ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಸಂಘ, ಸಂಸ್ಥೆಗಳು ಎಲ್ಲರನ್ನೂ ಸೇರಿಸಿಕೊಂಡು ಸರ್ವರ ಏಳ್ಗೆಗೆ ಶ್ರಮಿಸುವ ಕೆಲಸ ಮಾಡಬೇಕು ಎಂದು ದೇವಿಕಾ ಸುಬ್ಬರಾವ್ ಫೌಂಡೇಶನ್ ಅಧ್ಯಕ್ಷೆ, ಸಮಾಜ ಸೇವಕಿ ಪಲ್ಲವಿ ನಾಡಗೌಡ ಹೇಳಿದರು. ಪಟ್ಟಣದ ಟಾಪ್ ಇನ್ ಟೌನ್ ಹಾಲ್‌ನಲ್ಲಿ ಪ್ರಗತಿ ಜೆಸಿ ಸಂಸ್ಥೆಯ 2024-25ನೇ ಸಾಲಿನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜಮುಖಿ ಕೆಲಸಗಳು ಮತ್ತು ಪಾರದರ್ಶಕತೆ ಸಂಘ ಸಂಸ್ಥೆಗಳ ಮೇಲಿನ ನಂಬಿಕೆಗೆ ಮುಖ್ಯ ಕಾರಣವಾಗುತ್ತವೆ. ಜೆಸಿ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಶಿಕ್ಷಣ ಸಂಸ್ಥೆಯಿಂದ ಅತ್ಯುತ್ತಮ ಶಿಕ್ಷಣ ನೂರಾರು ಮಕ್ಕಳಿಗೆ ಲಭಿಸುತ್ತಿರುವುದು ಸಂತಸದ ವಿಷಯ. ಶಿಕ್ಷಣದಿಂದ ದೊರಕುವ ಶಕ್ತಿ ದೊಡ್ಡದು ಎಂದರು.ವಿಜಯಪುರ ಜಿಲ್ಲಾ ಬಿಜೆಪಿ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಮಾತನಾಡಿ, ಒಂದು ಸಂಸ್ಥೆಯ ನೇತೃತ್ವ ವಹಿಸಿಕೊಂಡ ಕೆಲವರು, ಕೆಲವೇ ದಿನಗಳಲ್ಲಿ ಆ ಇಡೀ ಸಂಸ್ಥೆಯ ಕುಟುಂಬದ ಆಸ್ತಿಯನ್ನಾಗಿಸಿಕೊಂಡ ಜ್ವಲಂತ ಉದಾಹರಣೆಗಳು ನಮ್ಮ ಮುಂದೆ ಇವೆ. ಆದರೆ, ಜೆಸಿ ಸಂಸ್ಥೆಯ ಸದಸ್ಯರು ಫಲಾಪೇಕ್ಷೆ ಇಲ್ಲದೇ ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ ಎನ್ನುವ ತತ್ವದಡಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು. ಕುಂಟೋಜಿಯ ಭಾವೈಕ್ಯತೆ ಹಿರೇಮಠದ ಡಾ.ಚನ್ನವೀರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಸಂಘ, ಸಂಸ್ಥೆಗಳು ದೀನರ, ದಲಿತರ, ದುರ್ಬಲರ, ನೊಂದವರ ಜೀವನಾಡಿಯಾಗಿ ಬೆಳೆಯಬೇಕು. ಸಮಾಜದ ಸರ್ವರ ಕಲ್ಯಾಣಕ್ಕೆ ಸಮಾಜ ಸೇವಾದೀಕ್ಷೆ ಪಡೆಯಬೇಕು ಎಂದು ನುಡಿದರು.ಬೆಂಗಳೂರು ಮಹಾ ನಗರಸಭೆಯ ವಿಶೇಷ ಆಯುಕ್ತ ಶಿವಾನಂದ ಕಲಕೇರಿ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರ ಆಪ್ತ ಕಾರ್ಯದರ್ಶಿ ಶ್ರೀಶೈಲ ಬಿದರಕುಂದಿ ಮಾತನಾಡಿದರು. 2024-25ನೇ ಸಾಲಿನ ನೂತನ ಅಧ್ಯಕ್ಷರಾಗಿ ಉದ್ಯಮಿ ಶರಣು ಅಯ್ಯಪ್ಪ ಸಜ್ಜನ ಹಾಗೂ ಕಾರ್ಯದರ್ಶಿಯಾಗಿ ಸುನೀಲ್ ಇಲ್ಲೂರ ಅಧಿಕಾರ ಸ್ವೀಕರಿಸಿದರು.ಅಹಲ್ಯಾದೇವಿ ಹೋಳ್ಕರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮಲ್ಲಿಕಾರ್ಜುನ ಮದರಿ, ಜೆಸಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರವಿ ತಡಸದ ಅಧ್ಯಕ್ಷರಾದ ಗುರುಲಿಂಗಪ್ಪಗೌಡ ಪಾಟೀಲ, ನಿಕಟಪೂರ್ವ ಅಧ್ಯಕ್ಷರಾದ ಮಹಾಬಲೇಶ್ವರ ಶಿ.ಗಡೇದ, ಕಾರ್ಯದರ್ಶಿ ಮುತ್ತು ಕಡಿ ಇದ್ದರು.
ಜೆಸಿ ಶಾಲೆಯ ಮಕ್ಕಳು ಪ್ರಾರ್ಥಿಸಿದರು. ಡಾ.ವೀರೇಶ ಪಾಟೀಲ ಸ್ವಾಗತಿಸಿದರು. ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಸಹಾಯಕ ಆಯುಕ್ತ ಅರವಿಂದ ಜಮಖಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಎಸ್.ಎಸ್.ಹೂಗಾರ ಹಾಗೂ ಮಹಾಬಲೇಶ್ವರ ಗಡೇದ ನಿರೂಪಿಸಿದರು. ಡಾ.ವೀರೇಶ ಪಾಟೀಲ ವಂದಿಸಿದರು.ಕೋಟ್..ಸಮಾಜಮುಖಿ ಕೆಲಸಗಳು ಮತ್ತು ಪಾರದರ್ಶಕತೆ ಸಂಘ ಸಂಸ್ಥೆಗಳ ಮೇಲಿನ ನಂಬಿಕೆಗೆ ಮುಖ್ಯ ಕಾರಣವಾಗುತ್ತವೆ. ಜೆಸಿ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಶಿಕ್ಷಣ ಸಂಸ್ಥೆಯಿಂದ ಅತ್ಯುತ್ತಮ ಶಿಕ್ಷಣ ನೂರಾರು ಮಕ್ಕಳಿಗೆ ಲಭಿಸುತ್ತಿರುವುದು ಸಂತಸದ ವಿಷಯ. ಶಿಕ್ಷಣದಿಂದ ದೊರಕುವ ಶಕ್ತಿ ದೊಡ್ಡದು.
-ಪಲ್ಲವಿ ನಾಡಗೌಡ, ದೇವಿಕಾ ಸುಬ್ಬರಾವ್ ಫೌಂಡೇಶನ್ ಅಧ್ಯಕ್ಷೆ, ಸಮಾಜ ಸೇವಕಿ.