ರಾಮನಗರ: ಮಂಡಲಹಳ್ಳಿ ಗ್ರಾಮದಲ್ಲಿ ಜಂಟಿ ಸರ್ವೇ ವೇಳೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ನೌಕರರ ಮೇಲೆ ನಡೆದಿರುವ ಹಲ್ಲೆಯನ್ನು ತೀವ್ರವಾಗಿ ಖಂಡಿಸಿರುವ ಜಿಲ್ಲಾ ಸರ್ಕಾರಿ ನೌಕರರ ಸಂಘ ಸರ್ಕಾರಿ ನೌಕರರಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಒತ್ತಾಯಿಸಿದೆ

ರಾಮನಗರ: ಮಂಡಲಹಳ್ಳಿ ಗ್ರಾಮದಲ್ಲಿ ಜಂಟಿ ಸರ್ವೇ ವೇಳೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ನೌಕರರ ಮೇಲೆ ನಡೆದಿರುವ ಹಲ್ಲೆಯನ್ನು ತೀವ್ರವಾಗಿ ಖಂಡಿಸಿರುವ ಜಿಲ್ಲಾ ಸರ್ಕಾರಿ ನೌಕರರ ಸಂಘ ಸರ್ಕಾರಿ ನೌಕರರಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಸತೀಶ್, ಎರಡು ದಿನಗಳ ಹಿಂದೆ ಬಿಡದಿ ಹೋಬಳಿ ಮಂಡಲಹಳ್ಳಿ ಗ್ರಾಮದಲ್ಲಿ ರೈತರು ಅಧಿಕಾರಿಗಳ ಮೇಲೆ ನಡೆಸಿದ ದೌರ್ಜನ್ಯ ಸರ್ಕಾರಿ ನೌಕರರಿಗೆ ನೋವು ತರಿಸಿದೆ. ಆ ಅಧಿಕಾರಿಗಳು ಮತ್ತು ಸಿಬ್ಬಂದಿಗಳೂ ರೈತರ ಮಕ್ಕಳೇ ಎಂಬುದನ್ನು ಮರೆಯಬಾರದು ಎಂದರು.

ಸರ್ಕಾರಿ ಅಧಿಕಾರಿಗಳು ಒಪ್ಪಿಗೆ ನೀಡಿದ ರೈತರ ಜಮೀನಿನಲ್ಲಿ ಕಾನೂನಿನಡಿ ಕೆಲಸ ಮಾಡುತ್ತಿದ್ದಾರೆ. ನೌಕರರು ಸಹ ರೈತರ ಮಕ್ಕಳೇ ಆಗಿದ್ದು, ಶಾಂತಿಯುತವಾಗಿ ಮಾತನಾಡಿ ವಾಪಸ್ಸು ಕಳುಹಿಸುವ ಬದಲು ಅವರ ಮೇಲೆ ಹಲ್ಲೆ ಪ್ರಯತ್ನ ಮಾಡಿರುವುದು ಸರಿಯಲ್ಲ. ಅಧಿಕಾರಿಗಳಿಗೂ ಕುಟುಂಬ ಇದೆ. ಹಾಗಾಗಿ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಕರ್ತವ್ಯಕ್ಕೆ ತೆರಳುವ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಕ್ತ ರಕ್ಷಣೆ ಮತ್ತು ಬಂದೋಬಸ್ತ್ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದರು.

