ಕನ್ನಡಪ್ರಭ ವಾರ್ತೆ ಹಾಸನರೈತರಿಗೆ ಕೃಷಿ ಕಾರ್ಯಗಳನ್ನು ಸುಲಭಗೊಳಿಸಲು ಹಾಗೂ ಕಾರ್ಮಿಕರ ಕೊರತೆಯನ್ನು ನಿವಾರಿಸಲು ಸರ್ಕಾರ ಜಾರಿಗೆ ತಂದಿರುವ ಹೈಟೆಕ್ ಹಾರ್ವೆಸ್ಟರ್ ಹಬ್ ಯೋಜನೆಯಡಿ ಶುಗರ್‌ಕೇನ್ ಹಾರ್ವೆಸ್ಟರ್ ಮತ್ತು ಇಂಟರ್ ರೋ ರೋಟಾವೇಟರ್ ಯಂತ್ರೋಪಕರಣಗಳನ್ನು ರೈತರಿಗೆ ಸಹಾಯಧನದಡಿ ಒದಗಿಸಲಾಗಿದೆ. ನಗರದ ಸಂತೇಪೇಟೆ ವೃತ್ತದ ಬಳಿ ಇರುವ ಕೃಷಿ ಇಲಾಖೆಯ ಆವರಣದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಯಂತ್ರೋಪಕರಣಗಳಿಗೆ ಚಾಲನೆ ನೀಡಿ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ೨೦೨೫-೨೬ನೇ ಸಾಲಿನ ಹೈಟೆಕ್ ಹಾರ್ವೆಸ್ಟರ್ ಹಬ್ ಯೋಜನೆಯಡಿ ಕೃಷಿ ಇಲಾಖೆಯ ಮಾರ್ಗಸೂಚಿಯಂತೆ ವೈಯಕ್ತಿಕ ಸಾಮಾನ್ಯ ಘಟಕ ವರ್ಗದಲ್ಲಿ ರೈತರಿಗೆ ಆಧುನಿಕ ಕೃಷಿ ಯಂತ್ರೋಪಕರಣಗಳನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು. ತಮ್ಮ ವಿಧಾನಸಭಾ ಕ್ಷೇತ್ರದ ಬೋಗರಹಳ್ಳಿ ಕೊಪ್ಪಲು ಹಾಗೂ ಸುತ್ತಮುತ್ತಲಿನ ಪ್ರದೇಶದ ರೈತರಿಗೆ ಈ ಯೋಜನೆಯಿಂದ ಹೆಚ್ಚಿನ ಅನುಕೂಲವಾಗಲಿದೆ. ಈ ಯಂತ್ರೋಪಕರಣಗಳಿಗಾಗಿ ಸರ್ಕಾರದಿಂದ ಸುಮಾರು ೩೭ ಲಕ್ಷ ರುಪಾಯಿಯಾಗಿದ್ದು, ಸಬ್ಸಿಡಿ ದೊರೆಯುತ್ತಿದೆ ಎಂದು ಅವರು ಹೇಳಿದರು. ಶುಗರ್ ಕೇನ್ ಹಾರ್ವೆಸ್ಟರ್ ಯಂತ್ರವು ಒಂದು ದಿನಕ್ಕೆ ಸುಮಾರು ೬೦ ಟನ್ ಕಬ್ಬನ್ನು ಕತ್ತರಿಸಿ ನೇರವಾಗಿ ಲಾರಿಗೆ ಲೋಡ್ ಮಾಡುವ ಸಾಮರ್ಥ್ಯ ಹೊಂದಿದೆ. ಇದರಿಂದ ರೈತರಿಗೆ ಸಮಯ ಮತ್ತು ಕಾರ್ಮಿಕ ವೆಚ್ಚ ಎರಡನ್ನೂ ಕಡಿಮೆ ಮಾಡಬಹುದು. ಇತ್ತೀಚಿನ ದಿನಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಕಾರ್ಮಿಕರ ಕೊರತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂತಹ ಆಧುನಿಕ ಯಂತ್ರೋಪಕರಣಗಳ ಬಳಕೆ ಬಹಳ ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.ಕಬ್ಬು ಬೆಳೆಗಾರರಿಗೆ ಈ ಯಂತ್ರೋಪಕರಣಗಳು ಬಹಳ ಉಪಯುಕ್ತವಾಗಲಿದ್ದು, ಕಬ್ಬು ಕಟಾವು ಕಾರ್ಯವನ್ನು ವೇಗವಾಗಿ ಮತ್ತು ಸುಲಭವಾಗಿ ನೆರವೇರಿಸಲು ಸಹಾಯ ಮಾಡುತ್ತದೆ. ವಿಶೇಷವಾಗಿ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಕೆ ಮಾಡುವ ರೈತರಿಗೆ ಇದು ದೊಡ್ಡಮಟ್ಟದಲ್ಲಿ ಸಹಕಾರಿಯಾಗಲಿದೆ. ಪ್ರತಿ ಸಕ್ಕರೆ ಕಾರ್ಖಾನೆ ವ್ಯಾಪ್ತಿಯಲ್ಲಿಯೂ ಇಂತಹ ಹಾರ್ವೆಸ್ಟರ್ ಯಂತ್ರಗಳನ್ನು ಒದಗಿಸಿದರೆ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ಹೇಳಿದರು. ಕೃಷಿ ಇಲಾಖೆಯ ಅಧಿಕಾರಿಗಳು ತಮ್ಮ ಕ್ಷೇತ್ರದ ರೈತರ ಅನುಕೂಲಕ್ಕಾಗಿ ಈ ಯಂತ್ರೋಪಕರಣಗಳನ್ನು ಒದಗಿಸಿರುವುದು ಸಂತೋಷದ ಸಂಗತಿ. ಮುಂದಿನ ದಿನಗಳಲ್ಲೂ ರೈತರಿಗೆ ಅಗತ್ಯವಾದ ಆಧುನಿಕ ಕೃಷಿ ಉಪಕರಣಗಳನ್ನು ಸಹಾಯಧನದಡಿ ನೀಡುವ ಯೋಜನೆಗಳನ್ನು ಸರ್ಕಾರ ಇನ್ನಷ್ಟು ವಿಸ್ತರಿಸಬೇಕು ಎಂದು ಅವರು ತಿಳಿಸಿದರು.ಇದೇ ವೇಳೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಯಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇರುವುದರಿಂದ ರೈತರಿಗೆ ಅಗತ್ಯ ಸೇವೆಗಳು ಸಮಯಕ್ಕೆ ಸರಿಯಾಗಿ ಸಿಗುವುದಿಲ್ಲ. ಆದ್ದರಿಂದ ಈ ಎರಡು ಇಲಾಖೆಗಳಲ್ಲೂ ನೂರಕ್ಕೆ ನೂರು ನೇಮಕಾತಿ ನಡೆಸುವಂತೆ ಸರ್ಕಾರವನ್ನು ಒತ್ತಾಯಿಸುವುದಾಗಿ ಹೇಳಿದರು. ರೈತರು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಕೃಷಿ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳಬೇಕು. ಸರ್ಕಾರ ನೀಡುತ್ತಿರುವ ಸಬ್ಸಿಡಿ ಹಾಗೂ ಯೋಜನೆಗಳ ಸದುಪಯೋಗ ಪಡೆದುಕೊಂಡು ಕೃಷಿಯನ್ನು ಲಾಭದಾಯಕವಾಗಿಸಬೇಕು ಎಂದು ಅವರು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು, ಸ್ಥಳೀಯ ರೈತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಈ ವೇಳೆ ರೈತರು ಯಂತ್ರೋಪಕರಣಗಳ ಕಾರ್ಯವಿಧಾನವನ್ನು ವೀಕ್ಷಿಸಿ ಅದರ ಪ್ರಯೋಜನಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ರೈತರಿಗೆ ಆಧುನಿಕ ಯಂತ್ರೋಪಕರಣಗಳ ನೆರವು
ರೈತರಿಗೆ ಕೃಷಿ ಕಾರ್ಯಗಳನ್ನು ಸುಲಭಗೊಳಿಸಲು ಹಾಗೂ ಕಾರ್ಮಿಕರ ಕೊರತೆಯನ್ನು ನಿವಾರಿಸಲು ಸರ್ಕಾರ ಜಾರಿಗೆ ತಂದಿರುವ ಹೈಟೆಕ್ ಹಾರ್ವೆಸ್ಟರ್ ಹಬ್ ಯೋಜನೆಯಡಿ ಶುಗರ್‌ಕೇನ್ ಹಾರ್ವೆಸ್ಟರ್ ಮತ್ತು ಇಂಟರ್ ರೋ ರೋಟಾವೇಟರ್ ಯಂತ್ರೋಪಕರಣಗಳನ್ನು ರೈತರಿಗೆ ಸಹಾಯಧನದಡಿ ಒದಗಿಸಲಾಗಿದೆ. ನಗರದ ಸಂತೇಪೇಟೆ ವೃತ್ತದ ಬಳಿ ಇರುವ ಕೃಷಿ ಇಲಾಖೆಯ ಆವರಣದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್.ಡಿ. ರೇವಣ್ಣ ಯಂತ್ರೋಪಕರಣಗಳಿಗೆ ಚಾಲನೆ ನೀಡಿ ಉದ್ಘಾಟಿಸಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.