ನೇಹಾ ಹತ್ಯೆ ಬೆನ್ನಲ್ಲೇ ಮತ್ತೊಬ್ಬ ಯುವತಿ ಮೇಲೆ ಹಲ್ಲೆ?

| Published : Apr 24 2024, 02:15 AM IST

ನೇಹಾ ಹತ್ಯೆ ಬೆನ್ನಲ್ಲೇ ಮತ್ತೊಬ್ಬ ಯುವತಿ ಮೇಲೆ ಹಲ್ಲೆ?
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿ ನೇಹಾ ಹಿರೇಮಠ ಹತ್ಯೆ ಬೆನ್ನಲ್ಲೇ ಹಿಂದೂ ಯುವತಿ ಮೇಲೆ ಮುಸ್ಲಿಂ ಯುವಕ ಹಲ್ಲೆ ನಡೆಸಿದ ಘಟನೆ ಇಲ್ಲಿಯ ಕೇಶ್ವಾಪುರ ಕುಸುಗಲ್ ರಸ್ತೆಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ವಿದ್ಯಾರ್ಥಿ ನೇಹಾ ಹಿರೇಮಠ ಹತ್ಯೆ ಬೆನ್ನಲ್ಲೇ ಹಿಂದೂ ಯುವತಿ ಮೇಲೆ ಮುಸ್ಲಿಂ ಯುವಕ ಹಲ್ಲೆ ನಡೆಸಿದ ಘಟನೆ ಇಲ್ಲಿಯ ಕೇಶ್ವಾಪುರ ಕುಸುಗಲ್ ರಸ್ತೆಯಲ್ಲಿ ನಡೆದಿದೆ. ಹಲ್ಲೆ ನಡೆಸಿದ ಯುವಕನನ್ನು ಅಫ್ತಾಬ್ ಶಿರಹಟ್ಟಿ ಎಂದು ಗುರುತಿಸಲಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆರೋಪಿ ಹಣ್ಣಿನ ಅಂಗಡಿ ನಡೆಸುತ್ತಿದ್ದು, ಆತನ ಹಣ್ಣಿನ ಅಂಗಡಿಗೆ ಹೋದಾಗ ಆತ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಯುವತಿ ದೂರು ನೀಡಿದ್ದಾಳೆ. ಕೇಶ್ವಾಪುರ ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‘ನನ್ನ ಸ್ನೇಹಿತೆ ಮೂಲಕ ಅಫ್ತಾಬ್ ಪರಿಚಯನಾಗಿದ್ದ. ಆತ ನನಗೆ ಹಲವು ಉಡುಗೊರೆ ಸಹ ನೀಡಿದ್ದ. ನೇಹಾ ಹತ್ಯೆಯಾದ ಬಳಿಕ ಭಯಗೊಂಡು ನಾನು ಅವುಗಳನ್ನು ಮರಳಿ ಕೊಡಲು ಬಂದಿದ್ದೆ. ಆಗ ಆತ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ. ಚಾಕು ಹಿಡಿದು ಜೀವ ಬೆದರಿಕೆ ಹಾಕಿದ್ದಾನೆ’ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.

ಯುವತಿ ಈ ಘಟನೆಯನ್ನು ಬಜರಂಗದಳ ಸಂಘಟನೆಯವರಿಗೆ ತಿಳಿಸಿದ್ದಾಳೆ. ತಕ್ಷಣ ಕೇಶ್ವಾಪುರ ಪೊಲೀಸ್ ಠಾಣೆಗೆ ಭೇಟಿ ನೀಡಿದ ಬಜರಂಗದಳ ಸದಸ್ಯರು ದೂರು ದಾಖಲಿಸಿಕೊಂಡು ಆರೋಪಿಗೆ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು. ಬಜರಂಗದಳದ ಕಾರ್ಯಕರ್ತ ರಘು ಯಲ್ಲಪ್ಪನವರ ಮಾಧ್ಯಮದವರೊಂದಿಗೆ ಮಾತನಾಡಿ, ಮುಸ್ಲಿಂ ಸಮುದಾಯದ ಅಫ್ತಾಬ್‌, ಪ್ರೀತಿ ಮಾಡು ಎಂದು ಯುವತಿಯನ್ನು ಪೀಡಿಸುತ್ತಿದ್ದ. ಯುವತಿ ಅದನ್ನು ಕಡೆಗಣಿಸಿದ್ದಳು. ಆದ್ದರಿಂದ ಅವಳ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಿದರು.ನೇಹಾ ಕೇಸ್‌ : ಸಿಐಡಿ ತನಿಖೆ ಶುರು ಹುಬ್ಬಳ್ಳಿಗೆ ತಂಡ ಆಗಮನ, ಮಾಹಿತಿ ಸಂಗ್ರಹ

