ಸಾರಾಂಶ
ಅಯೋಧ್ಯೆಯಲ್ಲಿ ಜ.22ರಂದು ಭಗವಾನ್ ಶ್ರೀರಾಮಮಂದಿರ ಲೋಕಾರ್ಪಣೆಯಾಗುತ್ತಿದೆ. ಇದನ್ನು ನಾವೆಲ್ಲರೂ ಜಾತಿ, ಮತ, ಪಂಥ ಹಾಗೂ ಪಕ್ಷ ರಾಜಕಾರಣವನ್ನು ಮೀರಿ ಸಂಭ್ರಮಿಸಬೇಕು ಎಂದು ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಕೆಆರ್ ಪೇಟೆ
ಅಯೋಧ್ಯೆಯಲ್ಲಿ ಜ.22ರಂದು ಭಗವಾನ್ ಶ್ರೀರಾಮಮಂದಿರ ಲೋಕಾರ್ಪಣೆಯಾಗುತ್ತಿದೆ. ಇದನ್ನು ನಾವೆಲ್ಲರೂ ಜಾತಿ, ಮತ, ಪಂಥ ಹಾಗೂ ಪಕ್ಷ ರಾಜಕಾರಣವನ್ನು ಮೀರಿ ಸಂಭ್ರಮಿಸಬೇಕು ಎಂದು ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅಭಿಪ್ರಾಯಪಟ್ಟರು.
ತಾಲೂಕಿನ ಹೇಮಗಿರಿಯಲ್ಲಿ ಬಿಜಿಎಸ್ ಶಿಕ್ಷಣ ಸಂಸ್ಥೆಯಿಂದ ಆಯೋಜಿಸಿದ್ದ ಭೈರವೈಕ್ಯ ಡಾ.ಬಾಲಗಂಗಾಧರನಾಥ ಮಹಾ ಸ್ವಾಮೀಜಿಗಳ ಜಯಂತ್ಯುತ್ಸವ ಹಾಗೂ 11ನೇ ವರ್ಷದ ಪುಣ್ಯ ಸ್ಮರಣೆ ಹಾಗೂ ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
ರಾಮಮಂದಿರ ನಿರ್ಮಾಣದ ಜೊತೆಗೆ ರಾಮ ರಾಜ್ಯದ ನಿರ್ಮಾಣವವೂ ಆಗಬೇಕು. ಈಗ ರಾಮಮಂದಿರ ನಿರ್ಮಾಣದ ಕನಸು ಈಡೇರಿದೆ. ಶೀಘ್ರದಲ್ಲಿಯೇ ನಮ್ಮ ರಾಮ ರಾಜ್ಯ ನಿರ್ಮಾಣದ ಕನಸು ಈಡೇರಲಿ ಎಂದು ಅಶಿಸಿದರು.
ಇಂಗ್ಲಿಷ್ ಕಲಿತ ಮಾತ್ರಕ್ಕೆ ನಾವ್ಯಾರೂ ದೊಡ್ಡವರಾಗಲು ಸಾಧ್ಯವಿಲ್ಲ. ವ್ಯವಹಾರಕ್ಕಾಗಿ ಇಂಗ್ಲಿಷ್ ಕಲಿಯಿರಿ. ಆದರೆ, ನಮ್ಮ ಮಾತೃ ಭಾಷೆಯನ್ನು ಮರೆಯದಿರಿ. ಇಂಗ್ಲಿಷ್ ಭಾಷೆಗೆ ಪಾರಂಪರಿಕ ಇತಿಹಾಸವಿಲ್ಲ.
ಕನ್ನಡ ಮಾತನಾಡುವಾಗ ಸಿಗುವ ಆತ್ಮ ಸಂತೋಷ ಬೇರೆ ಯಾವುದರಿಂದಲೂ ಸಿಗುವುದಿಲ್ಲ. ಕನ್ನಡ ಭಾಷೆಯ ಸೊಗಡು ಅದ್ಭುತ ಎಂದು ಬಣ್ಣಿಸಿದರು.
ಕಲಿಕೆಯ ಹಂತದಲ್ಲಿ ಸಹವಾಸ ಮುಖ್ಯ. ಸಹವಾಸ ದೋಷದಿಂದ ಹಾಳಾಗಬೇಡಿ. ಜ್ಞಾನದ ಬಲದಿಂದ ನೀವು ಎತ್ತರಕ್ಕೆ ಬೆಳೆಯಿರಿ. ಸ್ತುತಿ ನಿಂದೆಗಳು ಬಂದಾಗ ಅದನ್ನು ಮೆಟ್ಟಿ ನಿಲ್ಲುವ ವ್ಯಕ್ತಿತ್ವ ನಿಮ್ಮದಾಗಬೇಕು.
