ಶ್ರೀ ಭಂಡಾರಕೇರಿ ಮಠ ಕೊಡಮಾಡುವ ಪ್ರತಿಷ್ಠಿತ ‘ಅಥರ್ವೋದ್ಘೋಷ ವಾಕ್ಪತಿ’ ರಾಷ್ಟ್ರೀಯ ಪ್ರಶಸ್ತಿಯನ್ನು ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಸಂಸ್ಕೃತ ಪಾಠಶಾಲೆಯ ಉಪನ್ಯಾಸಕ, ಪಂಡಿತ ಪ್ರಹ್ಲಾದಾಚಾರ್ಯ ಕಾನಡೆ ಅವರಿಗೆ ಮತ್ತು 10 ವಿದ್ವಾಂಸರಿಗೆ ಅಥರ್ವೋದ್ಘೋಷ ಸುಗ್ರೀವ - ಸುವ್ರತ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಉಡುಪಿ: ಶ್ರೀ ಭಂಡಾರಕೇರಿ ಮಠ ಕೊಡಮಾಡುವ ಪ್ರತಿಷ್ಠಿತ ‘ಅಥರ್ವೋದ್ಘೋಷ ವಾಕ್ಪತಿ’ ರಾಷ್ಟ್ರೀಯ ಪ್ರಶಸ್ತಿಯನ್ನು ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಸಂಸ್ಕೃತ ಪಾಠಶಾಲೆಯ ಉಪನ್ಯಾಸಕ, ಪಂಡಿತ ಪ್ರಹ್ಲಾದಾಚಾರ್ಯ ಕಾನಡೆ ಅವರಿಗೆ ಮತ್ತು 10 ವಿದ್ವಾಂಸರಿಗೆ ಅಥರ್ವೋದ್ಘೋಷ ಸುಗ್ರೀವ - ಸುವ್ರತ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಇಲ್ಲಿನ ಬಾರ್ಕೂರಿನ ಭಂಡಾರಕೇರಿ ಮೂಲ ಮಠದಲ್ಲಿ 47ನೇ ಚಾತುರ್ಮಾಸ ಮತ್ತು ಕೀರ್ತಿಶೇಷ ಶ್ರೀ ವಿದ್ಯಾಮಾನ್ಯತೀರ್ಥರ ಪೀಠಾರೋಹಣ ಶತಮಾನೋತ್ಸವ ಸಂಭ್ರಮಾಚರಣೆ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ ಭಂಡಾರಕೇರಿ ಮಠದ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಿದರು.
ನಂತರ ಅನುಗ್ರಹ ಸಂದೇಶ ನೀಡಿದ ಅವರು, ಸಮಗ್ರವಾಗಿ ಅಥರ್ವ ವೇದವನ್ನು ಅಧ್ಯಯನ ಮಾಡುವ ವಿದ್ವಾಂಸರ ಸಂಖ್ಯೆ ಇತ್ತೀಚಿನ ವರ್ಷದಲ್ಲಿ ಕಡಿಮೆಯಾಗುತ್ತಿದೆ. ಆದ ಕಾರಣ ಅಂಥವರನ್ನು ಹುಡುಕಿ ಗೌರವಿಸುವುದು ಮತ್ತು ಪ್ರಾಚೀನ ಭಾರತೀಯ ವೇದ ವಿದ್ಯೆ ಪ್ರಸಾರಕ್ಕೆ ಪ್ರೋತ್ಸಾಹಿಸುವುದಕ್ಕಾಗಿ ಈ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತಿದೆ ಎಂದರು.ಈ ಚಾತುರ್ಮಾಸದ ಸಂದರ್ಭದಲ್ಲಿ ರಾಷ್ಟ್ರದ ವಿವಿಧ ಭಾಗದ ಒಟ್ಟು 100 ಮಂದಿ ವೇದ ವಿದ್ವಾಂಸರನ್ನು ಗುರುತಿಸಿ ಸಮ್ಮಾನ ಮಾಡುವ ಮಹತ್ತರ ಉದ್ದೇಶ ಹೊಂದಲಾಗಿದೆ ಎಂದು ಘೋಷಿಸಿದರು.
ಮುಖ್ಯ ಅತಿಥಿಗಳಾಗಿ ಆನೆಗುಡ್ಡೆ ವಿನಾಯಕ ದೇವಸ್ಥಾನದ ಪ್ರಧಾನ ಅರ್ಚಕ ಆಚಾರ್ಯ ಸೂರ್ಯನಾರಾಯಣ ಉಪಾಧ್ಯಾಯ ಆಗಮಿಸಿದ್ದರು. ಸನ್ಮಾನಿತ ವಿದ್ವಾಂಸರ ಪರವಾಗಿ ಮಲ್ಹಾರ ಆಚಾರ್ಯ ಹಾಗೂ ಲಕ್ಷ್ಮೀನಾರಾಯಣ ಭಟ್ಟರು ಪ್ರತಿಕ್ರಿಯೆ ನೀಡಿ, ಶ್ರೀ ವಿದ್ಯೇಶ ತೀರ್ಥರ ಚಿಂತನೆ, ಕಾರ್ಯಕ್ಷಮತೆ ಮತ್ತು ವಿದ್ವತ್ ವಲಯಕ್ಕೆ ನೀಡುತ್ತಿರುವ ಅನನ್ಯ ಪ್ರೋತ್ಸಾಹಗಳನ್ನು ಪ್ರಶಂಸಿಸಿದರು.ಈ ಚಾತುರ್ಮಾಸ ನಿಮಿತ್ತ ಚತುರ್ವೇದ ಪಾರಾಯಣ ಮಹಾಯಜ್ಞ ಸರಣಿಗೆ ಸಂಕಲ್ಪ ಮಾಡಲಾಗಿದ್ದು, 9 ದಿನಗಳ ಕಾಲ ಅಥರ್ವಣ ವೇದದ ಶೌನಕ ಶಾಖೆ ಪಾರಾಯಣ ಮತ್ತು ರಾಮ-ಕೃಷ್ಣ ಮಂತ್ರ ಜಪ ನಡೆಸಿದ ವಿವಿಧ ರಾಜ್ಯಗಳ ವಿದ್ವಾಂಸರಾದ ಕಿರಣಾಚಾರ್ಯ, ದಿನೇಶಾಚಾರ್ಯ, ಮುಕುಲಾಚಾರ್ಯ, ಸಚಿನ್ ಆಚಾರ್ಯ, ಮಲ್ಹಾರ ಆಚಾರ್ಯ, ದೇವಿದಾಸಾಚಾರ್ಯ, ಪದ್ಮನಾಭ ಆಚಾರ್ಯ ಜೋಶಿ ಅವರಿಗೆ ಅಥರ್ವೋದ್ಘೋಷ ಸುಗ್ರೀವ ಪ್ರಶಸ್ತಿ ವಿದ್ವಾಂಸರಾದ ಲಕ್ಷ್ಮೀನಾರಾಯಣ ಭಟ್ಟ, ಸುಬ್ರಹ್ಮಣ್ಯ ಸರಳಾಯ ಅವರಿಗೆ ಅಥರ್ವೋದ್ಘೋಷ ಸುವ್ರತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು.