ಸಾರಾಂಶ
ದುಡ್ಡಿಗೆ ನಮ್ಮ ತಂದೆತಾಯಿ ಯಾರ ಹತ್ತಿರವೂ ನಮ್ಮನ್ನು ಕಳಿಸಿಲ್ಲ. ನಮ್ಮ ಅಣ್ಣ 23 ನೇ ವಯಸ್ಸಿಗೆ ನಿಮ್ಮ ವಿರುದ್ಧ ತೊಡೆ ತಟ್ಟಿ ನಿಂತಿದ್ದವರು. ತೊಡೆ ತಟ್ಟು ನಾನಿದ್ದೇನೆ ಎಂದು ನಮ್ಮ ಅಪ್ಪ ಹೇಳಿದ್ದರು ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ತಿರುಗೇಟು ನೀಡಿದರು.
ಚನ್ನಪಟ್ಟಣ: ದೇವೇಗೌಡರು ನಮ್ಮ ಅಣ್ಣ ಡಿ.ಕೆ.ಶಿವಕುಮಾರ್ 100 ರು.ಗಳಿಗೆ ಯಾರ ಹತ್ತಿರಾನೋ ಇದ್ದರು ಎಂದು ಹೇಳಿದ್ದಾರೆ. ದುಡ್ಡಿಗೆ ನಮ್ಮ ತಂದೆತಾಯಿ ಯಾರ ಹತ್ತಿರವೂ ನಮ್ಮನ್ನು ಕಳಿಸಿಲ್ಲ. ನಮ್ಮ ಅಣ್ಣ 23 ನೇ ವಯಸ್ಸಿಗೆ ನಿಮ್ಮ ವಿರುದ್ಧ ತೊಡೆ ತಟ್ಟಿ ನಿಂತಿದ್ದವರು. ತೊಡೆ ತಟ್ಟು ನಾನಿದ್ದೇನೆ ಎಂದು ನಮ್ಮ ಅಪ್ಪ ಹೇಳಿದ್ದರು ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ತಿರುಗೇಟು ನೀಡಿದರು.
ತಾಲೂಕಿನ ಹುಣಸನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ತಿಗಳ ಸಮಾಜದ ಕಾಂಗ್ರೆಸ್ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, ಅವರು ಹಿರಿಯರು ಎಂದು ಗೌರವ ಕೊಡುತ್ತಿದ್ದೇವೆ. ರಾಜಕೀಯ ಆಮೇಲೆ ಮಾತನಾಡುತ್ತೇನೆ. ದೇವೆಗೌಡ್ರು ಯಾವ ರೀತಿ ಮಾತಾಡ್ತಾರೆ ಅನ್ನೋದು ಜನರು ತಿಳ್ಕೊಬೇಕು. ನಾವು ಯಾರ ಹತ್ತಿರ ಕೂಡ ಕೈ ಚಾಚಿ ನಿಲ್ಲಲಿಲ್ಲ. ಕೆರೆ ಬರೆಸಿಕೊ ಅಂತಾ ಹೇಳಲಿಲ್ಲ. ಈ ಸರ್ಕಾರ ತೆಗೆಯುತ್ತೇನೆ ಎನ್ನುತ್ತಿದ್ದಾರೆ. ಆದರೆ ಅದು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.
ನೀವು ಚನ್ನಪಟ್ಟಣಕ್ಕೆ ಬಂದು ಎದೆ ತಟ್ಟಿಕೊಂಡು ಮಾತಾಡ್ತೀರಿ. ಗೌಡ್ರೆ ನಿಮ್ಮ ಆರೋಗ್ಯ ಚೆನ್ನಾಗಿರಲಿ. ನೀವು ೧೦೦ ವರ್ಷ ಚೆನ್ನಾಗಿರಿ. ನೀವು ಈ ದೇಶಕ್ಕೆ ಸಲಹೆ ಕೊಡಬೇಕು. ನಿಮ್ಮ ಕುಟುಂಬಕ್ಕೆ ವೋಟ್ ಕೇಳಿ ತಪ್ಪಿಲ್ಲ. ಹಾಸನ, ಮಂಡ್ಯದಲ್ಲೂ ನಿಮ್ಮ ಕುಟುಂಬದವರ ಪರವಾಗಿ ಮತ ಕೇಳಿದ್ದೀರಾ..? ಇದಕ್ಕೆ ನಮ್ಮ ತಕರಾರಿಲ್ಲ ಎಂದರು.