ಇಲ್ಲಿನ ಬಿವಿಬಿ ಕ್ಯಾಂಪಸ್‌ನಲ್ಲಿ ಹಾಡಹಗಲೇ ಹತ್ಯೆಗೀಡಾದ ನೇಹಾ ಹಿರೇಮಠ ತನಿಖೆಯನ್ನು ಸಿಐಡಿಯೂ ಮಂಗಳವಾರ ಶುರು ಮಾಡಿದೆ.

ಸರ್ಕಾರ ಈ ಪ್ರಕರಣವನ್ನು ಪೊಲೀಸ್‌ ಇಲಾಖೆಯಿಂದ ಸಿಐಡಿಗೆ ವಹಿಸುತ್ತಿದ್ದಂತೆ ಸೋಮವಾರ ರಾತ್ರಿಯೇ ನಗರಕ್ಕೆ ಆಗಮಿಸಿದ ತಂಡ ಮಂಗಳವಾರ ತನಿಖೆ ಶುರು ಮಾಡಿತು. ಮಂಗಳವಾರ ಬೆಳಗ್ಗೆ ಪೊಲೀಸ್‌ ಕಮಿಷನರ್‌ ಜತೆಗೆ ಚರ್ಚೆ ನಡೆಸಿ ಪ್ರಕರಣದ ಮಾಹಿತಿ ಪಡೆಯಿತು. ಅಲ್ಲದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈವರೆಗೂ ಆಗಿರುವ ತನಿಖೆಯ ಕಡತಗಳನ್ನು ವಶಕ್ಕೆ ಪಡೆಯಿತು. ಬಳಿಕ ಕೊಲೆ ನಡೆದ ಬಿವಿಬಿ ಕ್ಯಾಂಪಸ್‌ಗೆ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಅಲ್ಲಿಯೂ ಕೆಲವೊಂದಿಷ್ಟು ಮಾಹಿತಿ ಕಲೆ ಹಾಕಿ ಅಲ್ಲಿಂದ ಆರೋಪಿಯ ಊರಾದ ಮುನವಳ್ಳಿಯತ್ತ ಪ್ರಯಾಣ ಬೆಳೆಸಿದೆ. ಎಸ್ಪಿ ಹಂತದ ಹಿರಿಯ ಅಧಿಕಾರಿ ನೇತೃತ್ವದಲ್ಲಿ ತನಿಖೆಗೆ ತಂಡ ರಚಿಸಲಾಗಿದೆ. ತಂಡದಲ್ಲಿ ಹಿರಿಯ ಎಂಟು ಜನ ಅಧಿಕಾರಿಗಳಿದ್ದಾರೆ.ಪ್ರಕರಣದ ಆರೋಪಿ ಫಯಾಜ್‌ನನ್ನು ಸಿಐಡಿ ಅಧಿಕಾರಿಗಳು ನ್ಯಾಯಾಲಯದ ಮೂಲಕ ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಜತೆಗೆ ಸ್ನೇಹಿತರು, ತಂದೆ, ತಾಯಿ ಸೇರಿದಂತೆ ಹಲವರ ವಿಚಾರಣೆ ನಡೆಸಲಿದೆ ಎಂದು ಮೂಲಗಳು ಹೇಳಿವೆ.

