ರಾಜಕಾರಣ ಇರುವುದು ಸ್ವಾರ್ಥಕ್ಕಾಗಿ ಅಲ್ಲ, ಸಾರ್ವಜನಿಕರ ಸೇವೆಗಾಗಿ ಎಂದು ತೋರಿಸಿಕೊಟ್ಟವರು ಅಟಲ್ ಬಿಹಾರಿ ವಾಜಪೇಯಿ ಅವರು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಕನ್ನಡಪ್ರಭ ವಾರ್ತೆ ಹೊನ್ನಾಳಿ
ರಾಜಕಾರಣ ಇರುವುದು ಸ್ವಾರ್ಥಕ್ಕಾಗಿ ಅಲ್ಲ, ಸಾರ್ವಜನಿಕರ ಸೇವೆಗಾಗಿ ಎಂದು ತೋರಿಸಿಕೊಟ್ಟವರು ಅಟಲ್ ಬಿಹಾರಿ ವಾಜಪೇಯಿ ಅವರು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.ತಾಲೂಕು ಬಿಜೆಪಿ ವತಿಯಿಂದ ಶನಿವಾರ ಪಟ್ಟಣದ ಗುರುಭವನದಲ್ಲಿ ಏರ್ಪಡಿಸಿದ್ದ ಮಾಜಿ ಪ್ರಧಾನಿ, ಭಾರತರತ್ನ ಎ.ಬಿ.ವಾಜಪೇಯಿ ಅವರ ಅಟಲ್ ಸ್ಮೃತಿ ವರ್ಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು..
ಸನ್ನಡತೆ, ಸಂಯಮಕ್ಕೂ ಮಾದರಿ ಜನಮೆಚ್ಚಿದ ಅಜಾತಶತ್ರು ವಾಜಪೇಯಿ ಅವರು ಸಮರ್ಥ ಪ್ರಧಾನಿ ಮಾತ್ರವಲ್ಲ ಸಮರ್ಥ ವಿಪಕ್ಷ ನಾಯಕ ಕೂಡ ಅಗಿದ್ದು, ಕಾಂಗ್ರೆಸ್ ಪಕ್ಷದವರು ವಾಜಪೇಯಿ ಅವರಂತಹ ನಾಯಕರಿಂದ ಕಲಿಯಬೇಕಿರುವ ಪಾಠ ನೂರಾರಿವೆ ಎಂದು ಹೇಳಿದರು.ವಿದೇಶಾಂಗ ಸಚಿವರಾಗಿದ್ದ ಸಂದರ್ಭದಲ್ಲಿ ದಿಲ್ಲಿಯಿಂದ ಲಾಹೋರ್ ವರೆಗೆ ಬಸ್ ಸಂಪರ್ಕ ಮಾಡುವ ಮೂಲಕ ವೈರಿಗಳನ್ನು ಕೂಡ ಸ್ನೇಹ ಭಾವದಿಂದ ಕಾಣುವ ವಿಶಾಲ ಹೃದಯಿ ಅಗಿದ್ದರು. ಶಿಸ್ತಿಗೆ ಬಿಜೆಪಿ ಪಕ್ಷ ಹೆಸರಾಗಿದ್ದು, ಮುಖಂಡರು, ಮತ್ತು ಕಾರ್ಯಕರ್ತರು ಶಿಸ್ತಿನಿಂದ ವರ್ತಿಸಬೇಕು ಜೋತೆಗೆ ಭಾನುವಾರ ಡಿ.ಡಿ.1ರಲ್ಲಿ ಪ್ರಸಾರವಾಗಲಿರುವ ಮನ್ ಕಿ ಬಾತ್ ಕಾರ್ಯಕ್ರಮದವನ್ನು ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕಿನ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ವೀಕ್ಷಿಸಿ ಸರಳ ಅ್ಯಪ್ ನಲ್ಲಿ ಅಪ್ ಲೋಡ್ ಮಾಡಬೇಕು ಈಗಾಗಲೇ ಈ ಕೆಲಸದಲ್ಲಿ ರಾಜ್ಯದಲ್ಲಿಯೇ ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕುಗಳು 5ಬಾರಿ ಪ್ರಥಮ ಸ್ಥಾನದಲ್ಲಿವೆ ಎಂದು ಹೇಳಿದರು.
ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಶಿವಯೋಗಿ ಸ್ವಾಮಿ ಮಾತನಾಡಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಾಬ್ದಿ ಕಾರ್ಯಕ್ರಮ ರಾಜ್ಯದಲ್ಲಿಯೇ ದಾವಣಗೆರೆ ಜಿಲ್ಲೆಯಲ್ಲಿ ಅತೀ ಹೆಚ್ಚು ಯಶಸ್ವಿಯಾಗಿ ಇತರೆ ಜಿಲ್ಲೆಯವರಿಗೆ ಮಾದರಿಯಾಗುವಂತೆ ಆಚರಿಸಲಾಗಿದೆ ಎಂದು ಹೇಳಿದರು.ನಾಯಕರಾದವರು ಹೇಗಿರಬೇಕು, ಹೇಗೆ ಜನರ ಕೆಲಸ ಮಾಡಬೇಕು ಎಂದು ಇತರರಿಗೆ ಹೇಳುವ ಬದಲಿಗೆ ತಾವೇ ಆ ರೀತಿ ನೆಡದುಕೊಂಡು ತೋರಿಸಿದವರು ವಾಜಪೇಯಿ ಅವರು,, ಅವರೊಬ್ಬ ಅಪ್ಪಟ ದೇಶಭಕ್ತರಾಗಿ, ಅಜಾತಶತ್ರು ವಾಗಿ ಸ್ವಾರ್ಥರಹಿತ ಜೀವನ ನಡೆಸಿದ್ದಾರೆ ಎಂದು ಹೇಳಿದರು.
ವಾಜಪೇಯಿ ಅವರು ಕರ್ನಾಟಕ ರಾಜ್ಯದ ಅದರಲ್ಲೂ ಶಿವಮೊಗ್ಗ ಜಿಲ್ಲೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು, ಪ್ರತಿಬಾರಿ ಶಿವಮೊಗ್ಗಕ್ಕೆ ಬೇಟಿ ನೀಡಿದಾಗ ಅವರು ಅಂದು ಬಿಜೆಪಿ ಕಾರ್ಯಕರ್ತರಾಗಿದ್ದ ಡಿ.ಎಚ್.ಶಂಕರಮೂರ್ತಿ ಅವರ ಮನೆಯಲ್ಲಿಯೇ ತಂಗುತ್ತಿದ್ದರು ಎಂದು ಸ್ಮರಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ ನಾಗಪ್ಪ ಪ್ರಾಸ್ತವಿಕವಾಗಿ ಮಾತನಾಡಿದರು. ನಂತರ ಮುಖಂಡ ಮಂಜುನಾಥ ನೆಲಹೊನ್ನೆ ಅವರು ಹೊನ್ನಾಳಿಯಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಹಮ್ಮಿಕೊಂಡ ಕಾರ್ಯಕ್ರಮಗಳ ಮಾಹಿತಿ ನೀಡಿ ವಾಜಪೇಯಿ ಸ್ಮತಿ ವರ್ಷದ ಪ್ರಯುಕ್ತ ಅರಬಗಟ್ಟೆ ವಸತಿ ಶಾಲೆಯಲ್ಲಿ ಸಸಿ ನೆಡುವ, ರಾಘವೇಂದ್ರ ಸ್ವಾಮಿ ಮಠದಲ್ಲಿ ರಕ್ತದಾನ, ಅಸ್ಪತ್ರೆ ರೋಗಿಗಳಿಗೆ ಬ್ರೆಡ್ ಹಣ್ಣು ವಿತರಣೆ ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಡ್ಲೆಬಾಳು ಧನಂಜಯ, ತಾ. ಅಧ್ಯಕ್ಷ ನಾಗರಾಜ್, ಮಾಜಿ ಅಧ್ಯಕ್ಷ ಜೆ.ಕೆ.ಸುರೇಶ್, ಡಿ.ಜಿ,ರಾಜಪ್ಪ ಸಿ..ಆರ್. ಶಿವಾನಂದ, ಕುಬೇರಪ್ಪ, ರಮೇಶ್ ಗೌಡ, ಬೀರಪ್ಪ,ಶಿವುಹುಡೇದ್,ಕುಂದೂರು ಹಾಲೇಶಪ್ಪ, ಕುಂಬಳೂರು ಅನಿಲ್, ಸುರೇಂದ್ರನಾಯ್ಕ,ಸೇರಿದಂತೆ ಹಲವಾರು ಜನ ಮುಖಂಡರು ಭಾಗವಹಿಸಿದ್ದರು.