ಸಾರಾಂಶ
ಉಪ್ಪಿನಂಗಡಿ: ಆಟಿ (ಆಷಾಢ) ಅಮಾವಾಸ್ಯೆಯ ದಿನ ಗುರುವಾರ ಸಂಗಮ ಕ್ಷೇತ್ರ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ಸನ್ನಿಧಿಯಲ್ಲಿ ಅಸಂಖ್ಯಾತ ಭಕ್ತಾದಿಗಳಿಂದ ಪವಿತ್ರ ತೀರ್ಥ ಸ್ನಾನ ಹಾಗೂ ಗತಿಸಿದ ಹಿರಿಯರಿಗೆ ಸದ್ಗತಿ ಬಯಸಿ ತಿಲಹೋಮಾದಿ ಪಿಂಡ ಪ್ರಧಾನ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.
ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ನೇತ್ರಾವತಿ ಮತ್ತು ಕುಮಾರಧಾರಾ ನದಿ ಸಂಗಮ ಕ್ಷೇತ್ರದಲ್ಲಿರುವ ಇಲ್ಲಿನ ದೇವಾಲಯಕ್ಕೆ ಗುರುವಾರ ಬೆಳಗ್ಗೆಯಿಂದಲೇ ರಾಜ್ಯ, ಹೊರ ರಾಜ್ಯಗಳಿಂದ ಆಗಮಿಸಿದ ಸಹಸ್ರಾರು ಭಕ್ತಾದಿಗಳು ನವ ದಾನ್ಯಗಳನ್ನು ಗಂಗಾಮಾತೆಗೆ ಸಮರ್ಪಿಸಿ ಗತಿಸಿದ ಹಿರಿಯರ ಸದ್ಗತಿಯನ್ನು ಬಯಸಿದರು. ಇನ್ನು ಹಲವರು ಪುರೋಹಿತರ ಮುಖೇನ ತಮ್ಮ ತಮ್ಮ ಗತಿಸಿದ ಹಿರಿಯರಿಗೆ ತಿಲಹೋಮ, ಪಿಂಡ ಪ್ರಧಾನವನ್ನು ನೆರೆವೇರಿಸಿ ಹಿರಿಯರಿಗೆ ಸದ್ಗತಿ ಬಯಸಿದರು.ಕಷಾಯ ವಿತರಣೆ: ದೇವಾಲಯದಲ್ಲಿ ಬೆಳಗ್ಗೆ ಬಂದ ಭಕ್ತರಿಗೆ ಪರಂಪರಾಗತವಾಗಿ ಬಂದ ಆರೋಗ್ಯ ರಕ್ಷಣೆಯ ನಿಟ್ಟಿನಲ್ಲಿ ಆಟಿ ಅಮಾವಾಸ್ಯೆಯ ದಿನದಂದು ಔಷಧೀಯ ಅಂಶ ಹೊಂದಿರುವ ಹಾಲೆ ಮರದ ತೊಗಟಿನ ಕಷಾಯ ವಿತರಿಸಲಾಯಿತು. ಮಧ್ಯಾಹ್ನ ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ ನಡೆಯಿತು. ಮಹಿಳೆಯರಿಂದಲೂ ಪಿಂಡ ಪ್ರದಾನ:ತಮ್ಮ ಕುಟುಂಬದ ಹಿರಿಯರ ಸದ್ಗತಿಗೆ ಸಾಮಾನ್ಯವಾಗಿ ಪುರುಷರಿಂದ ನಡೆಸುವ ಪಿಂಡ ಪ್ರದಾನಾದಿ ಕಾರ್ಯಗಳನ್ನು ಶ್ರೀ ಕ್ಷೇತ್ರದಲ್ಲಿ ಕೆಲ ಮಹಿಳೆಯರು ತಾವೇ ಕಾರ್ಯವನ್ನು ನೆರವೇರಿಸಿ ಗಮನ ಸೆಳೆದರು. ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನಾಯ್ಕ್, ಸದಸ್ಯರಾದ ವೆಂಕಪ್ಪ ಪೂಜಾರಿ, ಗೋಪಾಲಕೃಷ್ಣ ರೈ , ಕೃಷ್ಣರಾವ್ ಆರ್ತಿಲ, ವ್ಯವಸ್ಥಾಪಕ ವೆಂಕಟೇಶ್ ರಾವ್, ಸಿಬ್ಬಂದಿ ಪದ್ಮನಾಭ ಕುಲಾಲ್, ಕೃಷ್ಣಪ್ರಸಾದ್, ದಿವಾಕರ ಗೌಡ , ಸುಧಾಕರ ಶೆಟ್ಟಿ ಸಹಕರಿಸಿದರು.