ಕನ್ನಡಪ್ರಭ ವಾರ್ತೆ ಅಥಣಿಪಟ್ಟಣದ ಸಿದ್ಧೇಶ್ವರ ದೇವಸ್ಥಾನದ ಸಮೀಪದಲ್ಲಿರುವ ಭಾಗೀರಥಿ ನಾಲಾದಲ್ಲಿ ಗಣೇಶ ವಿಸರ್ಜನೆಯ ಬಳಿಕ ಸಂಗ್ರಹವಾಗಿದ್ದ ಘನ ತ್ಯಾಜ್ಯ, ಪ್ಲಾಸ್ಟಿಕ್ ವಸ್ತುಗಳು ಹಾಗೂ ಪೂಜಾ ಸಾಮಗ್ರಿಗಳಿಂದ ಕಲುಷಿತಗೊಂಡಿದ್ದ ನೀರನ್ನು ಸ್ವಚ್ಛಗೊಳಿಸಲು ಅಥಣಿ ಪುರಸಭೆ ಆಡಳಿತ ಗುರುವಾರ ಮುಂದಾಗಿದೆ.
ಕನ್ನಡಪ್ರಭ ವಾರ್ತೆ ಅಥಣಿ
ಪಟ್ಟಣದ ಸಿದ್ಧೇಶ್ವರ ದೇವಸ್ಥಾನದ ಸಮೀಪದಲ್ಲಿರುವ ಭಾಗೀರಥಿ ನಾಲಾದಲ್ಲಿ ಗಣೇಶ ವಿಸರ್ಜನೆಯ ಬಳಿಕ ಸಂಗ್ರಹವಾಗಿದ್ದ ಘನ ತ್ಯಾಜ್ಯ, ಪ್ಲಾಸ್ಟಿಕ್ ವಸ್ತುಗಳು ಹಾಗೂ ಪೂಜಾ ಸಾಮಗ್ರಿಗಳಿಂದ ಕಲುಷಿತಗೊಂಡಿದ್ದ ನೀರನ್ನು ಸ್ವಚ್ಛಗೊಳಿಸಲು ಅಥಣಿ ಪುರಸಭೆ ಆಡಳಿತ ಗುರುವಾರ ಮುಂದಾಗಿದೆ.ತಾಲೂಕಿನಲ್ಲಿ ಮುಂಗಾರು ಮಳೆ ಕೊರತೆಯಿಂದ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಎದುರಾಗಿರುವ ಸಂದರ್ಭದಲ್ಲಿ, ಭಾಗೀರಥಿ ನಾಲಾದಲ್ಲಿ ಸಂಗ್ರಹವಾಗಿದ್ದ ನೀರು ರಾಸಾಯನಿಕ ಬಣ್ಣ ಬಳಿದ ಗಣೇಶ ಮೂರ್ತಿಗಳು, ಪೂಜಾ ಸಾಮಗ್ರಿಗಳು, ಘನ ತ್ಯಾಜ್ಯ ಹಾಗೂ ಪ್ಲಾಸ್ಟಿಕ್ ವಸ್ತುಗಳಿಂದ ಕಲುಷಿತಗೊಂಡಿತ್ತು. ಇದರಿಂದ ಜಲಚರ ಸಂಕುಲಕ್ಕೆ ತೊಂದರೆಯಾಗುವುದರ ಜತೆಗೆ ಸಾರ್ವಜನಿಕರ ಆರೋಗ್ಯದ ಮೇಲೂ ಆತಂಕ ಉಂಟಾಗಿತ್ತು.
