ಗದುಗಿನಲ್ಲಿ ಅತಿರುದ್ರ ಮಹಾಯಾಗ ಕಿರಿಯ ಕುಂಭಮೇಳ ಸಂಪನ್ನ

| Published : Nov 20 2025, 01:00 AM IST

ಸಾರಾಂಶ

ಇಲ್ಲಿ ನಡೆದ ಮಹಾಯಾಗ ಬರೀ ಗದುಗಿನ ಜನತೆಯ ಕಲ್ಯಾಣಕ್ಕಾಗಿ ಅಲ್ಲ, ಇದು ಜಿಲ್ಲೆ, ರಾಜ್ಯ, ರಾಷ್ಟ್ರಕ್ಕೆ ಅಲ್ಲದೆ, ಇಡೀ ಜಗತ್ತಿನ ಕಲ್ಯಾಣಕ್ಕಾಗಿ ಆಗಿದೆ.

ಗದಗ: ಅತಿರುದ್ರ ಯಾಗ ಎಂದರೆ ಕೊನೆ ಇಲ್ಲದ ಯಾಗ ಎಂದರ್ಥ. ಗದುಗಿನ ಜನತೆಯ ಸಂಕಲ್ಪದಿಂದ ಮಾಡಿದ ಈ ಮಹಾಯಾಗ ಮುಂದಿನ ದಿನಗಳಲ್ಲಿ ಸ್ಮರಣೀಯ ದಿನವಾಗಲಿದೆ. ಇಲ್ಲಿನ ಜನತೆಗೆ ಶಿವನು ಸದಾ ರಕ್ಷಣೆ ಮಾಡುವನು ಎಂದು ನಾಗಾಸಾಧು ಮಹಾಂತ ಸಹದೇವಾನಂದ ಗಿರಿಜಿ ಮಹಾರಾಜರು ತಿಳಿಸಿದರು.

ಮಂಗಳವಾರ ರಾತ್ರಿ ನಗರದ ವಿದ್ಯಾದಾನ ಸಮಿತಿಯ ಮೈದಾನದಲ್ಲಿ ನ. 11ರಿಂದ 18ರ ವರೆಗೆ ಜರುಗಿದ ಅತಿರುದ್ರ ಮಹಾಯಾಗ ಮತ್ತು ಕಿರಿಯ ಕುಂಭಮೇಳದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಈ ಮಹಾಯಾಗ ವೈಯಕ್ತಿಕವಾಗದೆ ಲೋಕ ಕಲ್ಯಾಣಕ್ಕಾಗಿ ಮಾಡಲಾಗಿದೆ. ಈ ಮಹಾಯಾಗದಲ್ಲಿ ಸೇವೆ ಸಲ್ಲಿಸಿದ ಪ್ರತಿಯೊಬ್ಬರಿಗೆ ವರ್ಷದೊಳಗೆ ಶಿವನು ಒಳ್ಳೆಯದನ್ನೇ ಮಾಡುತ್ತಾನೆ. ಎಲ್ಲರೂ ಶಕ್ತಿ ಮೀರಿ ಸೇವೆ ಮಾಡಿದ್ದಾರೆ. ಇದು ನಮ್ಮ ಪೂರ್ವಜನ್ಮದ ಪುಣ್ಯದ ಫಲವಾಗಿ ಶಿವನು ನಾವೆಲ್ಲರೂ ಮಹಾಯಾಗದಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದಾನೆ. ಇಲ್ಲಿ ನಡೆದ ಮಹಾಯಾಗ ಬರೀ ಗದುಗಿನ ಜನತೆಯ ಕಲ್ಯಾಣಕ್ಕಾಗಿ ಅಲ್ಲ, ಇದು ಜಿಲ್ಲೆ, ರಾಜ್ಯ, ರಾಷ್ಟ್ರಕ್ಕೆ ಅಲ್ಲದೆ, ಇಡೀ ಜಗತ್ತಿನ ಕಲ್ಯಾಣಕ್ಕಾಗಿ ನಡೆದಿದೆ ಎಂದರು.

ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಸಂತರ ಆಗಮನ ವಸಂತದ ಆಗಮನವಾದಂತೆ. ವಸಂತದ ಗಾಳಿ ಬಾಡಿದ ಗಿಡದಲ್ಲಿ ಚಿಗುರು ಮೂಡಿಸುವಂತೆ ಸಾಧು- ಸಂತರು ಸತ್ತಂತಿರುವ ಜನರ ಬದುಕನ್ನು ಹಸನಗೊಳಿಸುತ್ತಾರೆ. ಹೋಮ ಮಾಡಿದರೆ ನಾನು ಮತ್ತು ನನ್ನ ಕುಟುಂಬಕ್ಕೆ ಉತ್ತಮ ಫಲ ನೀಡಲಿ ಎಂಬುದಾಗಿದೆ ಎಂದರು.

ಅತಿರುದ್ರ ಮಹಾಯಾಗ ಸೇವಾ ಸಮಿತಿಯ ಗೌರವಾಧ್ಯಕ್ಷ, ನರಗುಂದ ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಗದುಗಿನಲ್ಲಿ ನಡೆದ ಅತಿರುದ್ರ ಮಹಾಯಾಗ ಕಿರಿಯ ಕುಂಭಮೇಳವು ಯಶಸ್ವಿಯಾಗಿ ನಡೆಯಲು ಮಹಾಂತ ಸಹದೇವಾನಂದ ಗಿರಿಜಿ ಮಹಾರಾಜರು ಕಾರಣರಾಗಿದ್ದಾರೆ ಎಂದರು.

ವಿಧಾನಪರಿಷತ್‌ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಈ ಕಾರ್ಯಕ್ರಮ ಯಶಸ್ವಿಯಾಗಲು ಮಹಿಳೆಯರ ಕುಂಭಮೇಳವು ಪ್ರಮುಖ ಪಾತ್ರ ವಹಿಸಿದೆ. ಕಾರ್ಯಕ್ರಮದಲ್ಲಿ ಸೇವೆ ಸಲ್ಲಿಸಿದವರು ಸ್ವಾರ್ಥಕ್ಕಾಗಿ ಅಲ್ಲ, ಲೋಕ ಕಲ್ಯಾಣಕ್ಕಾಗಿ ತನು- ಮನ- ಧನದಿಂದ ಸೇವೆ ಮಾಡಿದ್ದಾರೆ ಎಂದರು.

ಅತಿರುದ್ರ ಮಹಾಯಾಗ ಕಿರಿಯ ಕುಂಭಮೇಳ ಸೇವಾ ಸಮಿತಿಯ ಅಧ್ಯಕ್ಷ ಕಿರಣ ಭೂಮಾ ಮಾತನಾಡಿ, ಗದುಗಿನಲ್ಲಿ ಎಂಟು ದಿನಗಳವರೆಗೆ ನಡೆದ ಕುಂಭಮೇಳ ಇತಿಹಾಸ ನಿರ್ಮಾಣ ಮಾಡಿದೆ. ಜಾತ್ಯತೀತವಾಗಿ, ಪಕ್ಷಾತೀತವಾಗಿ ತಿಂಗಳಿಂದ ಎಲ್ಲರೂ ಕೆಲಸ ಮಾಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ ಎಂದರು.

ಮಹಾಂತ ಸಹದೇವಾನಂದ ಗಿರಿ ಮಹಾರಾಜರು ನೇತೃತ್ವ ವಹಿಸಿದ್ದರು. ಶಿರೋಳದ ಯಚ್ಚರೇಶ್ವರ ಸ್ವಾಮಿಗಳು ಸಮ್ಮುಖ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಅತಿರುದ್ರ ಮಹಾಯಾಗ ಕಿರಿಯ ಕುಂಭಮೇಳ ಸೇವಾ ಸಮಿತಿಯ ಪದಾಧಿಕಾರಿಗಳಾದ ಎಸ್.ಎಚ್. ಶಿವನಗೌಡರ, ರವಿ ದಂಡಿನ, ಫಕ್ಕೀರಸಾ ಭಾಂಡಗೆ, ಬಿ.ಬಿ. ಅಸೂಟಿ, ರಾಜು ಕುರಡಗಿ, ಬಸವರಾಜ ಬಿಂಗಿ, ವಿ.ಕೆ. ಗುರುಮಠ, ಪ್ರಕಾಶ ಬೊಮ್ಮನಹಳ್ಳಿ, ಗೋಪಾಲ ಅಗರವಾಲ, ಅವಿನಾಶ ಜೈನ, ವೆಂಕಟೇಶ ಕುಲಕರ್ಣಿ, ಲಿಂಗರಾಜ ಗುಡಿಮನಿ, ರಾಘವೇಂದ್ರ ಬರಾಡ, ಸಂತೋಷ ಚನ್ನಪ್ಪನವರ, ನಾರಾಯಣ ಕುಡತರಕರ, ರವಿ ಗುಂಜೀಕರ, ರಮೇಶ ಸಜ್ಜಗಾರ, ವಿಜಯಲಕ್ಷ್ಮಿ ಮಾನ್ವಿ, ಪ್ರೀತಿ ಹೊನಗುಡಿ, ಅನುರಾಧಾ ಬಸವಾ, ಮೇಘಾ ಮುದಗಲ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.