ಸಾರಾಂಶ
ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ ಅಧಿಕಾರಿಗಳಿಗೆ ನಿರ್ದೇಶನ । ಸ್ವಾತಂತ್ರ್ಯೋತ್ಸವದ ಪೂರ್ವಭಾವಿ ಸಭೆ
ಕನ್ನಡಪ್ರಭ ವಾರ್ತೆ ಹಾಸನಜಿಲ್ಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಅತ್ಯಂತ ಅಚ್ಚುಕಟ್ಟಾಗಿ ಮೂಡಿಬರಲು ಅಗತ್ಯ ಸಿದ್ಧತೆಗೆ ಕ್ರಮವಹಿಸಲು ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸ್ವಾತಂತ್ರ‍್ಯ ದಿನಾಚರಣೆ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲಾ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ಕಾರ್ಯಕ್ರಮ ಜರುಗಲಿದ್ದು, ಮಳೆ ಬರುತ್ತಿರುವುದರಿಂದ ಮೈದಾನದ ಅಕ್ಕಪಕ್ಕ ಗಿಡಗಳು ಬೆಳೆದಿರುತ್ತದೆ. ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಿ ಸ್ವಚ್ಛಗೊಳಿಸಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಕಾರ್ಯಕ್ರಮದ ಹಿನ್ನೆಲೆಯಲ್ಲಿ ರಚನೆಗೊಂಡಿರುವ ಉಪ ಸಮಿತಿಗಳು ಅತ್ಯಂತ ಜವಾಬ್ದಾರಿ ಹಾಗೂ ಸಮನ್ವಯತೆಯಿಂದ ಕೆಲಸಗಳನ್ನು ನಿರ್ವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ತಿಳಿಸಿದರು. ಎಲ್ಲಾ ಸರ್ಕಾರಿ ಕಟ್ಟಡಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲು ಕ್ರಮವಹಿಸುವಂತೆ ಸೂಚಿಸಿದರಲ್ಲದೆ, ಅದೇ ರೀತಿ ಖಾಸಗಿ ಕಟ್ಟಡಗಳ ಮಾಲೀಕರು ಸಹ ತಮ್ಮ ತಮ್ಮ ಕಟ್ಟಡಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಿಸಬೇಕು ಎಂದರು.
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು. ಈ ಬಾರಿ ಸರ್ಕಾರದ ಆದೇಶದಂತೆ ಅಂಗಾಂಗಳನ್ನು ದಾನ ಮಾಡಿರುವ ಕುಟುಂಬದ ಸದಸ್ಯರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.ಜನವರಿ 26ರಿಂದ ಆಗಸ್ಟ್ 14 ರವರೆಗೆ ಅಂಗಾಂಗಳನ್ನು ದಾನ ಮಾಡಿರುವ ಕುಟುಂಬದ ಸದಸ್ಯರನ್ನು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನಿಸಬೇಕು. ಆಗಸ್ಟ್ 15ರಿಂದ ಜನವರಿ 25ರವರೆಗೆ ಅಂಗಗಳನ್ನು ದಾನ ಮಾಡಿರುವ ಕುಟುಂಬದ ಸದಸ್ಯರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಬೇಕು ಎಂದು ಸರ್ಕಾರ ಆದೇಶ ಮಾಡಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸನ್ಮಾನ ಮಾಡಲು ಅಂಗಾಂಗ ದಾನ ಮಾಡಿರುವವರ ಮಾಹಿತಿ ಆರೋಗ್ಯ ಇಲಾಖೆ ಅಧಿಕಾರಿಗಳು ನೀಡುವಂತೆ ಸೂಚಿಸಿದರು.
ಪ್ರಕೃತಿಯನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಈ ನಿಟ್ಟಿನಲ್ಲಿ ಪ್ಲಾಸ್ಟಿಕ್ ರಾಷ್ಟçಧ್ವಜ ಬಳಸಬಾರದು. ಬಟ್ಟೆಯ ಬಾವುಟ ಬಳಸಬೇಕು, ಜೊತೆಗೆ ಬಾವುಟ ಸ್ವಚ್ಛವಾಗಿರುವಂತೆ ವಿಶೇಷ ಕಾಳಜಿವಹಿಸಬೇಕು ಎಂದು ತಿಳಿಸಿದರು.ಸ್ವಾತಂತ್ರ್ಯ ದಿನಾಚರಣೆಯಂದು ಎಲ್ಲಾ ಇಲಾಖೆ ಅಧಿಕಾರಿಗಳು ತಮ್ಮ ತಮ್ಮ ಕಚೇರಿಯಲ್ಲಿ ರಾಷ್ಟ್ರಧ್ವಜಾರೋಹಣ ಮಾಡುವ ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿಯನ್ವಯ ಗಾಂಧೀಜಿ ಅವರ ಭಾವಚಿತ್ರದೊಂದಿಗೆ ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ಕಡ್ಡಾಯವಾಗಿ ಇರಿಸಬೇಕು. ಯಾವುದೇ ಲೋಪದೋಷವಾಗದಂತೆ ಎಚ್ಚರವಹಿಸಿ ಎಂದು ತಿಳಿಸಿದರಲ್ಲದೆ, ರಾಷ್ಟ್ರಧ್ವಜವನ್ನು ಸಂಜೆ 6 ಗಂಟೆಯೊಳಗೆ ಇಳಿಸಲು ನಿಗಾವಹಿಸಬೇಕು ಎಂದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಚಂದ್ರಶೇಖರ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಬಿ.ಎ.ಜಗದೀಶ್, ಉಪ ವಿಭಾಗಾಧಿಕಾರಿ ಮಾರುತಿ, ಸ್ವಾತಂತ್ರ‍್ಯ ಹೋರಾಟಗಾರರಾದ ಎಚ್.ಎಂ.ಶಿವಣ್ಣ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.