ಸ್ಥಳೀಯ ಕಾಂಗ್ರೆಸ್ ಮುಖಂಡರು ಪವರ್ ಕಂಪನಿಯೊಂದಿಗೆ ಭಾಗಿಯಾಗಿ ಈ ರೀತಿ ಕಾರ್ಯಕ್ಕೆ ಮುಂದಾಗಿದ್ದಾರೆ
ಕುಕನೂರು: ತಾಲೂಕಿನ ರ್ಯಾವಣಕಿ ಗ್ರಾಮದಲ್ಲಿ ಹೈ ಪವರ್ ವಾಯರ್ ಟ್ರಾನ್ಸ್ಮಿಶನ್ ಪರಿಹಾರ ನೀಡುವಲ್ಲಿ ರೈತರಿಗೆ ತಾರತಮ್ಯ ಆಗುತ್ತಿದೆ ಎಂದು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗಿಯಾದವರ ಮೇಲೆ ದಲಿತ ಮುಖಂಡರು ಸುಖಾಸುಮ್ಮನೆ ಅಟ್ರಾಸಿಟಿ ಕೇಸ್ ದಾಖಲು ಮಾಡಿರುವುದು ಸರಿಯಲ್ಲ. ಇದು ರೈತರ ಹತ್ತಿಕ್ಕುವ ಯತ್ನ ಎಂದು ರಾಜ್ಯ ಗೋರ ಸೇನಾ ಪ್ರಧಾನ ಕಾರ್ಯದರ್ಶಿ ಸುರೇಶ ಬಳೂಟಗಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತ ಮುಖಂಡ ಮಲ್ಲನಗೌಡ ಕೋನನಗೌಡ, ಶಿವು ಕಳವಳಕೇರಿ ಹಾಗೂ ಗಿರೀಶ ದೇಸಾಯಿ ಅವರ ಮೇಲೆ ಅಟ್ರಾಸಿಟಿ ಕೇಸ್ ದಾಖಲು ಮಾಡಿದ್ದಾರೆ. ಇದು ಯಾವ ನ್ಯಾಯ. ಸ್ಥಳೀಯ ಕಾಂಗ್ರೆಸ್ ಮುಖಂಡರು ಪವರ್ ಕಂಪನಿಯೊಂದಿಗೆ ಭಾಗಿಯಾಗಿ ಈ ರೀತಿ ಕಾರ್ಯಕ್ಕೆ ಮುಂದಾಗಿದ್ದಾರೆ. ರೈತರಿಗೆ ನ್ಯಾಯ ಕೊಡಬೇಕಾದ ಸಚಿವ ಬಸವರಾಜ ರಾಯರಡ್ಡಿ ಅವರು ಸಹ ತಮ್ಮ ಹಿಂಬಾಲಕರ ಮಾತು ಕೇಳಿ ಹೋರಾಟಗಾರರ ಮೇಲೆ ಕೇಸ್ ದಾಖಲಿಸಲು ಮುಂದಾಗಿದ್ದಾರೆ. ಇದು ಸಲ್ಲದು ಎಂದರು.ಮುಖಂಡ ಜಗದೀಶ ಸೂಡಿ ಮಾತನಾಡಿ, ಪ್ರತಿಭಟನಾಕಾರರ ಮೇಲೆ ಕೇಸ್ ದಾಖಲಿಸುವುದು ದುರಂತವೇ ಸರಿ. ಸಚಿವ ರಾಯರಡ್ಡಿ ಅವರ ಆಪ್ತ ನವಲಿ ಹಿರೇಮಠ ಅವರ ಹೆಸರು, ಟೆಲ್ಲಾ ವಿಂಡ್ ಸೋಲಾರ್ ವೈಯರ್ ಅಳವಡಿಕೆಯಲ್ಲಿ ಕೇಳಿ ಬರುತ್ತಿದ್ದು, ಅವರ ಮೂಲಕ ಸಚಿವರು ಈ ರೀತಿ ಕಾರ್ಯ ಮಾಡುತ್ತಿದ್ದಾರೆ ಎಂದು ದೂರಿದರು.
ಪ್ರಮುಖರಾದ ಶರಣಯ್ಯ ಹುಣಸಿಮರದ, ದೇವಪ್ಪ ಹರಿಜನ, ಮಹೇಶ ಹಿರೇಮನಿ, ಮಹಾಂತೇಶ ಕೌದಿ, ರಾಘವೇಂದ್ರ ಬಳಗೇರಿ, ಗವಿಸಿದ್ದಪ್ಪ ದೊಡ್ಡಮನಿ, ಶಿವು ನರೇಗಲ್ಲ ಇದ್ದರು.