ಕನ್ನಡಪ್ರಭ ವಾರ್ತೆ ವಿಜಯಪುರ 2026ರ ಫೆಬ್ರವರಿ 11ರಂದು ವಿಜಯಪುರ ತಾಲೂಕಿನ ಕಗ್ಗೋಡ ಬಳಿ ಕೂಡಲಸಂಗಮ ಶ್ರೀಗಳ ಮೇಲೆ ಮಹಿಳೆ ಹಾಗೂ ಇತರರು ಹಲ್ಲೆ ನಡೆಸಿದ್ದರು ಎಂಬ ಘಟನೆ ವಿಚಾರವಾಗಿ ಬಸವಜಯ ಲಿಂಗಾಯತ ಪಂಚಮಸಾಲಿ ಮಾಜಿ ಪೀಠಾಧಿಕಾರಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಏ.4ರಂದು ದೂರು ದಾಖಲಿಸಿದ್ದಾರೆ. ಬೆಂಗಳೂರು ಮೂಲದ ಮಹಿಳೆ, ಪೃಥ್ವಿಗೌಡ, ಯಶವಂತ ಹಾಗೂ ಎಂ.ಡಿ. ವಿರೇಶ ಎಂಬ ನಾಲ್ವರ ವಿರುದ್ಧ ಸ್ವಾಮೀಜಿ ದೂರು ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ವಿಜಯಪುರ
2026ರ ಫೆಬ್ರವರಿ 11ರಂದು ವಿಜಯಪುರ ತಾಲೂಕಿನ ಕಗ್ಗೋಡ ಬಳಿ ಕೂಡಲಸಂಗಮ ಶ್ರೀಗಳ ಮೇಲೆ ಮಹಿಳೆ ಹಾಗೂ ಇತರರು ಹಲ್ಲೆ ನಡೆಸಿದ್ದರು ಎಂಬ ಘಟನೆ ವಿಚಾರವಾಗಿ ಬಸವಜಯ ಲಿಂಗಾಯತ ಪಂಚಮಸಾಲಿ ಮಾಜಿ ಪೀಠಾಧಿಕಾರಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಏ.4ರಂದು ದೂರು ದಾಖಲಿಸಿದ್ದಾರೆ.ಬೆಂಗಳೂರು ಮೂಲದ ಮಹಿಳೆ, ಪೃಥ್ವಿಗೌಡ, ಯಶವಂತ ಹಾಗೂ ಎಂ.ಡಿ. ವಿರೇಶ ಎಂಬ ನಾಲ್ವರ ವಿರುದ್ಧ ಸ್ವಾಮೀಜಿ ದೂರು ನೀಡಿದ್ದಾರೆ. ದೂರಿನಲ್ಲಿ ಉಲ್ಲೇಖಿಸಲಾದ ಅಂಶಗಳು:
2-3 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಮಹಿಳೆ ಸಹೋದನರೊಂದಿಗೆ ಭೇಟಿಯಾಗಿದ್ದಳು. ನಾನೂ ಲಿಂಗಾಯತ ಸಮಾಜದವಳು ಫೌಂಡೇಶನ್ ವೊಂದರ ಮುಖ್ಯಸ್ಥೆ ಎಂದು ಪರಿಚಯ ಮಾಡಿಕೊಂಡಿದ್ದಳು. ಬಡ ಹಾಗೂ ಅನಾಥ ಮಕ್ಕಳನ್ನು ಸಾಕುತ್ತೇನೆ. ಪಂಚಮಸಾಲಿ ಹೋರಾಟಕ್ಕೂ ಸಾಥ್ ನೀಡುವುದಾಗಿ ಹೇಳಿದ್ದರು. ನಂತರ ಫೌಂಡೇಶನ್ ಗಾಗಿ ಹಣ ನೀಡಬೇಕೆಂದು ಬೇಡಿಕೆ ಇಟ್ಟಿದ್ದಳು. ಯಾರಾದರೂ ದಾನಿಗಳಿದ್ದರೆ ಸಹಾಯ ಮಾಡಿಸೋದಾಗಿ ಹೇಳಿದ್ದೆ, ನಂತರದಲ್ಲಿ ಹಣಕ್ಕಾಗಿ ಪೀಡಿಸಲಾರಂಭಿಸಿದಳು. ನಾನು ಹಣ ನೀಡದ ಕಾರಣ ರಾಜಕೀಯ ವ್ಯಕ್ತಿಗಳ ಪಿತೂರಿಯಿಂದ ನನ್ನ ತೆಜೋವಧೆ ಮಾಡುವುದಾಗಿ ಹೇಳಿ ಹಣಕ್ಕಾಗಿ ಪೀಡಿಸುತ್ತಿದ್ದಳು. ಆಗಲೂ ನಾನು ಹಣ ನೀಡದ ಕಾರಣ ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿ ಬ್ಲಾಕ್ಮೇಲ್ ಮಾಡಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.