ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಂಜಿನಿಯರ್‌ಗಳು ವೃತ್ತಿ ಜೀವನದಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಜನರಿಗೆ ನಿಗದಿತ ಸಮಯದೊಳಗೆ ಉತ್ತಮ ಸೇವೆ ನೀಡಬಹುದಾಗಿದೆ ಎಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಿವ್ಹಿಲ್ ವಿಭಾಗದ ಮುಖ್ಯಸ್ಥ ಡಾ.ನಾಗರಾಜ ಪಾಟೀಲ ಹೇಳಿದರು.ಪಟ್ಟಣದಲ್ಲಿ ಸಿವ್ಹಿಲ್ ಎಂಜಿನಿಯರ್ಸ್ ಮತ್ತು ಆರ್ಕಿಟೆಕ್ಟ್ ವೆಲ್ಫೇರ್ ಅಸೋಸಿಯೇಶನ್ ವತಿಯಿಂದ ಸರ್. ಎಂ.ವಿಶ್ವೇಶ್ವರಯ್ಯ ಜನ್ಮದಿನದ ನಿಮಿತ್ತ ಆಯೋಜಿಸಿದ್ದ ಅಭಿಯಂತರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಇಂದಿನ ತಂತ್ರಜ್ಞಾನ ಯುಗದಲ್ಲಿ ಎಂಜಿನಿಯರ್‌ಗಳಿಗೆ ಅದರಲ್ಲೂ ಸಿವ್ಹಿಲ್ ಎಂಜಿನಿಯರ್ ಗಳಿಗೆ ಸಾಕಷ್ಟು ಅವಕಾಶ ಹಾಗೂ ಸೌಲಭ್ಯಗಳಿದ್ದು, ಇವುಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೆಲ ದಶಕದ ಹಿಂದೆ ಅಭಿಯಂತರರು ಕಡ್ಡಾಯವಾಗಿ ಸೈಟ್‌ಗೆ ತೆರಳಿ ಅಳೆದು ಅವಶ್ಯ ಎನಿಸಿದಲ್ಲಿ ಸರ್ವೆ ಮಾಡಿಸಬೇಕಾಗುತ್ತಿತ್ತು. ಆದರೆ, ಇಂದು ಸೆಟ್ ಲೈಟ್ ಫೋಟೊಗಳ ಮತ್ತು ಕೆಲ ಆ್ಯಪ್ ಬಳಸಿಕೊಂಡು ಕಚೇರಿಗಳಲ್ಲಿಯೇ ಕುಳಿತು ಸಂಪೂರ್ಣ ಮಾಹಿತಿ ಪಡೆಯಬಹುದಾಗಿದೆ ಎಂದ ಹೇಳಿದರು.ಬೆಳಗಾವಿಯ ಅಭಿಯಂತರ ವಿಜಯ ಕಾಮಕರ ಮಾತನಾಡಿ, ಸರ್.ಎಂ.ವಿಶ್ವೇಶ್ವರಯ್ಯನವರ ತತ್ವಾದರ್ಶಗಳನ್ನು ಇಂದಿನ ಯುವ ಅಭಿಯಂತರರು ಅಳವಡಿಸಿಕೊಳ್ಳಬೇಕು. ಸರ್ಕಾರಿ ನಿಯಮ ಪಾಲಿಸಿಕೊಳ್ಳಬೇಕು, ಯಾವುದೇ ಆಮಿಷಗಳಿಗೆ ಒಳಗಾಗಿ ಸರ್ಕಾರಿ ನಿಯಮಗಳ ಉಲ್ಲಂಘನೆಯಾಗದಂತೆ ಎಚ್ಚರ ವಹಿಸಬೇಕು ಎಂದರು.
ಅಥಣಿ ಸಿವಿಲ್ ಎಂಜಿಜಿನಿಯರ್ಸ್ ಅಸೋಸಿಯೇಶನ್ ಅಧ್ಯಕ್ಷ ಎಸ್.ಎಸ್. ಗಲಗಲಿ ಮಾತನಾಡಿ, ಸರ್.ಎಂ. ವಿಶ್ವೇಶ್ವರಯ್ಯ ಜನ್ಮ ದಿನದ ನಿಮಿತ್ತ 57ನೇ ಅಭಿಯಂತರ ದಿನದ ನಿಮಿತ್ತ ಅಥಣಿಯಲ್ಲಿ ಸಿವ್ಹಿಲ್ ಎಂಜಿನಿಯರ್ಸ್ ಮತ್ತು ಆರ್ಕಿಟೆಕ್ಟ್ ವೆಲ್ಫೇರ್ ಅಸೋಸಿಯೇಶನ್ ಪ್ರಾರಂಭಿಸಲಾಗಿದೆ ಎಂದ ಅವರು, ಅಭಿಯಂತರ ಮತ್ತು ಆರ್ಕಿಟೆಕ್ಟ್ ಒಗ್ಗಟ್ಟಿನಿಂದ ಒಂದೇ ವೇದಿಕೆಯಲ್ಲಿ ಬರಬೇಕು ಎನ್ನುವ ಉದ್ದೇಶ ನಮ್ಮದಾಗಿದ್ದು, ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ನಿವೃತ್ತ ಎಂಜಿನಿಯರ್ ಅರುಣ ಯಲಗುದ್ರಿ, ಸಿವ್ಹಿಲ್ ಎಂಜಿನಿಯರ್ ರಾಜಶೇಖರ ಟೊಪಗಿ, ಆರ್ಕಿಟೆಕ್ಟ್ ಅಮರ ದುರ್ಗಣ್ಣವರ ಮಾತನಾಡಿದರು. ನಿವೃತ್ತ ಎಂಜಿನಿಯರ್ ದಂಪತಿಗೆ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಎಂಜಿನಿಯರ್ ಅಸೋಸಿಯೇಶನ್ ಉಪಾಧ್ಯಕ್ಷ ಮುರುಘೇಶ ಪಾಟೀಲ, ಕಾರ್ಯದರ್ಶಿ ಅಮೋಘ ಪೂಜಾರಿ, ಖಜಾಂಚಿ ಸಂತೋಷ ಪಾಟೀಲ, ಸದಸ್ಯರು ಇದ್ದರು.
ಅಥಣಿ ಈಗ ಸಾಕಷ್ಟ ಅಭಿವೃದ್ಧಿ ಹೊಂದುತ್ತಿದೆ. ಇಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿನ ಪ್ರತಿಭಾನ್ವಿತ ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣಕ್ಕಾಗಿ ಬೇರೆಡೆಗೆ ಹೋಗುತ್ತಿದ್ದಾರೆ. ಇಲ್ಲಿನ ಸಿವಿಲ್ ಎಂಜಿನಿಯರ್ ಅಸೋಸಿಯೇಶನ್ ಸದಸ್ಯರು ಸ್ಥಳೀಯ ಶಾಸಕರ ಗಮನಕ್ಕೆ ತಂದು ಅಥಣಿಯಲ್ಲಿ ತಾಂತ್ರಿಕ ಮಹಾವಿದ್ಯಾಲಯ ಸ್ಥಾಪನೆ ಮಾಡುವುದು ಅಗತ್ಯವಾಗಿದೆ.- ಡಾ.ನಾಗರಾಜ ಪಾಟೀಲ, ಸಿವಿಲ್ ವಿಭಾಗದ ಮುಖ್ಯಸ್ಥರು, ವಿಟಿಯು ಬೆಳಗಾವಿ.