ಸಾರಾಂಶ
ಪುತ್ತಿಗೆ ಶ್ರೀ ಸೋಮನಾಥ ದೇವಸ್ಥಾನದ ಪುನರ್ ಪ್ರತಿಷ್ಠಾ ಹಾಗೂ ಬ್ರಹ್ಮಕಲಶೋತ್ಸವದ ಅಂಗವಾಗಿ ಶುಕ್ರವಾರ ಪುತ್ತಿಗೆ ದೇಗುಲದಲ್ಲಿ ಬ್ರಹ್ಮಕಲಶದ ಲೋಗೋ ಹಾಗೂ ಭಿತ್ತಿಪತ್ರವನ್ನು ಹಿರಿಯ ಕರ ಸೇವಕ ಗಂಗಯ್ಯ ಗೌಡ ಪಾದೆಮನೆ ಹಾಗೂ ವಿಠ್ಠಲ ಗೌಡ ಪುತ್ತಿಗೆ ಬೀಡು ಬಿಡುಗಡೆಗೊಳಿಸಿದರು.
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ತಾಲೂಕಿನ ಇತಿಹಾಸ ಪ್ರಸಿದ್ಧ ಹದಿನೆಂಟು ಮಾಗಣೆಗಳ ಒಡೆಯ, ಚೌಟರ ಸೀಮೆಯ ಪುತ್ತಿಗೆ ಶ್ರೀ ಸೋಮನಾಥ ದೇವಸ್ಥಾನದ ಪುನರ್ ಪ್ರತಿಷ್ಠಾ ಹಾಗೂ ಬ್ರಹ್ಮಕಲಶೋತ್ಸವದ ಅಂಗವಾಗಿ ಶುಕ್ರವಾರ ಪುತ್ತಿಗೆ ದೇಗುಲದಲ್ಲಿ ಬ್ರಹ್ಮಕಲಶದ ಲೋಗೋ ಹಾಗೂ ಭಿತ್ತಿಪತ್ರವನ್ನು ಹಿರಿಯ ಕರ ಸೇವಕ ಗಂಗಯ್ಯ ಗೌಡ ಪಾದೆಮನೆ ಹಾಗೂ ವಿಠ್ಠಲ ಗೌಡ ಪುತ್ತಿಗೆ ಬೀಡು ಬಿಡುಗಡೆಗೊಳಿಸಿದರು.ಮಾಜಿ ಸಚಿವ ಅಭಯಚಂದ್ರ ಜೈನ್, ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿ ಶ್ರೀಪತಿ ಭಟ್, ದೇವಸ್ಥಾನದ ಆಡಳಿತ ಮೋಕ್ತೆಸರ ಚೌಟರ ಅರಮನೆಯ ಕುಲದೀಪ್ ಎಂ. ಚೌಟ, ಜಯಶ್ರೀ ಅಮರನಾಥ್ ಶೆಟ್ಟಿ, ಪ್ರಧಾನ ಅರ್ಚಕ ಅಡಿಗಳ್ ಅನಂತಕೃಷ್ಣ ಭಟ್, ಶಿವಪ್ರಸಾದ್ ಆದೀರ್, ವಾದಿರಾಜ್ ಮಡ್ಮಣಾಯ, ವಿದ್ಯಾರಮೇಶ್ ಭಟ್ ಹಿರಿಯ ಕರಸೇವಕರೊಡಗೂಡಿ ಭಿತ್ತಿಪತ್ರ ಬಿಡುಗಡೆಗೆ ಕೈಜೋಡಿಸಿದರು.
ನಂತರ ಮಾತನಾಡಿದ ಚೌಟರ ಅರಮನೆಯ ಕುಲದೀಪ್ ಎಂ ಚೌಟ, ಫೆ.೨೮ ರಿಂದ ಮಾರ್ಚ್ ೭ ರವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವ, ಪುನರ್ ಪ್ರತಿಷ್ಠೆಯ ಲಾಂಛನ ಹಾಗೂ ಭಿತ್ತಿಪತ್ರವನ್ನು ಹಿರಿಯ ಕರಸೇವಕರ ಕೈಯಲ್ಲಿ ಬಿಡುಗಡೆಗೊಳಿಸಿದ್ದು, ಈ ಬಾರಿ ಪುತ್ತಿಗೆಯ ಪುರಾಣ ಪ್ರಸಿದ್ಧ ಹೆಸರಾದ ‘ಪುತ್ತೆ’ ಎಂದು ಅನಾದಿ ಕಾಲದಿಂದಲೂ ಕರೆಯುತ್ತಿದ್ದರು ಆದರೆ ಆ ಹೆಸರು ಅಳಿವಿನ ಅಂಚಿಗೆ ಬಂದು ತಲುಪಿದ್ದು, ಅದನ್ನು ಮತ್ತೊಮ್ಮೆ ಜನರು, ಯುವ ಪೀಳಿಗೆಗೆ ಪುತ್ತೆ ಹೆಸರು ಮರುಕಳಿಸಬೇಕೆಂಬ ನಿಟ್ಟಿನಲ್ಲಿ ‘ಪುತ್ತೆ’ ಎಂಬ ಹೆಸರಿನಲ್ಲಿ ಲೋಗೋ ಬಿಡುಗಡೆಗೊಳಿಸಲಾಗಿದೆ ಎಂದರು.ಇನ್ನೂ ದೇವಾಲಯ ಅನೇಕ ಕೆಲಸ ಕಾರ್ಯಗಳು ಬಾಕಿ ಇದ್ದು, ಎಲ್ಲಾ ಭಕ್ತಾದಿಗಳು ಬ್ರಹ್ಮಕಲಶದ ಮುಂಚಿತವಾಗಿ ಬಂದು ಭಕ್ತ ಸಮೂಹದಿಂದ ಆಗುವಷ್ಟು ಕರ ಸೇವೆಯಲ್ಲಿ ಭಾಗಿಯಾಗುವಂತೆ ತಿಳಿಸಿದರು.ಇದಕ್ಕೂ ಮೊದಲು ಮಕರ ಲಗ್ನ ಶುಭ ಮಹೂರ್ತದಲ್ಲಿ ರಕ್ತೇಶ್ವರಿ ದೈವದ ನೂತನ ಗುಡಿಗೆ ಶಿಲಾನ್ಯಾಸ ನೇರವೇರಿಸಲಾಯಿತು.ಸಂದೀಪ್ ಶೆಟ್ಟಿ ಪುತ್ತಿಗೆ ಕಾರ್ಯಕ್ರಮ ನಿರ್ವಹಿಸಿದರು.