ಫೆಬ್ರವರಿ 11ರಂದು ನಾನು ವಿಜಯಪುರ ತಾಲೂಕಿನ ಕಗ್ಗೋಡದಿಂದ ಬರುವಾಗ ವಾಹನ ಅಡ್ಡಗಟ್ಟಿ ಬೆದರಿಸಿ ಹಣಕ್ಕಾಗಿ ಬೇಡಿಕೆ ಇಟ್ಟರು. ಹಣ ನೀಡದ ಕಾರಣ ನನ್ನ ಕಾರಿನ ಗ್ಲಾಸಿಗೆ ಗುದ್ದಿ ಹಲ್ಲೆ ನಡೆಸಿದ್ದಾರೆ. ಈ ವೇಳೆ ಬೆಂಗಾವಲು ಸಿಬ್ಬಂದಿ ಮಧ್ಯೆ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು. ಕೆಲ ಮಾಧ್ಯಮ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ನನ್ನ ಮೇಲೆ ಕೆಟ್ಟದಾಗಿ ಅಪಪ್ರಚಾರ ಮಾಡಿಸಿದರು. ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಇಂತಹ ಸುದ್ದಿ ಪ್ರಸಾರಕ್ಕೆ ತಡೆಯಾಜ್ಞೆ ತರಲಾಗಿದೆ. ಇಷ್ಟರ ಹೊರತಾಗಿ ಖಾಸಗಿ ವಾಹಿನಿಯಲ್ಲಿ ನನ್ನ ವಿರುದ್ಧ ಆರೋಪಿತ ಮಹಿಳೆ ಅಪಪ್ರಚಾರ ಮಾಡಿಸಿದ್ದಾಳೆ. ನನ್ನ ಶಿಷ್ಯ ರಾಜಕುಮಾರ ಸಿ.ಎಂ. ಎಂಬುವವರಿಗೆ ಕರೆ ಮಾಡಿ ₹3 ಕೋಟಿ ಹಣದ ಬೇಡಿಕೆಯಿಟ್ಟಿದ್ದಾಳೆ. ಹಣ ನೀಡದೇ ಇದ್ದರೆ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಬಗ್ಗೆ ಕೆಟ್ಟದಾಗಿ ಪ್ರಚಾರ ಮಾಡುತ್ತೇನೆ, ಅತ್ಯಾಚಾರದ ಕೇಸ್ ಹಾಕುತ್ತೇನೆಂದು ಬೆದರಿಕೆ ಹಾಕಿದ್ದಾಳೆ.
ಪಂಚಮಸಾಲಿ ಹೋರಾಟ ಹತ್ತಿಕ್ಕಲು, ನನ್ನ ತೇಜೋವಧೆ ಮಾಡಲು ಇಂತಹ ಕೆಲಸ ಮಾಡುತ್ತಿದ್ದಾರೆ. ಮಹಿಳೆ, ಪೃಥ್ವಿಗೌಡ, ಯಶವಂತ ಹಾಗೂ ಎಂ.ಡಿ.ವಿರೇಶ ಎಂಬುವವರು ಸೇರಿ ನನ್ನ ಘನತೆಗೆ ಕುಂದು ತರುವ ಕೆಲಸ ಮಾಡಿದ್ದಾರೆ. ವಿಡಿಯೋ ಪ್ರಸಾರ ಮಾಡುತ್ತೇವೆಂದು ಬೆದರಿಕೆ ಹಾಕಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ನನ್ನ ಕಾರನ್ನು ಅಡ್ಡಗಟ್ಟಿ ಹಲ್ಲೆ ಮಾಡಿದ್ದು, ಇವರ ಮೇಲೆ ಕಾನೂನು ಕ್ರಮ ತೆಗದುಕೊಳ್ಳಬೇಕೆಂದು ಸ್ವಾಮೀಜಿ ದೂರಿನಲ್ಲಿ ತಿಳಿಸಿದ್ದಾರೆ.