ನೇಹಾ ಫೋಟೊ ವೈರಲ್‌: ತಾಯಿ ಗೀತಾ ದೂರು

ಕೊಲೆ ಆರೋಪಿ ಫಯಾಜ್‌ನೊಂದಿಗೆ ನೇಹಾ ಇರುವ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ನೇಹಾ ತಾಯಿ ಗೀತಾ ಹಿರೇಮಠ, ಪೋಟೋಗಳ ವೈರಲ್‌ ತಡೆಗೆ ಕ್ರಮ ಕೈಗೊಳ್ಳಬೇಕೆಂದು ಹುಬ್ಬಳ್ಳಿ-ಧಾರವಾಡ ಸಿಇಎನ್‌ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ. ನೇಹಾ ಮತ್ತು ಫಯಾಜ್‌ ಇರುವ ನಕಲಿ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದೆ. ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.

ನಿರಂಜನ್‌ ನನ್ನನ್ನು ಕ್ಷಮಿಸಿ, ನಿಮ್ಮೊಂದಿಗೆ ನಾವಿದ್ದೇವೆ: ಸಿಎಂ

ನಿರಂಜನ ಹಿರೇಮಠ "ಐ ಯಾಮ್‌ ವೆರಿ ಸಾರಿ " ನಾವು ನಿಮ್ಮ ಜತೆ ಇದ್ದೇವೆ, ಚಿಂತೆ ಮಾಡುವ ಅವಶ್ಯಕತೆಯಿಲ್ಲ. ನೇಹಾಳ ಪ್ರಕರಣವನ್ನು ವಿಶೇಷ ಕೋರ್ಟ್‌ ವಿಚಾರಣೆ ನಡೆಸುವಂತೆ ಪತ್ರ ಬರೆಯಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಇಲ್ಲಿನ ಮೃತ ನೇಹಾ ನಿವಾಸಕ್ಕೆ ಭೇಟಿ ನೀಡಿದ್ದ ಸಚಿವ ಎಚ್‌.ಕೆ. ಪಾಟೀಲ ಅವರು ಮುಖ್ಯಮಂತ್ರಿಗಳಿಗೆ ಕರೆ ಮಾಡಿ ಮೃತಳ ತಂದೆಯೊಂದಿಗೆ ಮಾತನಾಡಿಸಿದರು.ಈ ಪ್ರಕರಣ ನಮಗೂ ನೋವುಂಟು ಮಾಡಿದೆ. ಚುನಾವಣಾ ಕಾರ್ಯಗಳ ನಿಮಿತ್ತ ನಿಮ್ಮ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಲು ಸಾಧ್ಯವಾಗಲಿಲ್ಲ. ಸರ್ಕಾರ ನಿಮ್ಮೊಂದಿಗಿದ್ದು, ನೇಹಾಳ ಸಾವಿಗೆ ಸೂಕ್ತ ನ್ಯಾಯ ಕೊಡಿಸಲು ಸರ್ಕಾರ ಬದ್ಧ‍ವಾಗಿದೆ. ಇದರಲ್ಲಿ ಯಾವುದೇ ಸಂಶಯ ಬೇಡ. ಹುಬ್ಬಳ್ಳಿಗೆ ಬಂದಾಗ ಮನೆಗೆ ಬಂದು ಭೇಟಿ ನೀಡುವುದಾಗಿ ತಿಳಿಸಿದರು.

ಮುಖ್ಯಮಂತ್ರಿಗಳ ಭರವಸೆಗೆ ಸಮಾಧಾನ ಮಾಡಿಕೊಂಡ ನೇಹಾ ತಂದೆ ನಿರಂಜನ. ಇಂತಹ ಪ್ರಕರಣಗಳಲ್ಲಿ ನನ್ನ ಮಗಳ ಹತ್ಯೆಯೇ ಕೊನೆಯಾಗಲಿ. ಯಾವ ಹೆಣ್ಣು ಮಕ್ಕಳಿಗೆ ಇಂತಹ ಶಿಕ್ಷೆಯಾಗದಂತೆ ಸರ್ಕಾರ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು, ನಿಮ್ಮ ನೋವು ನನಗೆ ಅರ್ಥವಾಗುತ್ತಿದೆ. ಈ ರೀತಿಯ ಪ್ರಕರಣ ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮಕ್ಕೆ ಸರ್ಕಾರ ಬದ್ಧವಿರುವುದಾಗಿ ಭರವಸೆ ನೀಡಿದರು.

