ಸಾರಾಂಶ
ಸಂಡೂರು: ಕೋವಿಡ್ ವೇಳೆ ಆರೋಗ್ಯ ಸಾಮಗ್ರಿಗಳ ಖರೀದಿ ಸುಮಾರು ₹2 ಸಾವಿರ ಕೋಟಿ ಭ್ರಷ್ಟಾಚಾರ ನಡೆದಿದ್ದು, ಈ ಸಂಬಂಧ ತನಿಖೆಗೆ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಆಯೋಗ ರಚನೆ ಮಾಡಿದ್ದೆವು. ವರದಿ ನೀಡಿದ ಬಳಿಕ ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಹಂತದ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ತಾಲೂಕಿನ ತೋರಣಗಲ್ಲಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಪಕ್ಷದ ನಾಯಕನಾಗಿದ್ದ ವೇಳೆ ಕೋವಿಡ್ ವೇಳೆ ಆರೋಗ್ಯ ಸಾಮಗ್ರಿಗಳ ಖರೀದಿಯಲ್ಲಿ ಸುಮಾರು ₹2000 ಕೋಟಿಗೂ ಅಧಿಕ ಭ್ರಷ್ಟಾಚಾರ ನಡೆದಿದೆ ಎಂದು ದಾಖಲೆ ಸಹಿತ ಅಧಿವೇಶನದಲ್ಲಿ ಆರೋಪ ಮಾಡಿದ್ದೆ. ಇದಾದ ಬಳಿಕ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಕೋವಿಡ್ ವೇಳೆ ನಡೆದ ಭ್ರಷ್ಟಾಚಾರ ತನಿಖೆ ನಡೆಸಲು ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಡಿಕುನ್ಹಾ ನೇತೃತ್ವದಲ್ಲಿ ಆಯೋಗ ರಚಿಸಲಾಗಿತ್ತು. 1700ಕ್ಕೂ ಹೆಚ್ಚು ಪುಟಗಳ ವರದಿಯನ್ನು ಸಮಿತಿ ಕಳೆದ ಆಗಸ್ಟ್‌ನಲ್ಲಿ ಸಲ್ಲಿಸಿದೆ. ವರದಿಯನ್ನು ಸಂಪುಟ ಉಪ ಸಮಿತಿ ಅಧ್ಯಯನ ನಡೆಸಲಿದೆ ಎಂದರು.ಕೊರೋನಾ ಕಾಲದ ಪಿಪಿಇ ಕಿಟ್ ಖರೀದಿಯಲ್ಲಿ ನಡೆದಿರುವ ಭ್ರಷ್ಟಾಚಾರದಲ್ಲಿ ಮಾಜಿ ಸಿ.ಎಂ. ಯಡಿಯೂರಪ್ಪ, ಮಾಜಿ ಆರೋಗ್ಯ ಸಚಿವ ಬಿ. ಶ್ರೀರಾಮುಲು ನೇರವಾಗಿ ಭಾಗಿಯಾಗಿದ್ದು, ಭ್ರಷ್ಟಾಚಾರ ನಿಷೇಧ ಕಾಯ್ದೆಯಡಿ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಡಿಕುನ್ಹಾ ನೇತೃತ್ವದ ಸಮಿತಿ ಶಿಫಾರಸು ಮಾಡಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿರುವುದನ್ನು ಗಮನಿಸಿದ್ದೇನೆ ಎಂದರು.
ಕೋವಿಡ್ ವೇಳೆ ಆರೋಗ್ಯ ಸಾಮಗ್ರಿಗಳ ಖರೀದಿಯಲ್ಲಾಗಿರುವ ಭ್ರಷ್ಟಾಚಾರವನ್ನು ನಾವೇ ಹೊರ ಹಾಕಿದ್ದೇವೆ. ಇದು ನಾವೇ ಬಯಲು ಮಾಡಿದ ಹಗರಣವಾಗಿದೆ. ವರದಿಯನ್ನು ಸಮಗ್ರವಾಗಿ ಪರಿಶೀಲಿಸಿ, ಮುಂದಿನ ಕಾನೂನು ಕ್ರಮ ಜರುಗಲಿಸಲಿದೆ. ತಪ್ಪಿತಸ್ಥರು ಯಾರೇ ಆಗಲಿ ಅವರ ವಿರುದ್ಧ ಕ್ರಮವಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.ಆಯೋಗದ ವರದಿಯನ್ನು ರಾಜಕೀಯ ಪ್ರೇರಿತ ಎಂದು ಹೇಳುವ ಯಡಿಯೂರಪ್ಪ ಅವರಿಗೆ ನ್ಯಾಯಾಲಯದ, ಕಾನೂನಿನ ಬಗ್ಗೆ ಗೌರವವಿಲ್ಲ. ಪೋಕ್ಸೋ ಪ್ರಕರಣದಲ್ಲಿ ಸಿಕ್ಕಿಕೊಂಡಿರುವ ಬಿ.ಎಸ್.ಯಡಿಯೂರಪ್ಪ ಮೇಲೆ ಚಾರ್ಜ್‌ಶೀಟ್ ಹಾಕಲಾಗಿದೆ. ಹಾಗಾದರೆ ಅದು ಸಹ ರಾಜಕೀಯನಾ? ಈ ಪ್ರಕರಣದಲ್ಲಿ ಸಾಬೀತಾಗುವುದು ಬೇರೆ ವಿಚಾರ, ಆದರೆ ಈಗ ಅವರು ಆರೋಪಿಯಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಸುಳ್ಳು ಹೇಳುವುದಕ್ಕೂ ಇತಿಮಿತಿ ಇರಬೇಕು ಎಂದು ಸಿಎಂ ಆಕ್ರೋಶ ವ್ಯಕ್ತಪಡಿಸಿದರು.