, ಶೈಕ್ಷಣಿಕ ಉನ್ನತಿ ಸಾಧಿಸುವಂತೆ ಮನವಿ ಮಾಡಿದರು.
ಮೃಣಾಲಿನಿ, ಎಂ.ಪಿ. ಗುರುರಾಜ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಎಸ್ಎಸ್ಎಲ್ ಸಿಯಿಂದ ಪದವಿಯವರೆಗೂ ಸುಮಾರು 65 ವಿದ್ಯಾರ್ಥಿಗಳಿಗೆ 8 ಲಕ್ಷ ಶೈಕ್ಷಣಿಕ ಅರ್ಥಿಕ ನೆರವು ನೀಡಲಾಯಿತು.ಆಶಾಕಿರಣ ಸಂಸ್ಥೆಯ ನಿರ್ದೇಶಕರಾದ ಕೇಶವಮೂರ್ತಿ, ಪ್ರವೀಣ್, ಪ್ರಸನ್ನ ಕುಮಾರ್, ನಾಗರಾಜ್, ರವಿಶಂಕರ್, ಹೇಮಂತ ರೆಡ್ಡಿ, ರಮೇಶ್, ಭಾನುಕಿರಣ್, ದಿವಾಕರ, ಸಿದ್ದಾರ್ಥ್, ವೆಂಕಟೇಶ್ ಉಪಸ್ಥಿತರಿದ್ದರು. ಮಾಧುರಿ ಮಧು ಪ್ರಸಾದ್ ಪ್ರಾರ್ಥಿಸಿದರು. ಮಹೇಶ್ ಸ್ವಾಗತಿಸಿದರು.