ಈ ಪ್ರಕರಣ‍ವನ್ನು ಸಿಐಡಿಗೆ ಹಸ್ತಾಂತರಿಸಿರುವುದಕ್ಕೆ ನಿರಂಜನ್‌ ಧನ್ಯವಾದ ತಿಳಿಸಿದರು. ಈ ವೇಳೆ ಸಚಿವ ಎಚ್‌.ಕೆ. ಪಾಟೀಲ, ಶಾಸಕ ಪ್ರಸಾದ ಅಬ್ಬಯ್ಯ ಸೇರಿದಂತೆ ಹಲವರಿದ್ದರು.ಜೈಲಲ್ಲಿರುವ ಫಯಾಜ್‌ ಮೊಬೈಲ್‌ನಲ್ಲಿನ ಫೋಟೋ ಲೀಕ್‌ ಆಗಿದ್ದು ಹೇಗೆ?: ಜೋಶಿ

ನೇಹಾ ಹತ್ಯೆ ಪ್ರಕರಣದಲ್ಲಿ ಜೈಲಲ್ಲಿ ಇರುವ ಆರೋಪಿಯ ಮೊಬೈಲ್‌ನಲ್ಲಿದ್ದ ಫೋಟೋ ಹರಿ ಬಿಟ್ಟವರು ಯಾರು? ರಾಜ್ಯ ಸರ್ಕಾರವೇ ಇದನ್ನು ಮಾಡಿಸಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದ್ದಾರೆ.ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಫಯಾಜ್ ಪೊಲೀಸ್ ಕಸ್ಟಡಿಯಲ್ಲಿರುವಾಗ ಯಾರು? ಹೇಗೆ ಫೋಟೋ ಲೀಕ್ ಮಾಡಲು ಸಾಧ್ಯ? ಸರ್ಕಾರವೇ ಇದನ್ನು ಮಾಡಿಸಿದೆ. ನೇಹಾ ಹತ್ಯೆ ಪ್ರಕರಣದಲ್ಲಿ ರಾಜ್ಯ ಸರ್ಕಾರ ಸರಿಯಾಗಿ ನಿಭಾಯಿಸಲಿಲ್ಲ. ನಿರಂಜನ್ ಕುಟುಂಬದ ಬೇಡಿಕೆಯಂತೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.ನೇಹಾ ಹತ್ಯೆ ಪ್ರಕರಣದ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿ ಮತ್ತೊಂದು ಹುಡುಗಿ ಮೇಲೆ ಹಲ್ಲೆ ನಡೆದಿದೆ. ಮತಾಂತರಕ್ಕೆ ಒಪ್ಪದಿದ್ದಾಗ ಯುವತಿಯನ್ನು ಮನಬಂದಂತೆ ಥಳಿಸಿದ್ದಾರೆ ಎಂದರೆ ಕಾನೂನು ಸುವ್ಯವಸ್ಥೆ ಎಲ್ಲಿದೆ ಎಂದು ಜೋಶಿ ಕಿಡಿಕಾರಿದರು.