ಸರ್ಕಾರಿ ನೌಕರರು ಸರ್ಕಾರದ ನಿಯಮಗಳಿಗನ್ವಯ ಮಾತ್ರ ಕರ್ತವ್ಯ ಮಾಡುತ್ತಿದ್ದೇವೆ. ಅವರ ಮೇಲೆ ಹಲ್ಲೆ ಮಾಡಿರುವುದು ದೈಹಿಕ ಮತ್ತು ಮಾನಸಿಕವಾಗಿ ಘಾಸಿ ಉಂಟಾಗಿದೆ. ನಮ್ಮದಲ್ಲದ ತಪ್ಪಿಗೆ ನಮ್ಮ ಮೇಲೆ ಹಲ್ಲೆ ಮಾಡಿದ್ದಲ್ಲದೆ ದಿನಪೂರ್ತಿ ಎಲ್ಲ ಸುದ್ದಿ ವಾಹಿನಿಗಳಲ್ಲಿ ಆ ವಿಡಿಯೋಗಳು ಪ್ರಸಾರ ಆಗಿರುವುದು ಸರ್ಕಾರಿ ನೌಕರರನ್ನು ಮಾನಸಿಕವಾಗಿ ಮತ್ತಷ್ಟು ಕುಗ್ಗಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸರ್ಕಾರಿ ನೌಕರರಿಗೂ ವೈಯಕ್ತಿಕ ಬದುಕು, ಕುಟುಂಬವಿದೆ. ಈ ಘಟನೆಯಿಂದ ನಮ್ಮ ಕುಟುಂಬಸ್ಥರು ದಿಗ್ಬ್ರಾಂತರಾಗಿದ್ದಾರೆ. ಕಾನೂನಿನ ಅನ್ವಯ ಕ್ರಮ ಕೈಗೊಳ್ಳಬೇಕೆ ಹೊರತು ನಮ್ಮಗಳ ವಿರುದ್ಧ ಹಲ್ಲೆ ಮಾಡಿರುವುದನ್ನು ನಾವು ಇಂದಿಗೂ ಸಹಿಸುವುದಿಲ್ಲ. ಹಲ್ಲೆ ಮಾಡಿದ ಪ್ರತಿಯೊಬ್ಬರ ಮೇಲು ಕಾನೂನಿನನ್ವಯ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಸರ್ಕಾರಿ ನೌಕರರ ಮೇಲೆ ಈ ರೀತಿಯ ಹಲ್ಲೆಗಳ ಘಟನೆಗಳು ಪದೇ ಪದೇ ಮರುಗೊಳಿಸುತ್ತಿರುವುದರಿಂದ ಸರ್ಕಾರ ಸೂಕ್ತ ಕಾನೂನನ್ನು ಜಾರಿಗೊಳಿಸಿ ಸದರಿ ಕಾನೂನಿನ ಮೂಲಕ ಸರ್ಕಾರಿ ನೌಕರರನ್ನು ರಕ್ಷಿಸಬೇಕು ಎಂದು ಆಗ್ರಹಿಸಿದರು.

ಬಿಡದಿ ಟೌನ್ ಶಿಪ್ ಯೋಜನೆ ಒಂದೇ ವಿಚಾರವಲ್ಲ ಯಾವುದೇ ಸರ್ವೆ ಕಾರ್ಯಕ್ಕೆ ಹೋದಾಗ ಸರ್ಕಾರಿ ನೌಕರಿಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸೂಕ್ತ ಭದ್ರತೆ ಒದಗಿಸಬೇಕು. ಇಂತಹ ಘಟನೆಗಳು ಮರುಕಳಿಸಿದರೆ ಸರ್ಕಾರಿ ನೌಕರರು ಒಗ್ಗಟ್ಟಿನಿಂದ ಹೋರಾಟ ಮಾಡಬೇಕಾಗುತ್ತದೆ ಎಂದು ಕೆ.ಸತೀಶ್ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸರ್ಕಾರಿ ನೌಕರರ ಸಂಘದ ಹಿರಿಯ ಉಪಾಧ್ಯಕ್ಷ ಭೈರಪ್ಪ, ಉಪಾಧ್ಯಕ್ಷ ಜಯಪ್ರಕಾಶ್ , ನಿರ್ದೇಶಕ ಶಿವಸ್ವಾಮಿ, ರಾಜ್ಯ ಪರಿಷತ್ ಸದಸ್ಯ ಯತೀಶ್, ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ಹರ್ಷ, ಜಿಬಿಡಿಎ ಅಧಿಕಾರಿಗಳು ಮತ್ತು ನೌಕರರು ಇದ್ದರು.

16ಕೆಆರ್ ಎಂಎನ್ 1.ಜೆಪಿಜಿ

ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಸತೀಶ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಅಮ್ಮನ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವು ಬರಹಕ್ಕೆ