ನೀವು ದೇಶಕ್ಕೆ ಸಲಹೆ ಕೊಡ್ತೀರಾ ಅಂದುಕೊಂಡಿದ್ವು. ಆದರೆ ನಿಮ್ಮ ಮೊಮ್ಮಗನ ಪರವಾಗಿ ಮತ ಕೇಳೋಕೆ ಬಂದಿದ್ದೀರಿ. ಸರ್ವರಿಗೂ ಸಮಪಾಲು ಕೊಡಬೇಕು ಅಂತೀರಲ್ಲ. ಹಾಸನದಲ್ಲಿ ನಿಮ್ಮ ಇಬ್ಬರು ಮೊಮ್ಮಕ್ಕಳ ಪರವಾಗಿ ಪ್ರಚಾರ ಮಾಡಿದ್ದೀರಿ. ಇಲ್ಲೂ ಕೂಡ ಪ್ರಚಾರ ಮಾಡಿ, ಸರ್ವರಿಗೂ ಸಮಪಾಲಿನ ರೀತಿ ನಿಮ್ಮ ಕುಟುಂಬದವರಿಗೂ ಸಮಪಾಲು ಕೊಡಿ. ಅದೇನೋ ಕಿತ್ತಾಕ್ತೀನಿ ಅಂತಾ ಹೇಳಿದ್ದೀರಲ್ಲ. ಅದು ಮಾತ್ರ ಸಾಧ್ಯವಿಲ್ಲ ಎಂದು ಹೇಳಿದರು.
ತಾಲೂಕಿನ ಜನ ಎರಡು ಬಾರಿ ಕುಮಾರಸ್ವಾಮಿ ಅವರನ್ನು ಆಯ್ಕೆ ಮಾಡಿದರು. ಇಲ್ಲಿಂದಲೇ ಮುಖ್ಯಮಂತ್ರಿ ಸಹ ಆದರು. ಆದರೆ, ನಿಮ್ಮ ಕಷ್ಟ ಕೇಳಲಿಲ್ಲ. ಅವರು ಸಿಎಂ ಆಗಿದ್ದಾಗ ಅಭಿವೃದ್ಧಿ ಮಾಡಬೇಡ ಎಂದು ಹೇಳಿದ್ದೆವಾ ಎಂದು ಪ್ರಶ್ನಿಸಿದರು.
ಅವರು ತಂದೆ ಪ್ರಧಾನಿಯಾಗಿದ್ರು. ಅವರು ಎರಡು ಬಾರಿ ಸಿಎಂ ಆಗಿದ್ದರು. ಆದರೆ ಅಭಿವೃದ್ಧಿ ಮಾಡಲಿಲ್ಲ. ನಾವು ಯಾರು ಯಾವ ಕೆಲಸ ಕೇಳಿದರು ಮಾಡಿಕೊಟ್ಟಿದ್ದೇವೆ ಎಂದರು.
ತಿಗಳ ಸಮಾಜದ ನರೇಂದ್ರ ಬಾಬು ಅವರನ್ನು ಕಾಂಗ್ರೆಸ್ ಶಾಸಕರನ್ನಾಗಿ ಮಾಡಿತು. ಅವರು ನಮ್ಮ ಪಕ್ಷ ಬಿಟ್ಟ ಮೇಲೆ ಸೋಲು ಅನುಭವಿಸಿದ್ದಾರೆ. ಪಿ.ಆರ್. ರಮೇಶ್ ಅವರನ್ನು ಬೆಂಗಳೂರಿನ ಮೇಯರ್ ಮಾಡಿದೆ. ನಿಮ್ಮ ಸಮಾಜಕ್ಕೆ ಯಾವ ಕೆಲಸ ಆಗಬೇಕು ಅದನ್ನು ಕಾಂಗ್ರೆಸ್ ಪಕ್ಷ ಮಾಡಿಕೊಟ್ಟಿದೆ. ಆದರೆ, ಜೆಡಿಎಸ್-ಬಿಜೆಪಿಯವರು ತಿಗಳ ಸಮಾಜದ ಅಭಿವೃದ್ಧಿ ಮಾಡಲಿಲ್ಲ ಎಂದು ಹೇಳಿದರು.
ಗ್ಯಾರಂಟಿ ನೀಡಿದ್ದಕ್ಕೆ ಸಿಎಂ ಮೇಲೆ ಆರೋಪ
ಡಿಸಿಎಂ ಡಿ.ಕೆ.ಶಿವಕುಮಾರ್ ಮೇಲೆ ಇಡಿ ಕೇಸು, ಸಿಬಿಐ ಕೇಸು ಹಾಕಿದರು. ಅದು ವಜಾ ಆಯಿತು. ಈಗ ಇನ್ನೊಂದು ಕೇಸ್ ನಡೆಯುತ್ತಿದೆ. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಗುರಿ ಮಾಡಿಕೊಂಡಿದ್ದಾರೆ. ಐದು ಗ್ಯಾರಂಟಿ ನೀಡಿದ್ದಕ್ಕೆ ಸಿದ್ದರಾಮಯ್ಯ ಅವರ ಮೇಲೆ ಆರೋಪ ಮಾಡುತ್ತಿದ್ದಾರೆ. ಇಂತಹ ಯೋಜನೆಗಳನ್ನು ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರಿಂದ ನೀಡಲು ಸಾಧ್ಯವಾ ಎಂದು ಮಾಜಿ ಸಂಸದ ಸುರೇಶ್ ಪ್ರಶ್ನಿಸಿದರು.