ಗಣೇಶ ವಿಸರ್ಜನೆ ನಡೆದು ತಿಂಗಳು ಸಮೀಪಿಸುತ್ತಿದ್ದರೂ ನಾಲಾದಲ್ಲಿನ ಕಲುಷಿತ ವಸ್ತುಗಳು ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ತೆರವುಗೊಳಿಸದಿರುವ ಕುರಿತು ಕನ್ನಡಪ್ರಭ ಅ.7ರಂದು ‘ಗಣೇಶ ವಿಸರ್ಜನೆಯ ಬಳಿಕವೂ ಸ್ವಚ್ಛವಾಗದ ಭಾಗೀರಥಿ ನಾಲಾ’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು.ವರದಿಗೆ ಸ್ಪಂದಿಸಿದ ಪುರಸಭೆ:
ಕನ್ನಡಪ್ರಭ ವರದಿಯಿಂದ ಎಚ್ಚೆತ್ತ ಪುರಸಭೆ ಆಡಳಿತ, ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ಟರ್ ಅವರ ಮಾರ್ಗದರ್ಶನದಲ್ಲಿ ಪೌರಕಾರ್ಮಿಕರನ್ನು ನಿಯೋಜಿಸಿ ಭಾಗೀರಥಿ ನಾಲಾದಲ್ಲಿದ್ದ ಘನ ತ್ಯಾಜ್ಯ ಹಾಗೂ ಪ್ಲಾಸ್ಟಿಕ್ ವಸ್ತುಗಳನ್ನು ತೆರವುಗೊಳಿಸಿ ಸ್ವಚ್ಛತಾ ಕಾರ್ಯ ಕೈಗೊಂಡಿತು.ಜಲಮೂಲ ಸಂರಕ್ಷಣೆ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಪುರಸಭೆ ಕೈಗೊಂಡಿರುವ ಕ್ರಮಕ್ಕೆ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಭಿವೃದ್ಧಿ ಕಾಮಗಾರಿಗೂ ಗುಣಮಟ್ಟದ ಆಗ್ರಹ:ಸುಮಾರು ₹10 ಕೋಟಿ ವೆಚ್ಚದಲ್ಲಿ ಪಟ್ಟಣದ ಭಾಗೀರಥಿ ನಾಲಾ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಆದರೆ ಕಾಮಗಾರಿಯಡಿ ನಿರ್ಮಿಸಲಾಗುತ್ತಿರುವ ಕೆಲವು ಸೇತುವೆಗಳು ಅವೈಜ್ಞಾನಿಕವಾಗಿವೆ ಎಂಬ ಆರೋಪಗಳು ಕೇಳಿಬಂದಿವೆ. ಹೀಗಾಗಿ ಪುರಸಭೆ ಆಡಳಿತ ಸಾರ್ವಜನಿಕರ ಹಿತದೃಷ್ಟಿಯಿಂದ ನಾಲಾ ಅಭಿವೃದ್ಧಿ ಕಾಮಗಾರಿಯನ್ನು ವೈಜ್ಞಾನಿಕವಾಗಿ ಹಾಗೂ ಗುಣಮಟ್ಟದಿಂದ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಅಲ್ಲದೆ, ನಾಲಾದಲ್ಲಿ ಸಂಗ್ರಹವಾಗಿರುವ ನೀರಿಗೆ ಸಾರ್ವಜನಿಕರು ಘನ ತ್ಯಾಜ್ಯ ಹಾಗೂ ಪ್ಲಾಸ್ಟಿಕ್ ವಸ್ತುಗಳನ್ನು ಎಸೆಯದಂತೆ ಪುರಸಭೆ ನಿರಂತರ ನಿಗಾ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.“ಅಥಣಿ ಪುರಸಭೆ ವ್ಯಾಪ್ತಿಯ ಭಾಗೀರಥಿ ನಾಲಾದಲ್ಲಿ ಗಣೇಶ ವಿಸರ್ಜನೆಯ ಬಳಿಕ ವಿಪರೀತ ಪ್ರಮಾಣದ ಘನ ತ್ಯಾಜ್ಯ ಮತ್ತು ಪ್ಲಾಸ್ಟಿಕ್ ವಸ್ತುಗಳು ಸಂಗ್ರಹವಾಗಿ ನೀರು ಕಲುಷಿತಗೊಂಡಿತ್ತು. ಸಾರ್ವಜನಿಕರು ಹಾಗೂ ಜಲಚರಗಳ ಸಂರಕ್ಷಣೆಯ ಹಿತದೃಷ್ಟಿಯಿಂದ ಕನ್ನಡಪ್ರಭ ವರದಿ ಪ್ರಕಟಿಸಿ ಪುರಸಭೆ ಆಡಳಿತವನ್ನು ಎಚ್ಚರಿಸಿದೆ. ಸಾಮಾಜಿಕ ಕಾಳಜಿ ಮೆರೆದ ಪತ್ರಿಕಾ ಬಳಗಕ್ಕೆ ಧನ್ಯವಾದಗಳು.”
। ಪ್ರಶಾಂತ ತೋಡಕರ, ಸಾಮಾಜಿಕ ಕಾರ್ಯಕರ್ತ, ಅಥಣಿ