ಸಾರಾಂಶ
ರಾಣಿಬೆನ್ನೂರು: ಕಳೆದ ನಾಲ್ಕು ದಿನಗಳಿಂದ ಸುರಿದ ಅಪಾರ ಪ್ರಮಾಣದ ಮಳೆಯಿಂದಾಗಿ ತಾಲೂಕಿನ ಅಸುಂಡಿ ದೊಡ್ಡ ಕೆರೆಯ ಕೋಡಿ ಬಿದ್ದು ನೀರು ತುಂಬಿ ಹರಿಯುತ್ತಿದೆ. ಇದರಿಂದ ಹಳೆ ಹೂಲಿಹಳ್ಳಿ, ಹೊಸ ಹೂಲಿಹಳ್ಳಿ, ಕೂನಬೇವು ಗ್ರಾಮಗಳ ಮಾರ್ಗವಾಗಿ ಹಳ್ಳದ ಮೂಲಕ ಅಪಾರ ಪ್ರಮಾಣದ ನೀರು ಹರಿಯುತ್ತಿದ್ದು ರಾಷ್ಟ್ರೀಯ ಹೆದ್ದಾರಿಯ ಕದರಮಂಡಲಗಿ ಕ್ರಾಸ್ ಸಮೀಪದಲ್ಲಿ ಸೇತುವೆಯ ಕೆಳಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದು ಹೋಗುತ್ತಿದೆ. ಹೀಗಾಗಿ ಕೂನಬೇವು ಗ್ರಾಮದಿಂದ ರಾಣಿಬೆನ್ನೂರು ತಲುಪುವ ರಸ್ತೆಯ ಮೇಲೆ ನೀರು ಹರಿದು ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದೆ. ಸುತ್ತಮುತ್ತಲಿನ ಗ್ರಾಮಸ್ಥರು ಅಸುಂಡಿಗೆ ತೆರಳಿ ತುಂಬಿರುವ ಕೆರೆಯನ್ನು ವೀಕ್ಷಿಸಿದರು. ನೀರು ಹರಿಯುತ್ತಿರುವದರಿಂದ ಕೆರೆಯ ಕೆಳಭಾಗದಲ್ಲಿರುವ ಅಸುಂಡಿ, ಹಳೆ ಹೂಲಿಹಳ್ಳಿ, ಹೊಸ ಹೂಲಿಹಳ್ಳಿ, ಎರೇಕುಪ್ಪಿ, ಕೂನಬೇವು ಗ್ರಾಮಗಳ ರೈತರ ಹೊಲದಲ್ಲಿ ಬೆಳೆದು ಕಟಾವು ಹಂತಕ್ಕೆ ಬಂದಿದ್ದ ಗೋವಿನ ಜೋಳ, ಹತ್ತಿ, ಹಸೆ ಮೆಣಸಿನ ಕಾಯಿ, ಟೊಮೆಟೋ ಬೆಳೆಗಳು ಜಲಾವೃತಗೊಂಡಿವೆ. ಇದಲ್ಲದೆ ಹೊಸದಾಗಿ ನಾಟಿ ಮಾಡಿದ್ದ ಅಡಿಕೆ, ತೆಂಗು, ಬಾಳೆ ಸೇರಿದಂತೆ ಹಲವು ಬೆಳೆಗಳು ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದು ರೈತರು ಕಂಗಾಲಾಗಿದ್ದಾರೆ.ಪರಿಹಾರಕ್ಕೆ ಆಗ್ರಹ: ಕೆರೆಗೆ ಕೋಡಿ ಬಿದ್ದಿರುವುದರಿಂದ ರೈತರ ಹೊಲಗಳಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹವಾಗಿದೆ. ಅದಕ್ಕಾಗಿ ಕಂದಾಯ ಅಧಿಕಾರಿಗಳ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿ ಬೆಳೆ ಹಾನಿ ಹಾಗೂ ಭೂ ಹಾನಿ ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸಿದರು.
ಸ್ಥಳಕ್ಕೆ ಅಧಿಕಾರಿಗಳ ಭೇಟಿ: ಕೆರೆಗೆ ಕೋಡಿ ಬಿದ್ದ ಹಿನ್ನೆಲೆಯಲ್ಲಿ ತಹಸೀಲ್ದಾರ ಆರ್.ಎಚ್.ಭಾಗವಾನ್ ತಮ್ಮ ಸಿಬ್ಬಂದಿ ಜತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಕೆರೆಯ ಕೋಡಿ ನೀರು ಹರಿದು ಹಾನಿಗೊಳಗಾಗಿರುವ ರೈತರ ಜಮೀನುಗಳಿಗೆ ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆಗಳ ಅಧಿಕಾರಿಗಳು ಭೇಟಿ ನೀಡಿ ಹಾನಿ ಸಮಿಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಸರ್ಕಾರ ಹಣ ಬಿಡುಗಡೆ ಮಾಡಿದ ನಂತರ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡಲಾಗುತ್ತದೆ. ಗ್ರಾಮದಲ್ಲಿ ಎರಡು ಮನೆಗಳು ಹಾನಿಗೊಳಗಾಗಿವೆ. ಕೆಲವು ಮನೆಗಳಿಗೆ ಮಳೆಯ ನೀರು ನುಗ್ಗಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ರೈತರು ತಮ್ಮ ದನಕರುಗಳನ್ನು, ಮಕ್ಕಳನ್ನು ಕೆರೆಯ ಕಡೆಗೆ ಹೋಗದಂತೆ ಎಚ್ಚರವಹಿಸಬೇಕು ಎಂದರು.