ಜೆಸಿ ಆಸ್ಪತ್ರೆ ವೈದ್ಯರ ಮೇಲೆ ಹಲ್ಲೆ ಖಂಡನೀಯ: ಶಾಸಕ ಆರಗ ಜ್ಞಾನೇಂದ್ರ

| Published : Sep 11 2024, 01:01 AM IST

ಜೆಸಿ ಆಸ್ಪತ್ರೆ ವೈದ್ಯರ ಮೇಲೆ ಹಲ್ಲೆ ಖಂಡನೀಯ: ಶಾಸಕ ಆರಗ ಜ್ಞಾನೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಯ ವೈದ್ಯರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ವೈದ್ಯರ ಸಂಘಟನೆ ಕಾರ್ಯಕರ್ತರು ಶಾಸಕ ಆರಗ ಜ್ಞಾನೇಂದ್ರರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

ಇಲ್ಲಿನ ಜೆಸಿ ಆಸ್ಪತ್ರೆಯ ವೈದ್ಯರ ಮೇಲೆ ನಡೆದಿರುವ ಹಲ್ಲೆ ಖಂಡನೀಯವಾಗಿದ್ದು ನೆರೆಯ ತಾಲೂಕುಗಳಿಂದಲೂ ಅಧಿಕ ಸಂಖ್ಯೆಯಲ್ಲಿ ರೋಗಿಗಳು ಬರುತ್ತಿರುವ ತಾಲೂಕಿನ ಸರ್ಕಾರಿ ಜೆಸಿ ಆಸ್ಪತ್ರೆಗೆ ಸೂಕ್ತ ಸೆಕ್ಯೂರಿಟಿ ಒದಗಿಸುವ ಅಗತ್ಯವಿದ್ದು ನೂರು ಹಾಸಿಗೆಯ ಆಸ್ಪತ್ರೆಯಲ್ಲಿ ಸರಿಯಾದ ಸೆಕ್ಯೂರಿಟಿ ಇಲ್ಲದ ಕಾರಣವೇ ಇಂತಹ ಘಟನೆ ಸಂಭವಿಸಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಇಲ್ಲಿನ ಜೆಸಿ ಆಸ್ಪತ್ರೆಯಲ್ಲಿ ಈಚೆಗೆ ಹಿರಿಯ ವೈದ್ಯರ ಮೇಲೆ ವ್ಯಕ್ತಿಯೊಬ್ಬ ನಡೆಸಿರುವ ಹಲ್ಲೆಯನ್ನು ಖಂಡಿಸಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಹಾಗೂ ತಾಲೂಕು ಡಾಕ್ಟರ್ಸ್ ಅಸೋಸಿಯೇಶನ್ ವತಿಯಿಂದ ನೀಡಲಾದ ಮನವಿಯನ್ನು ಸ್ವೀಕರಿಸಿ, ಎಲ್ಲಾ ಸವಲತ್ತುಗಳನ್ನು ಹೊಂದಿರುವ ಜೆಸಿ ಆಸ್ಪತ್ರೆಗೆ ರೋಗಿಗಳ ಈಚೆಗೆ ಒತ್ತಡ ಹೆಚ್ಚಿದ್ದು ತಾಲೂಕು ಮಾತ್ರ ವಲ್ಲದೇ ನೆರೆಯ ತಾಲೂಕುಗಳಿಂದಲೂ ರೋಗಿಗಳು ಬರುತ್ತಿದ್ದಾರೆ. ಆಸ್ಪತ್ರೆಯಲ್ಲಿ ಸರಿಯಾದ ಸೆಕ್ಯೂರಿಟಿ ಇಲ್ಲದ ಕಾರಣ ಇಂತಹ ಘಟನೆ ಸಂಭವಿಸಿದೆ. ಈ ಬಗ್ಗೆ ಕನಿಷ್ಟ ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುವಂತೆ ಕನಿಷ್ಟ ಓರ್ವ ಹೋಂಗಾರ್ಡ್ ನೇಮಕ ಮಾಡಲು ಸಂಬಂಧಿಸಿದ ಹಿರಿಯ ಅಧಿಕಾರಿಗಳನ್ನು ಕೋರುವುದಾಗಿ ತಿಳಿಸಿದರು.

ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ವೈದ್ಯರೂ ಮಾನವೀಯ ಕಳಕಳಿಯಿಂದ ಕಾರ್ಯನಿರ್ವಹಿಸುವವರಾಗಿದ್ದು, ಈ ಬಗ್ಗೆ ವೈದ್ಯರು ಆತಂಕ ಪಡುವ ಅಗತ್ಯವಿಲ್ಲ. ನಾವೆಲ್ಲರೂ ನಿಮ್ಮೊಂದಿಗಿದ್ದೇವೆ ಎಂದೂ ಹೇಳಿದರು.

ಶಾಸಕರಿಗೆ ಮನವಿ ನೀಡಿ ಮಾತನಾಡಿದ ಜೆಸಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಗಣೇಶ್ ಭಟ್, ಈಚೆಗೆ ಆಸ್ಪತ್ರೆಯಲ್ಲಿ ನಡೆದ ಘಟನೆಯಿಂದ ನಮ್ಮ ಸಿಬ್ಬಂದಿ ಆತಂಕಿತರಾಗಿದ್ದಾರೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಿಗೆ ಅದರಲ್ಲೂ ಮಹಿಳಾ ಸಿಬ್ಬಂದಿಗೆ ರಕ್ಷಣೆ ಅವಶ್ಯಕತೆ ಇದ್ದು ಈ ಬಗ್ಗೆ ಸೂಕ್ತ ರಕ್ಷಣೆಗೆ ಸವಲತ್ತು ಒದಗಿಸುವಂತೆಯೂ ಮನವಿ ಮಾಡಿದರು.

ಪೋಲಿಸ್ ಇನ್ಸ್‍ಪೆಕ್ಟರ್ ಅಶ್ವಥ್ಥಗೌಡ ಮಾತನಾಡಿ, ಘಟನೆಗೆ ಕಾರಣನಾಗಿರುವ ವ್ಯಕ್ತಿ ಮಾನಸಿಕ ದೌರ್ಬಲ್ಯ ಹೊಂದಿದವ ನಾಗಿದ್ದು ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಜೆಸಿ ಆಸ್ಪತ್ರೆಯ ಹಿರಿಯ ದಾದಿ ತನುಜಾ ನಾಯ್ಕ್ ಮಾತನಾಡಿ, ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ನಾವುಗಳು ಆತಂಕ ದಿಂದಲೇ ಕೆಲಸ ನಿರ್ವಹಿಸುವ ಅನಿವಾರ್ಯತೆ ಇದೆ. ತುರ್ತು ಚಿಕಿತ್ಸೆ ನೀಡುವ ಸಂದರ್ಭದಲ್ಲಿ ರೋಗಿಗಳ ಕಡೆಯವರಿಗೆ ನಮ್ಮ ಮಾತನ್ನು ಕೇಳುವ ವ್ಯವಧಾನವೇ ಇರುವುದಿಲ್ಲ. ನಮ್ಮ ಮೇಲೆಯೇ ಎಗರುತ್ತಾರೆ ಎಂದೂ ಆತಂಕ ವ್ಯಕ್ತಪಡಿಸಿದರು.

ಹಿರಿಯ ವೈದ್ಯರುಗಳಾದ ಡಾ.ಟಿ.ನಾರಾಯಣಸ್ವಾಮಿ, ಡಾ.ಎಸ್.ಮನೋಹರ ರಾವ್, ಡಾ.ಬಿ.ಜಿ.ನಂದ ಕಿಶೋರ್, ಡಾ.ಗಣೇಶ್ ಕಾಮತ್, ಡಾ.ಪದ್ಮಜಾ ಜಯರಾಂ, ಡಾ.ಗಣೇಶ್ ನಾಯಕ್, ಡಾ.ಸದಾಶಿವ ನಿಲುವಾಸೆ, ಡಾ.ಅನಂತಮೂರ್ತಿ ಐತಾಳ್ ಮುಂತಾದವರು ಇದ್ದರು.