ಹಿಂದೂ ನೆಲೆಗಟ್ಟಿನ, ಹಿಂದೂ ಸಮಾಜ-ಸಂಘಟನೆ ಗಟ್ಟಿಯಾಗಿರುವ ಹುಬ್ಬಳ್ಳಿ ನೆಲದಲ್ಲೇ ಹೀಗಾಗಿರುವಾಗ ಇನ್ನು ರಾಜ್ಯದ ಬೇರೆಡೆ ಸ್ಥಿತಿ ಏನಾಗಿರಬೇಡ? ಎಂದು ಆತಂಕ ವ್ಯಕ್ತಪಡಿಸಿದರು. ತುಷ್ಟೀಕರಣ ಮಾಡುವವರನ್ನು ಮೊದಲು ಅಧಿಕಾರದಿಂದ ಕಿತ್ತು ಹಾಕಬೇಕು. ಇಲ್ಲದಿದ್ದರೆ ನಮ್ಮ ಮನೆಗಳಲ್ಲೂ ನಾವು ಹಿಂದೂ ಧರ್ಮ-ಸಂಸ್ಕೃತಿ ಉಳಿಸಿಕೊಳ್ಳುವುದು ಕಷ್ಟವಾಗುತ್ತದೆ ಎಂದು ಎಚ್ಚರಿಸಿದರು.ನೇಹಾ ನಿವಾಸಕ್ಕೆ ವಿಜಯೇಂದ್ರ ಭೇಟಿ, ಸಾಂತ್ವನ

ಹತ್ಯೆಗೊಳಗಾದ ಹಿಂದು ಯುವತಿ ನೇಹಾ ನಿವಾಸಕ್ಕೆ ಮಂಗಳವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಪ್ರಮೋದ್‌ ಮುತಾಲಿಕ್‌ ಸೇರಿದಂತೆ ವಿವಿಧ ಗಣ್ಯರು ಭೇಟಿ ನೀಡಿ, ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಕುಟುಂಬದವರಿಗೆ ಸಾಂತ್ವನ ಹೇಳಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ನೇಹಾ ಕೊಲೆ ಪ್ರಕರಣವನ್ನು ರಾಜ್ಯ ಸರ್ಕಾರ ಆದಷ್ಟು ಬೇಗ ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿದೆ. ಆದರೆ, ತನಿಖೆಯ ಬೆಳವಣಿಗೆ ಗಮನಿಸಿದರೆ ಸಿಐಡಿ ತನಿಖೆಯಿಂದ ನ್ಯಾಯ ಸಿಗುವ ಭರವಸೆ ನಮಗೆ ಹಾಗೂ ಕುಟುಂಬಕ್ಕಿಲ್ಲ. ಸಚಿವರ ಹೇಳಿಕೆ ಗಮನಿಸಿದರೆ ಪರೋಕ್ಷವಾಗಿ ಅಲ್ಪಸಂಖ್ಯಾತರಿಗೆ ಬೆಂಬಲ ನೀಡುತ್ತಿರುವಂತೆ ಕಾಣುತ್ತಿದೆ ಎಂದು ಆರೋಪಿಸಿದರು. ಈ ಪ್ರಕರಣ‍ವನ್ನು ರಾಜಕಾರಣಕ್ಕೆ ಬಳಸಿಕೊಳ್ಳುವ ಅವಶ್ಯಕತೆ ಪಕ್ಷಕ್ಕಿಲ್ಲ. ಯಾರು ಕೂಡ ಇದನ್ನು ಜಾತಿ, ಧರ್ಮಕ್ಕೆ ಬಳಸಿಕೊಳ್ಳಬಾರದು ಎಂದರು.----------ಈ ಕೊಲೆ‌ ಪ್ರಕರಣದಲ್ಲಿ ಇನ್ನೂ ನಾಲ್ಕು ಮಂದಿ ಆರೋಪಿಗಳಿದ್ದಾರೆ ಎಂದು ನೇಹಾ ತಂದೆ ನಿರಂಜನ ಅವರೇ ಹೇಳುತ್ತಿದ್ದಾರೆ. ಆದರೆ, ಈವರೆಗೂ ಪೊಲೀಸರು ಅವರನ್ನು ಬಂಧಿಸಿಲ್ಲ. ಸಿಐಡಿ ಅಧಿಕಾರಿಗಳು ಸಹ ವಿಚಾರಣೆಗೆ ಒಳಪಡಿಸದೇ ಇರುವುದು ಸಂಶಯಕ್ಕೆ ಕಾರಣವಾಗಿದೆ. ಇದನ್ನೆಲ್ಲ ಗಮನಿಸಿದರೆ ಮುಂದಿನ ದಿನಗಳಲ್ಲಿ ತನಿಖೆ ಯಾವ ದಿಕ್ಕಿನಲ್ಲಿ ಸಾಗಬಹುದು ಎನ್ನುವ ಅನುಮಾನ ನಮಗೆ ಮೂಡುತ್ತಿದೆ ಎಂದರು.

ನೊಂದ ಹೆತ್ತವರಿಗೆ ಸಮಾಧಾನವಾಗುವ ರೀತಿಯಲ್ಲಿ ವರ್ತಿಸುವ ಕಾರ್ಯ ಮಾಡಬೇಕಿದೆ. ಆದರೆ, ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಸವಾಲು ಎದ್ದಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ಸಿಐಡಿಯಿಂದ ಸಿಬಿಐ ಹಸ್ತಾಂತರಿಸಬೇಕು ಎಂದು ಆಗ್ರಹಿಸಿದರು.ಮಾನವೀಯತೆ ಮರೆತು ವರ್ತಿಸುವುದು ಕಾಂಗ್ರೆಸ್ ಸಂಸ್ಕೃತಿ:

ಹಿಂದುಗಳು ಕೊಲೆಯಾದರೆ ಬಿಜೆಪಿಗೆ ಹಬ್ಬ ಎನ್ನುವ ಸಚಿವ ಸಂತೋಷ ಲಾಡ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬೆಂಗಳೂರಿನ ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕನ ನಿವಾಸಕ್ಕೆ ಬೆಂಕಿ ಹಚ್ಚಿದಾಗ, ಕಾಂಗ್ರೆಸ್ ಸರ್ಕಾರ ಅವರಿಗೆ ಸಾಂತ್ವನ ಸಹ ಹೇಳಲು ಹೋಗಲಿಲ್ಲ. ಮಾನವೀಯತೆ ಮರೆತು ವರ್ತಿಸುವುದು ಕಾಂಗ್ರೆಸ್ ಸಂಸ್ಕೃತಿ. ಇಂತಹ ಪ್ರಕರಣದಲ್ಲಿ‌ ರಾಜಕೀಯ ಬಿಟ್ಟು ಮನುಷ್ಯತ್ವದ ಆಧಾರದಲ್ಲಿ ಧೈರ್ಯ ತುಂಬಬೇಕು ಎಂದರು.‌ಮಾಹಿತಿ ಇಲ್ಲದೆ ಕಾಂಗ್ರೆಸ್‌ ವಿರುದ್ಧ ಹೇಳಿದ್ದಕ್ಕೆ ಕ್ಷಮಿಸಿ: ನೇಹಾ ತಂದೆ

ಮಾಹಿತಿ ಕೊರತೆಯಿಂದಾಗಿ ಸ್ಥಳೀಯ ಶಾಸಕರ, ಪೊಲೀಸರ ಹಾಗೂ ಕಾಂಗ್ರೆಸ್‌ ನಾಯಕರ, ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದೆ, ನನ್ನಿಂದಾಗಿರುವ ಈ ತಪ್ಪಿಗೆ ಕ್ಷಮೆ ಕೋರುತ್ತೇನೆ ಎಂದು ನೇಹಾ ತಂದೆ ನಿರಂಜನ ಹಿರೇಮಠ ಮೂರು ದಿನಗಳ ಬಳಿಕ ಹಿಂದಿನ ತಮ್ಮ ಹೇಳಿಕೆಗೆ ಉಲ್ಟಾ ಹೊಡೆದಿದ್ದಾರೆ.

ಈ ಕುರಿತು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೀವ್ರ ದುಃಖದಲ್ಲಿದ್ದ ನಾನು ನನ್ನ ಮಗಳ ಕೊಲೆ ಪ್ರಕರಣದ ತನಿಖೆ ದಿಕ್ಕು ತಪ್ಪುತ್ತಿದೆ ಎಂಬ ಆತಂಕದಿಂದಾಗಿ ಈ ರೀತಿಯ ಹೇಳಿಕೆ ನೀಡಿದ್ದೆ. ಅಂತ್ಯಕ್ರಿಯೆವರೆಗೂ ನನ್ನ ಜತೆಯಲ್ಲಿದ್ದ ನನ್ನವರು, ನಂತರ ಕಾಣಲಿಲ್ಲ. ಆಗ, ನನಗೆ ಭಯವಾಗಿ ಮಾಹಿತಿಯ ಕೊರತೆಯಿಂದಾಗಿ ತಪ್ಪು ಹೇಳಿಕೆ ನೀಡಿದ್ದೆ. ಆದರೆ, ಪ್ರಕರಣ ನಡೆದಿರುವ ಕುರಿತು ನಮ್ಮ ಪಕ್ಷದವರೇ ಸರ್ಕಾರಕ್ಕೆ ಸಂಪೂರ್ಣ ಮಾಹಿತಿ ಒದಗಿಸಿದ್ದಾರೆ ಎಂಬುದು ನನಗೆ ಸೋಮವಾರ ತಿಳಿಯಿತು ಎಂದರು.ನಮ್ಮ ಪಕ್ಷದವರು ತೆರೆಮರೆಯಲ್ಲಿ ನನ್ನ ಮಗಳ ಸಾವಿಗೆ ನ್ಯಾಯ ಕೊಡಿಸುವಲ್ಲಿ ಶ್ರಮಿಸುತ್ತಿದ್ದಾರೆ. ಇದೀಗ ಪ್ರಕರಣ ಸಿಐಡಿಗೆ ವಹಿಸುವಲ್ಲಿಯೂ ಅವರ ಪಾತ್ರ ಪ್ರಮುಖವಾಗಿದೆ. ಪೊಲೀಸ್ ಆಯುಕ್ತರು ಸಹ ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಸುತ್ತಿದ್ದಾರೆ. ಅವರ ವಿರುದ್ಧವೂ ನಾನು ಅಸಮಾಧಾನ ವ್ಯಕ್ತಪಡಿಸಿದ್ದೆ. ಮಗಳನ್ನು ಕಳೆದುಕೊಂಡ ದುಃಖದಲ್ಲಿದ್ದ ನಾನು ಏನೇ ತಪ್ಪು ಮಾತನಾಡಿದರೂ ಅನ್ಯತಾ ಭಾವಿಸಬಾರದು. ನನ್ನಿಂದಾದ ತಪ್ಪಿಗೆ ಎಲ್ಲರಿಗೂ ಕ್ಷಮೆ ಕೋರುವುದಾಗಿ ಹೇಳಿದರು.

ಇಂತಹ ಪ್ರಕರಣ ನಡೆದಾಗ ಸೂಕ್ತ ಕ್ರಮಕೈಗೊಳ್ಳಲು ವಿಶೇಷ ಕಾನೂನು ರಚಿಸುವ ಕುರಿತು ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತಿದೆ. ಆ ಕಾನೂನಿಗೆ ''''''''ನೇಹಾ ಹಿರೇಮಠ ಕಾಯ್ದೆ'''''''' ಎಂದು ಹೆಸರಿಡಲು ಮನವಿ ಮಾಡಿದ ಅವರು, ಅಂತಹ ಕಾಯ್ದೆ ಜಾರಿಗೆ ಬಂದಲ್ಲಿ ಇಂತಹ ಕೃತ್ಯಕ್ಕೆ ಕೈಹಾಕುವವರಿಗೆ ಭಯ ಹುಟ್ಟಿಸುತ್ತದೆ. ಮತ್ತೊಂದು ಇಂತಹ ಪ್ರಕರಣ ಎಲ್ಲಿಯೂ ಮರುಕಳಿಸದಂತೆ ಸರ್ಕಾರ ಕ್ರಮಕೈಗೊಳ್ಳಲಿ ಎಂದು ಮನವಿ ಮಾಡಿದರು.