ಸಾರಾಂಶ
ಶಿಗ್ಗಾಂವಿ: ವಿದೇಶಿ ತರಕಾರಿ, ಸೊಪ್ಪುಗಳನ್ನು ಬೆಳೆದು ತೊಂದರೆ ಸಿಲುಕಿದ್ದ ರೈತರೊಬ್ಬರು ಅಧಿಕಾರಿಗಳು ಹಾಗೂ ರೈತ ಉತ್ಪಾದಕ ಕಂಪನಿ ನೆರವಿನಿಂದ ಮತ್ತೆ ಯಶಸ್ಸಿನ ಹಾದಿಗೆ ಬಂದಿದ್ದಾರೆ.ಶಿಗ್ಗಾಂವಿ ತಾಲೂಕಿನ ಮುನವಳ್ಳಿ ಗ್ರಾಮದ ಶಂಭುಲಿಂಗಪ್ಪ ಗು. ಮಡ್ಲಿ ಎಂಬ ರೈತ ತನ್ನ ೪.೪ ಎಕರೆ ಹೊಲದಲ್ಲಿ ೨೦೧೫ರಿಂದ ವಿದೇಶಿ ತರಕಾರಿ, ಸೊಪ್ಪುಗಳನ್ನು ಬೆಳೆಯುತ್ತಿದ್ದರು. ಬ್ರೋಕೊಲಿ, ಲೆಟ್ಟಿವ್ಸ್, ಬೆಸಿಲ್ಲಾ, ರಾಕೆಟ್ ಸೊಲೈಡ್, ಐಸಬರ್ಗ್, ಜುಗುನಿ, ಅರಗೋಲಾ, ಲೋಲೋರೊಸುನಂತಹ ವಿದೇಶಿ ತರಕಾರಿ ಬೆಳೆ ಬೆಳೆದು ಯಶಸ್ವಿಯಾಗಿದ್ದರು. ಹೆಚ್ಚಾಗಿ ಕರಾವಳಿ, ಹಂಪಿ, ಮೈಸೂರು ಮತ್ತಿತರ ಪ್ರಮುಖ ಪ್ರವಾಸಿ ತಾಣಗಳಿಗೆ ಬರುತ್ತಿದ್ದ ವಿದೇಶಿಯರಿಗೆ ಇದನ್ನು ಪೂರೈಸುತ್ತಿದ್ದರು. ಈ ವಿದೇಶಿ ತರಕಾರಿ, ಸೊಪ್ಪನ್ನು ಬಳಸುವ ವಿಧಾನವನ್ನು ಸ್ಥಳೀಯರಿಗೂ ವಿವರಿಸಿದ್ದರಿಂದ ಮಾರುಕಟ್ಟೆ ಚೆನ್ನಾಗಿಯೇ ಇತ್ತು. ಉತ್ತಮ ಆದಾಯವೂ ಬಂದಿತ್ತು.ಆದರೆ ಕೊರೋನಾ ಸಂದರ್ಭದಲ್ಲಿ ತೀವ್ರ ತೊಂದರೆಗೆ ಸಿಲುಕಿದರು. ಆರ್ಥಿಕ ನಷ್ಟ ಉಂಟಾಯಿತು. ಈ ತರಕಾರಿ, ಸೊಪ್ಪಿಗೆ ಮಾರುಕಟ್ಟೆ ಸಮಸ್ಯೆ ಎದುರಾಯಿತು, ಬಿತ್ತನೆ ಬೀಜದ ಕೊರತೆಯೂ ಉಂಟಾಯಿತು. ಆಗ ನೆರವಿಗೆ ಬಂದವರು ಮಹಾನಂದಿ ಗ್ರೀನ್ ರೈತ ಉತ್ಪಾದಕ ಕಂಪನಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು. ಶಂಭುಲಿಂಗಪ್ಪ ಮಡ್ಲಿ ಅವರ ಸಮಸ್ಯೆ ಅರಿತ ಮಹಾನಂದಿ ಗ್ರೀನ್ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ಸಂತೋ಼ಷ ಕಟಗಿ ಅವರು ತೋಟಗಾರಿಕೆ ಇಲಾಖೆ ಸಹಾಯಕ ಅಧಿಕಾರಿ ನಿರ್ಮಲಾ ಅಂಬೇವಾಡಿ, ಜಗದೀಶ ಶೀಲವಂತರ ಅವರೊಂದಿಗೆ ಹೊಲಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅಧಿಕಾರಿಗಳ ಸಹಕಾರದಿಂದ ವಿದೇಶಿ ಬೀಜಗಳನ್ನು ಹುಡುಕಿ ತರಿಸಿ ಅವುಗಳನ್ನು ರೈತನಿಗೆ ಪೂರೈಸಿ ಮಾರ್ಗದರ್ಶನ ಮಾಡಿದರು. ಈಗ ಶಂಭುಲಿಂಗಪ್ಪ ಆರ್ಥಿಕವಾಗಿ ಚೇತರಿಸಿಕೊಂಡಿದ್ದು, ಉತ್ತಮ ಮಾರುಕಟ್ಟೆ ಕಂಡುಕೊಂಡಿದ್ದಾರೆ.ಯಾವುದೆ ಬೆಳೆ ಬೆಳೆಯುವ ಹಂಬಲ ಮತ್ತು ಆಸಕ್ತಿ ಇರುವವರಿಗೆ ಪ್ರೋತ್ಸಾಹ ನೀಡುತ್ತೇವೆ. ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದ ಪ್ರಯತ್ನ ಸಫಲವಾಗಿದ್ದು ಹರ್ಷ ತಂದಿದೆ ಎಂದು ಮಹಾನಂದಿ ಗ್ರೀನ್ ರೈತ ಉತ್ಪಾದಕ ಕಂಪನಿ ಅಧ್ಯಕ್ಷ ಸಂತೋ಼ಷ ಕಟಗಿ ಹೇಳಿದ್ದಾರೆ.