ಒಬ್ಬ ಕಲಾವಿದನಾಗಿ ನಾನು ರಾಜ್ಯದ ಜನಮನದಲ್ಲಿ ಶಾಶ್ವತ ಮುಖ್ಯಮಂತ್ರಿಯಾಗಿದ್ದೇನೆ. ನನ್ನ ಕಣ್ಣ ಮುಂದೆ ರಾಜ್ಯದಲ್ಲಿ 14 ಜನ ಮುಖ್ಯಮಂತ್ರಿಗಳು ಮಾಜಿಯಾಗಿದ್ದಾರೆ. ಆದರೆ, ನಾನು ಮಾತ್ರ ಶಾಶ್ವತ ಮುಖ್ಯಮಂತ್ರಿ. ನನ್ನ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಜಾಗವೇ ಇಲ್ಲ ಎಂದರು.
ಚಿತ್ರ ನಿರ್ದೇಶಕ ಹಾಗೂ ಸಾಹಿತಿ ವಿ.ನಾಗೇಂದ್ರ ಪ್ರಸಾದ್ ಮಾತನಾಡಿ, ಭೈರವೈಕ್ಯ ಬಾಲಗಂಗಧರನಾಥ ಶ್ರೀಗಳ ಸ್ಮರಣೆ ಮಾಡಿ ಶ್ರೀ ಕ್ಷೇತ್ರ ಆದಿ ಚುಂಚನಗಿರಿ ಮಠವನ್ನು ವಿಶ್ವದ ಉದ್ದಗಲಕ್ಕೆ ವಿಸ್ತರಿಸಿದ ಕೀರ್ತಿ ಬಾಲಗಂಗಾಧರನಾಥ ಶ್ರೀಗಳದು ಎಂದು ಬಣ್ಣಿಸಿದರು.
ಮಕ್ಕಳ ಕಲಿಕಾ ಪ್ರಗತಿಯ ಮೇಲೆ ಪೋಷಕರು ಹೆಚ್ಚಿನ ನಿಗಾ ವಹಿಸಬೇಕು. ಮಕ್ಕಳ ಪ್ರಗತಿಗೆ ಅಂಕಗಳಿಕೆಯೇ ಪ್ರದಾನವಲ್ಲ. ಇಂದು ಅಂಕಗಳಿಕೆಯ ಆಚೆಗೂ ಬದುಕಿನ ವ್ಯಾಪ್ತಿ ವಿಸ್ತಾರಗೊಂಡಿದೆ.
ಪ್ರತಿಭೆಯಿದ್ದರೆ ದೇಶ-ವಿದೇಶಗಳಲ್ಲೂ ಅವಕಾಶಗಳಿವೆ. ನಾನಿಂದು ಬದುಕು ಕಟ್ಟಿಕೊಂಡಿರುವುದು ನನ್ನ ಅಂಕಗಳಿಕೆಯಿಂದಲ್ಲ. ಬದಲಾಗಿ ನನ್ನೂಳಗಿನ ಕಲಾವಂತಿಕೆಯಿಂದ ಎಂದರು.
ನಟಿ ಮತ್ತು ನಿರ್ದೇಶಕಿ ರೂಪಾ ಐಯ್ಯರ್ ಮಾತನಾಡಿ, ಸರ್ಟಿಫಿಕೇಟ್ ಶಿಕ್ಷಣಕ್ಕಿಂತ ಸಂಸ್ಕಾರಯುತ ಶಿಕ್ಷಣ ನೀಡಬೇಕು. ಸಂಸ್ಕಾರಯುತ ಮಕ್ಕಳು ದೇಶದ ಆಸ್ತಿಯಾಗುತ್ತಾರೆ ಎಂದರು.
ದಿವ್ಯ ಸಾನಿಧ್ಯ ವಹಿಸಿದ್ದ ಗದಗ ಜಿಲ್ಲೆ ಡಂಬಳದ ಎಡೆಯೂರು ತೋಟಾದಾರ್ಯ ಮಠದ ಡಾ.ತೋಂಟದ ಸಿದ್ದರಾಮ ಸ್ವಾಮೀಜಿಗಳು ಭೈರವೈಕ್ಯಶ್ರೀಗಳ ಪುಣ್ಯ ಸ್ಮರಣೆ ಮಾಡಿದರು.
ಹೇಮಗಿರಿ ಶಾಖಾ ಮಠದ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಅಧ್ಯಕ್ಷತೆ ವಹಿಸಿದ್ದರು. ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ಜಿಪಂ ಮಾಜಿ ಉಪಾಧ್ಯಕ್ಷ ಶೀಳನೆರೆ ಅಂಬರೀಶ್, ಆರ್.ಟಿ.ಓ ಅಧಿಕಾರಿ ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು.