ಕ್ರೀಡಾಪಟುಗಳು ಆರೋಗ್ಯ ಕಾಪಾಡಲಿ

| Published : Sep 09 2025, 01:01 AM IST

ಸಾರಾಂಶ

ಕ್ರೀಡಾಪಟುಗಳು ಸಹ ಆರೋಗ್ಯವನ್ನು ಕಾಪಾಡಿಕೊಳ್ಳಲು ಗಮನ ಹರಿಸಬೇಕು.

ಹೊನ್ನಾವರ: ಆರೋಗ್ಯವೇ ಭಾಗ್ಯ ಅನ್ನುವ ಮಾತಿದೆ. ಕ್ರೀಡಾಪಟುಗಳು ಸಹ ಆರೋಗ್ಯವನ್ನು ಕಾಪಾಡಿಕೊಳ್ಳಲು ಗಮನ ಹರಿಸಬೇಕು. ದೈಹಿಕ ಮತ್ತು ಮಾನಸಿಕವಾಗಿ ಗಟ್ಟಿಯಾಗಲು ಕ್ರೀಡಾಕೂಟಗಳು ಸಹಕಾರಿ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

ಅವರು ಉಪನಿರ್ದೇಶಕರ ಕಚೇರಿ, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಇಲಾಖೆ, ಕಾರವಾರ ಮತ್ತು ಎಂಪಿಇ ಸೊಸೈಟಿಯ ಎಸ್.ಡಿಎಂ ಪದವಿ ಪೂರ್ವ ಮಹಾವಿದ್ಯಾಲಯ ಇದರ ಸಂಯುಕ್ತ ಆಶ್ರಯದಲ್ಲಿ ಎಸ್.ಡಿಎಂ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆದ ೨೦೨೫-೨೬ನೇ ಸಾಲಿನ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜು ಇಲಾಖೆ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ನಿರ್ಣಾಯಕರ ತೀರ್ಪಿಗೆ ಗೌರವಿಸಿ ಕ್ರೀಡೆಯನ್ನು ಯಶಸ್ವಿಯಾಗಿ ನಡೆಸಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತಾಲೂಕು ಶಿಕ್ಷಣಾಧಿಕಾರಿ ವಿನಾಯಕ ಅವಧಾನಿ ಮಾತನಾಡಿ,

ಇವತ್ತು ನಾವು ಹಲವು ಕಾಯಿಲೆಯಿಂದ ಬಳಲುತ್ತಿದ್ದೇವೆ. ಇದಕ್ಕೆ ಕಾರಣ ನಾವು ವಿದ್ಯಾರ್ಥಿಗಳಾಗಿದ್ದಾಗ ಕ್ರೀಡೆಯಿಂದ ದೂರವಾಗಿದ್ದು ಕಾರಣ ಎಂದು ಅನಿಸುತ್ತದೆ. ದೈಹಿಕ ಕ್ಷಮತೆ ಕಾಪಾಡಿಕೊಳ್ಳಲು ಕ್ರೀಡೆ ಸಹಕಾರಿ ಎಂದರು.

ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂ‌ಪಿಇ ಸೊಸೈಟಿಯ ಅಧ್ಯಕ್ಷ ಕೃಷ್ಣಮೂರ್ತಿ ಭಟ್ ಶಿವಾನಿ ಮಾತನಾಡಿ, ನಾವು ತಾಲೂಕಿನ ಎಲ್ಲ ಕಾಲೇಜಿನ ಜೊತೆ ಉತ್ತಮ‌ ಸಂಬಂಧ ಹೊಂದಿದ್ದೇವೆ. ಶಾಸಕರು ನಮಗೆ ಸ್ಟೇಡಿಯಂ ಮಾಡಿಕೊಡುವ ಭರವಸೆ ನೀಡಿದ್ದಾರೆ. ಇದು ನಮಗೆ ದೊಡ್ಡ ಕೊಡುಗೆಯಾಗಲಿದೆ. ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಉತ್ತಮ ಸಾಧನೆಯನ್ನು ಮಾಡಿ ಎಂದು ಶುಭ ಹಾರೈಸಿದರು.

ಎಸ್.ಡಿಎಂ ಪದವಿ ಕಾಲೇಜಿನ ಪ್ರಾಚಾರ‍್ಯ ಡಾ.ಡಿ.ಎಲ್. ಹೆಬ್ಬಾರ್, ಪಟ್ಟಣ ಪಂಚಾಯತ್ ಚೇರ್ಮನ್ ಮಹೇಶ ಮೇಸ್ತ, ತಾಲೂಕಿನ ಹತ್ತು ಕಾಲೇಜಿನ ಪ್ರಾಚಾರ್ಯರು, ಪದವಿಪೂರ್ವ ಕಾಲೇಜಿ‌ನ ದೈಹಿಕ ಶಿಕ್ಷಣ ನಿದೇರ್ಶಕಿ ರೇಣುಕಾ ಮೇಸ್ತ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಕ್ರೀಡಾ ತರಬೇತುದಾರ ಪ್ರಭಾಕರ ಗೌಡ ಪ್ರತಿಜ್ಞಾವಿಧಿ ಬೋಧಿಸಿದರು. ಎಸ್.ಡಿ.ಎಂ. ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಎಸ್.ಡಿ.ಎಂ ಪದವಿಪೂರ್ವ ಕಾಲೇಜು ಪ್ರಾಚಾರ‍್ಯ ಎಂ.ಎಚ್.ಭಟ್ ಸ್ವಾಗತಿಸಿದರು. ಉಪನ್ಯಾಸಕ ಇಮಾಮ್ ಶೇಖ್ ವಂದಿಸಿದರು. ಉಪನ್ಯಾಸಕ ವಿನಾಯಕ ಭಟ್ ಹಾಗೂ ಉಪನ್ಯಾಸಕಿ ಕಾವೇರಿ ಮೇಸ್ತ ನಿರೂಪಿಸಿದರು.