ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ, ಸೂಕ್ತ ರಕ್ಷಣೆಗೆ ಮನವಿ

| Published : Mar 13 2024, 02:11 AM IST

ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ, ಸೂಕ್ತ ರಕ್ಷಣೆಗೆ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಬ್ಯಾಡಗಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಮಾಧ್ಯಮವರಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ತಹಸೀಲ್ದಾರ್‌ ಮೂಲಕ ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು.

ಬ್ಯಾಡಗಿ: ಪಟ್ಟಣದ ಎಪಿಎಮ್‌ಸಿ ಆವರಣದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳ ಮೇಲೆ ಕಿಡಿಗೇಡಿಗಳು ನಡೆಸಿದ ಮಾರಣಾಂತಿಕ ಹಲ್ಲೆ ಖಂಡಿಸಿ ರಾಜ್ಯ, ಜಿಲ್ಲೆ, ಹಾಗೂ ಬ್ಯಾಡಗಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಮಾಧ್ಯಮವರಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ತಹಸೀಲ್ದಾರ್‌ ಮೂಲಕ ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಕಾನಿಪ ತಾಲೂಕಾಧ್ಯಕ್ಷ ಶಿವಾನಂದ ಮಲ್ಲನಗೌಡ್ರ, ಪಟ್ಟಣದ ಅಂತಾರಾಷ್ಟ್ರೀಯ ಮಟ್ಟದ ಎಪಿಎಂಸಿ ಆವರಣದಲ್ಲಿ ಸೋಮವಾರ ನಡೆದ ಗಲಭೆಯಲ್ಲಿ ರೈತರು, ವರದಿ ಮಾಡಲು ತೆರಳಿ ಸ್ಥಳದಲ್ಲಿದ್ದ ಮಾಧ್ಯಮ ಪ್ರತಿನಿಧಿಗಳ ಮೇಲೆಯೇ ಹಲ್ಲೆ ಮಾಡಿದ್ದು ಖಂಡನೀಯ, ವರದಿಗಾರರು ಎಂದು ಹೇಳಿದರು ಸಹ ರೈತರು ಏಕಾಏಕಿ ಹಲ್ಲೆ ಮಾಡಿದ್ದಾರೆ. ಖಾಸಗಿ ಸುದ್ದಿ ವಾಹಿನಿಯೊಂದರ ಹಾವೇರಿ ವಿಭಾಗದ ಕ್ಯಾಮೆರಾಮನ್ ಮಂಜುನಾಥ ಭೋವಿ ತಲೆಗೆ ಬಲವಾದ ಪೆಟ್ಟು ಬಿದ್ದು ಗಂಭೀರವಾದ ಗಾಯಗಳಾಗಿದೆ. ಇದರೊಟ್ಟಿಗೆ 2.5 ಲಕ್ಷ ಬೆಲೆ ಬಾಳುವಂತಹ ಕ್ಯಾಮೆರಾ ಒಡೆದಿದೆ. ಈ ರೀತಿಯ ಘಟನೆಗಳು ರಾಜ್ಯದಲ್ಲಿ ಪದೇಪದೇ ಮರಕಳಿಸುತ್ತಿದ್ದು ಮಾಧ್ಯಮ ಪ್ರತಿನಿಧಿಗಳಿಗೆ ಸೂಕ್ತರಕ್ಷಣೆ ಒದಗಿಸು ವಂತೆ ಆಗ್ರಹಿಸಿದರು.

ಸುರೇಶ ನಾಯ್ಕ ಮಾತನಾಡಿ, ಸಮಾಜದ ಅಂಕುಡೊಂಕು ತಿದ್ದುವ ಕೆಲಸ ಮಾಡುವ ಪತ್ರಿಕಾ ಮಾಧ್ಯಮಗಳ ಪ್ರತಿನಿಧಿಗಳಿಗೆ ಸೂಕ್ತ ರಕ್ಷಣೆ ಸಿಗದೇ ಜೀವಭಯದಿಂದ ವರದಿ ಮಾಡುವಂತಾಗಿದೆ. ಕಾರಣ ಕೂಡಲೇ ಇಂತಹ ಘಟನೆಗಳಿಗೆ ಕಡಿವಾಣ ಹಾಕುವುದೂ ಸೇರಿದಂತೆ ನಮಗೆ ರಕ್ಷಣೆ ನೀಡಬೇಕು ಕ್ಯಾಮೆರಾಮನ್ ಮಂಜುನಾಥ ಭೋವಿ ಅವರಿಗೆ ಅಗತ್ಯವಿರುವ ವೈದ್ಯಕೀಯ ವೆಚ್ಚ ನೀಡುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ವೀರೇಶ ಚೌಕಿಮಠ, ಗಣೇಶ ಅರ್ಕಾಚಾರಿ, ಟಿಪ್ಪುಸುಲ್ತಾನ ಹುಲ್ಮನಿ, ಸುರೇಶ ನಾಯ್ಕ, ಬಿ.ಎಂ. ಮಾರುತಿ ಫಕ್ಕೀರಯ್ಯ ಗಣಾಚಾರಿ, ತೌಸೀಫ್ ಹಣಗಿ, ಪ್ರಶಾಂತ ಮರಿಯಮ್ಮರ, ವೀರೇಶ ಬಾರ್ಕಿ, ಪವನಕುಮಾರ ಮುಳುಗುಂದಮಠ, ಎಂ.ಜಿ. ರಾಜು, ಫಕ್ಕೀರಗೌಡ ಪಾಟೀಲ, ವಿನಯಕುಮಾರ, ಅಣ್ಣಪ್ಪ ಬಾರ್ಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.