ಸಾರಾಂಶ
ಮಾನವೀಯ ಸ್ನೇಹಿತರ ಒಕ್ಕೂಟದ ಸದಸ್ಯರ ಸದಸ್ಯರ ಸಮ್ಮಿಲನ ಕಾರ್ಯಕ್ರಮ ನಡೆಯಿತು. ನಿವೃತ್ತ ಸುಬೇದಾರ್ ಮೇಜರ್ ಡೇವಿಡ್ ವೇಗಸ್ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರದ ಕ್ರೆಸೆಂಟ್ ಶಾಲಾ ಸಭಾಂಗಣದಲ್ಲಿ ಮಾನವೀಯ ಸ್ನೇಹಿತರ ಒಕ್ಕೂಟದ ಸದಸ್ಯರ ಸಮ್ಮಿಲನ ಕಾರ್ಯಕ್ರಮ ಇತ್ತೀಚೆಗೆ ಸಂಭ್ರಮದಿಂದ ನಡೆಯಿತು. ನಿವೃತ್ತ ಸುಬೇದಾರ್ ಮೇಜರ್ ಡೇವಿಡ್ ವೇಗಸ್ ಉದ್ಘಾಟಿಸಿದರು.ಒಕ್ಕೂಟದ ಅಡ್ಮಿನ್ ಶಶಿಕುಮಾರ್ ಪ್ರಸ್ತಾವಿಕ ಮಾತನಾಡಿ, ನಮ್ಮ ಒಕ್ಕೂಟವೂ ಜಿಲ್ಲೆಯ ಕಡು ಬಡವರ ಸಂಕಷ್ಟಗಳಿಗೆ ಕೈಲಾದ ಸಹಾಯವನ್ನು ಮಾಡುತ್ತಾ ಬರುತ್ತಿದ್ದು, ಮುಂದಿನ ದಿನಗಳಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಾಗುವುದೆಂದರು.
ಸಮಾಜ ಸೇವಕ ಮೈಕಲ್ ವೇಗಸ್ ಮಾತನಾಡಿ, ಒಕ್ಕೂಟದ ಕಾರ್ಯ ಚಟುವಟಿಕೆಗಳ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.ಒಕ್ಕೂಟದ ಅಡ್ಮಿನ್ ಎಂ.ಇ.ಮಹಮ್ಮದ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಲ್ಲಮಾವಟಿ ನೇತಾಜಿ ಪ್ರೌಢಶಾಲೆಯ ಶಿಕ್ಷಕ ಮೆಹಬೂಬ್ ಸಾಬ್, ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ.ಸುಕುಮಾರ್, ಸಮಾಜ ಸೇವಕಿ ಗಾಯತ್ರಿ ನರಸಿಂಹ, ಸುಂಟಿಕೊಪ್ಪದ ಹಿರಿಯ ಸಾಫ್ಟ್‌ವೇರ್ ಎಂಜಿನಿಯರ್ ನಿಯಾಝ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡು ಮಾತನಾಡಿದರು.
ಪತ್ರಕರ್ತ ಎಂ.ಇ.ಮಹಮ್ಮದ್ ರಚಿಸಿದ ಒಕ್ಕೂಟದ ಧ್ಯೇಯ ಗೀತೆಯನ್ನು ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಹಾಗೂ ಒಕ್ಕೂಟದ ಪ್ರತಿನಿಧಿ ಕಡ್ಲೇರ ತುಳಸಿ ಮೋಹನ್ ಹಾಡಿದರು. ಒಕ್ಕೂಟದ ಮತ್ತೋರ್ವ ಪ್ರತಿನಿಧಿ ಸಲೀನಾ ಅಶ್ರಫ್ ವರದಿ ವಾಚಿಸಿದರು.ಒಕ್ಕೂಟದ ಹಿರಿಯ ಅಡ್ಮಿನ್ ಎಂ.ಇ.ಮಹಮ್ಮದ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಮ್ಮಿಲನದ ಪ್ರಯುಕ್ತ ಪುರುಷರಿಗೂ ಮಹಿಳೆಯರಿಗೂ ಮೋಜಿನಾಟಗಳ ಸ್ಪರ್ಧೆ ನಡೆಯಿತು. ಸ್ಪರ್ಧೆಯನ್ನು ಒಕ್ಕೂಟದ ಪ್ರತಿನಿಧಿ ಸವಿತಾ ಕುಮಾರಿ ನಡೆಸಿಕೊಟ್ಟರು. ಸ್ಪರ್ಧಿಗಳಲ್ಲಿ ವಿಜೇತರಿಗೆ ಗಣ್ಯರು ಬಹುಮಾನ ವಿತರಿಸಿದರು.ಸ್ನೇಹಿತರ ಒಕ್ಕೂಟದ ನೂತನ ಪ್ರತಿನಿಧಿ ಪೊಡನೋಳನ ಪೂರ್ಣಿಮಾ ಗಿರೀಶ್ ಅವರ ಪುತ್ರಿ ಸಿಂಚನಾಳ ಆಕರ್ಷಕ ನೃತ್ಯ ಗಮನ ಸೆಳೆಯಿತು. ಪತ್ರಕರ್ತ ರಂಜಿತ್ ಕವಲಪಾರ ನಿರೂಪಿಸಿ, ಸ್ವಾಗತಿಸಿದರು. ಒಕ್ಕೂಟದ ಅಡ್ಮಿನ್ ಮನ್ಸೂರ್ ಪರ್ಝ್ ವಂದಿಸಿದರು.
ಲಕ್ಕಿಡಿಪ್: ಕಾರ್ಯಕ್ರಮದಲ್ಲಿ ಹಾಜರಿದ್ದ ಸದಸ್ಯರ ಪೈಕಿ ನಾಲ್ವರು ಅದೃಷ್ಟವಂತರು ಲಕ್ಕಿ ಡಿಪ್‌ನಲ್ಲಿ ಆಯ್ಕೆಯಾಗಿದ್ದು, ಅದರಲ್ಲಿ ಒಕ್ಕೂಟದ ಅಡ್ಮಿನ್ ಮಡಿಕೇರಿಯ ಅನಿಲ್ ರೈ ಕೂಟು ಹೊಳೆಯಲ್ಲಿರುವ ತಮ್ಮ ವೈಟ್ ವಿಲ್ಲಾ ಹೋಂಸ್ಟೇ ನಲ್ಲಿ ಸಂಸಾರವೊಂದಕ್ಕೆ ಎರಡು ದಿನಗಳ ಕಾಲ ಉಚಿತವಾಗಿ ತಂಗಲು ಅನುವು ಮಾಡಿಕೊಟ್ಟರು. ಮಡಿಕೇರಿಯ ತಣಲ್ ಸಂಸ್ಥೆಯ ಮುಖ್ಯಸ್ಥ ಮೊಹಮ್ಮದ್ ಮುಸ್ತಫಾ ಅವರಿಗೆ ಈ ಅದೃಷ್ಟ ಒಲಿಯಿತು. ಲಕ್ಕಿ ಡಿಪ್ ಕಾರ್ಯಕ್ರಮವನ್ನು ಒಕ್ಕೂಟದ ಅಡ್ಮಿನ್ ರಮ್ಯಾ ಟೀಚರ್ ನೆರವೇರಿಸಿಕೊಟ್ಟರು.