ಮಕ್ಕಳನ್ನೇ ಜೊಡೆತ್ತು ಮಾಡಿಕೊಂಡು ಎಡೆಕುಂಟೆ ಹೊಡೆದಿದ್ದ ರಾಣಿಬೆನ್ನೂರು ತಾಲೂಕಿನ ವೆಂಕಟಾಪುರ ತಾಂಡಾದ ರೈತನ ಸಂಕಷ್ಟಕ್ಕೆ ಜಿಲ್ಲಾಡಳಿತ ಸ್ಪಂದಿಸಿದೆ. ಸರ್ಕಾರದ ಸಬ್ಸಿಡಿ ಯೋಜನೆಯಡಿ ಬಡ ರೈತನಿಗೆ ಕಳೆ ತೆಗೆಯುವ ರೋಟರ್‌ ವೀಡರ್‌ ನೀಡುವ ಮೂಲಕ ನೆರವಿಗೆ ಬಂದಿದೆ.

ಹಾವೇರಿ: ಮಕ್ಕಳನ್ನೇ ಜೊಡೆತ್ತು ಮಾಡಿಕೊಂಡು ಎಡೆಕುಂಟೆ ಹೊಡೆದಿದ್ದ ರಾಣಿಬೆನ್ನೂರು ತಾಲೂಕಿನ ವೆಂಕಟಾಪುರ ತಾಂಡಾದ ರೈತನ ಸಂಕಷ್ಟಕ್ಕೆ ಜಿಲ್ಲಾಡಳಿತ ಸ್ಪಂದಿಸಿದೆ. ಸರ್ಕಾರದ ಸಬ್ಸಿಡಿ ಯೋಜನೆಯಡಿ ಬಡ ರೈತನಿಗೆ ಕಳೆ ತೆಗೆಯುವ ರೋಟರ್‌ ವೀಡರ್‌ ನೀಡುವ ಮೂಲಕ ನೆರವಿಗೆ ಬಂದಿದೆ.ವೆಂಕಟಾಪುರ ತಾಂಡಾದ ರೈತ ಶಂಕರಪ್ಪ ಲಮಾಣಿ ಎಂಬ ರೈತ ಎಲೆಕೋಸು ಬೆಳೆಯ ಮಧ್ಯೆ ಬೆಳೆದ ಕಳೆ ನಾಶಮಾಡಲು ಎತ್ತುಗಳ ಕೊರೆತೆಯಿಂದಾಗಿ ತನ್ನ ಇಬ್ಬರು ಮಕ್ಕಳನ್ನೇ ಜೋಡೆತ್ತುಗಳಾಗಿ ಮಾಡಿಕೊಂಡು ಎಡೆಕುಂಟೆ ಹೊಡೆದಿದ್ದ. ಈ ವಿಡಿಯೋ ವೈರಲ್‌ ಆಗಿತ್ತು. ಈ ಹಿನ್ನೆಲೆಯಲ್ಲಿ ಬುಧವಾರ ರೈತನನ್ನು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಭೇಟಿ ಮಾಡಿ ನೆರವಿನ ಭರವಸೆ ನೀಡಿದ್ದರು.ಕೃಷಿ ಇಲಾಖೆಯ ಕೃಷಿ ಯಾಂತ್ರೀಕರಣ ಯೋಜನೆ ಅಡಿಯಲ್ಲಿ 48 ಸಾವಿರ ರು. ಮೊತ್ತದ ಕಳೆ ಹೊಡೆಯುವ ರೋಟರ್‌ ವೀಡರ್‌ ಯಂತ್ರವನ್ನು ಶುಕ್ರವಾರ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿಗಳು ರೈತನಿಗೆ ಹಸ್ತಾಂತರಿಸಿದರು. ಮಕ್ಕಳನ್ನು ಈ ರೀತಿ ಕೆಲಸಕ್ಕೆ ಬಳಸಿಕೊಳ್ಳುವುದನ್ನು ಯಾರೂ ಮಾಡಬಾರದು. ಮಕ್ಕಳ ಭವಿಷ್ಯವನ್ನು ನಾವೇ ಹಾಳು ಮಾಡಿದಂತಾಗುತ್ತದೆ. ನಿಮ್ಮ ಸಂಕಷ್ಟ ಅರಿತು ರೋಟರ್‌ ವೀಡರ್‌ ಯಂತ್ರವನ್ನು ನೀಡಲಾಗುತ್ತಿದೆ. ಇದನ್ನು ಉಪಯೋಗಿಸಿಕೊಂಡು ಕೃಷಿ ಕೆಲಸ ಮಾಡಿ. ಜತೆಗೆ, ಗ್ರಾಮದಲ್ಲಿ ಅಗತ್ಯ ಇರುವವರಿಗೆ ಬಾಡಿಗೆ ನೀಡುವುದರಿಂದ ಇಬ್ಬರಿಗೂ ಅನುಕೂಲವಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಹೇಳಿದರು. ಜಂಟಿ ಕೃಷಿ ನಿರ್ದೇಶಕ ಮಲ್ಲಿಕಾರ್ಜುನ ಕೆ., ಇತರರು ಇದ್ದರು.