ನಿಡಗುಂದಿ ತಾಲೂಕಿನ ಗೊಳಸಂಗಿಯಲ್ಲಿದ್ದ ಕೆನರಾ ಬ್ಯಾಂಕ್ ಎಟಿಎಂ ಒಡೆದು ಕಳ್ಳತನ ಮಾಡಿದ್ದ ಮೂವರು ಅಂತಾರಾಜ್ಯ ಕಳ್ಳರನ್ನು ಕೂಡಗಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ವಿಜಯಪುರ
ನಿಡಗುಂದಿ ತಾಲೂಕಿನ ಗೊಳಸಂಗಿಯಲ್ಲಿದ್ದ ಕೆನರಾ ಬ್ಯಾಂಕ್ ಎಟಿಎಂ ಒಡೆದು ಕಳ್ಳತನ ಮಾಡಿದ್ದ ಮೂವರು ಅಂತಾರಾಜ್ಯ ಕಳ್ಳರನ್ನು ಕೂಡಗಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹರಿಯಾಣದ ಸಾಹಿಲ್ ಮೆಹಮೂದ್, ಉತ್ತರ ಪ್ರದೇಶದ ಕಮರಿಯಾಬ್ ಸತ್ತಾರ, ಉತ್ತರ ಪ್ರದೇಶದ ಆಕಾಶ ತ್ಯಾಗಿ ಬಂಧಿತರು. ಬಂಧಿತ ಮೂವರಿಂದ ಕಳ್ಳತನ ಮಾಡಿದ ₹3,60,000 ನಗದು, ಕೃತ್ಯಕ್ಕೆ ಬಳಸಿದ ಎಂಎಚ್ 12 ಎಕ್ಸ್‌ಎಚ್ 5112 ನಂಬರಿನ ಸ್ಕಾರ್ಪಿಯೋ ಜೀಪ್, ಸ್ಕ್ರೂ ಡ್ರೈವರ್ ಹಾಗೂ ಗ್ಯಾಸ್ ಕಟರ್‌ನ್ನು ವಶಪಡಿಸಿಕೊಳ್ಳಲಾಗಿದೆ. ಈ ಕೃತ್ಯದಲ್ಲಿ ಇನ್ನೂ ಮೂವರು ಭಾಗಿಯಾಗಿರುವ ಸಂಶಯವಿದ್ದು, ಅವರ ಪತ್ತೆ ಕಾರ್ಯ ಮುಂದುವರಿಸಲಾಗಿದೆ ಎಂದು ಎಸ್‌ಪಿ ಲಕ್ಷ್ಮಣ ನಿಂಬರಗಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಘಟನೆ ವಿವರ:
ಸೆ.2ರಂದು ಮಧ್ಯರಾತ್ರಿ ನಿಡಗುಂದಿ ತಾಲೂಕಿನ ಗೊಳಸಂಗಿ ಗ್ರಾಮದಲ್ಲಿನ ಎಟಿಎಂ ಬೀಗ ಮುರಿದು ಎಟಿಎಂ ಮಷಿನ್ ಅನ್ನು ಗ್ಯಾಸ್ ಕಟರ್‌ನಿಂದ ಕತ್ತರಿಸಿದ್ದ ದುಷ್ಕರ್ಮಿಗಳು ಮಷಿನ್‌ನಲ್ಲಿದ್ದ ₹19,29,000 ಹಣ ಇಡುವ ಕ್ಯಾಸೆಟ್ ಸಹಿತ ಕಳವು ಮಾಡಿಕೊಂಡು ಎಸ್ಕೇಪ್ ಆಗಿದ್ದರು. ಈ ಕುರಿತು ಗೊಳಸಂಗಿ ಕೆನರಾ ಬ್ಯಾಂಕ್ ಶಾಖೆಯ ಮ್ಯಾನೇಜರ್ ಶರಣಪ್ಪ ಹೊನವಾಡ ಕೂಡಗಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.ವಿಜಯಪುರ ಎಸ್‌ಪಿ ಲಕ್ಷ್ಮಣ ನಿಂಬರಗಿ ಅವರು ಡಿವೈಎಸ್‌ಪಿ ಚಂದ್ರಕಾಂತ ನಂದರೆಡ್ಡಿ, ಸಿಪಿಐ ಶರಣಗೌಡ ಗೌಡರ, ಪಿಎಸ್‌ಐಗಳಾದ ಮಲ್ಲಿಕಾರ್ಜುನ ತಳವಾರ, ವಿ.ಎಚ್. ಹತ್ತಳ್ಳಿ, ಯತೀಶ ಕೆ.ಎನ್, ಸಂಜಯ ತಿಪ್ಪಾರೆಡ್ಡಿ, ಅಶೋಕ ಹಾಗೂ ವಿವಿಧ ಸಿಬ್ಬಂದಿ ಒಳಗೊಂಡ ಒಟ್ಟು 4 ಪ್ರತ್ಯೇಕ ತನಿಖಾ ತಂಡಗಳನ್ನು ರಚನೆ ಮಾಡಿ ತನಿಖೆಗೆ ವಹಿಸಿದ್ದರು.
ಮಧ್ಯಪ್ರದೇಶ ರಾಜ್ಯದ ಧಾರ್ ಜಿಲ್ಲೆಯ ಕಾನ್ವಾಯ್ ಠಾಣೆಯ ಪೊಲೀಸರ ಸಹಾಯದೊಂದಿಗೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದ ಪತ್ತೆ ಕಾರ್ಯದಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ ತನಿಖಾ ತಂಡಗಳ ಅಧಿಕಾರಿ ಹಾಗೂ ಸಿಬ್ಬಂದಿಯ ಕರ್ತವ್ಯವನ್ನು ಎಸ್ಪಿ ನಿಂಬರಗಿ ಶ್ಲಾಘಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಡಿವೈಎಸ್‌ಪಿ ಚಂದ್ರಕಾಂತ ನಂದರೆಡ್ಡಿ, ಸಿಪಿಐಗಳಾದ ಶರಣಗೌಡ ಗೌಡರ, ಆರೀಫ್ ಮುಶಾಪುರಿ, ಪಿಎಸ್‌ಐಗಳು ಹಾಗೂ ಸಿಬ್ಬಂದಿ ಇದ್ದರು.