ಸಾರಾಂಶ
ಚಾಮರಾಜನಗರದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಕಲಬುರಗಿ ಜಿಲ್ಲೆಯ ಚಿತ್ತಾಪುರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಕ್ರಮವಾಗಿ ಬಂಧನದಲ್ಲಿರಿಸಿ ಹಲ್ಲೆಗೆ ಯತ್ನಿಸಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್ ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ ೨೧ ರಂದು ಚಿತ್ತಾಪುರದಲ್ಲಿ ಆಯೋಜನೆ ಮಾಡಿದ್ದ ತಿರಂಗಾ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಛಲವಾದಿ ನಾರಾಯಣಸ್ವಾಮಿ ತೆರಳಿದ್ದ ಸಂದರ್ಭದಲ್ಲಿ ಅವರ ಕಾರಿನ ಮೇಲೆ ಮಸಿ ಎರಚಿ ಹಲ್ಲೆಗೆ ಯತ್ನಿಸಿರುವುದು ತೀವ್ರ ಖಂಡನೀಯ ಎಂದರು. ಅಲ್ಲದೇ ಪ್ರವಾಸಿಮಂದಿರದಲ್ಲಿ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರನ್ನು 3-4 ಗಂಟೆಗಳ ಕಾಲ ದಿಗ್ಬಂಧನ ಮಾಡಿರುವುದು ಪ್ರಜಾ ಪ್ರಭುತ್ವ ವಿರೋಧಿ ನೀತಿಯಾಗಿದೆ. ಪೊಲೀಸರ ಭದ್ರತೆಯಲ್ಲಿ ಇದ್ದಾಗಲೆ ಪ್ರಿಯಾಂಕ್ ಖರ್ಗೆ ಬೆಂಬಲಿಗರು ಹಲ್ಲೆಗೆ ಮುಂದಾಗಿದ್ದಾರೆ. ಅಲ್ಲದೇ ಗುಂಪುಕಟ್ಟಿಕೊಂಡು ಗೂಂಡಾಗಿರಿ ಮಾಡಿರುವುದು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪ್ರಿಯಾಂಕ್ ಖರ್ಗೆ ಅವರನ್ನು ಟೀಕೆ ಮಾಡಿದರು ಎಂಬ ಕಾರಣಕ್ಕೆ ವಿರೋಧ ಪಕ್ಷದ ನಾಯಕರ ಮೇಲೆ ಹಲ್ಲೆ ಮಾಡಲು ಮುಂದಾಗಿರುವುದು ಗೂಂಡಾವರ್ತನೆ ಎಂದರು. ವಿಪಕ್ಷದ ನಾಯಕರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ನಡೆದು ೩ ದಿನ ಕಳೆದರೂ ಕಿಡಿಗೇಡಿಗಳನ್ನು ಬಂಧಿಸದಿರುವುದು ವಿಪರ್ಯಾಸ. ರೌಡಿಸಂಗೆ ಪ್ರಿಯಾಂಕ್ ಖರ್ಗೆ ಪ್ರಚೋದನೆ ನೀಡುತ್ತಿದ್ದಾರೆ. ಸ್ವಾರ್ಥಕ್ಕಾಗಿ ಸಂವಿಧಾನ ಬಳಸುವ ಪ್ರಿಯಾಂಕ್ ಖರ್ಗೆ ಸಂವಿಧಾನ ವಿರೋಧಿ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.ಈ ಹಿಂದೆ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಿಯಾಂಕ್ ಖರ್ಗೆ ಪ್ರಧಾನಿ ಹಾಗೂ ರಾಜ್ಯ ಬಿಜೆಪಿ ಮುಖಂಡರನ್ನು ಟೀಕಿಸಿದ್ದರು. ಅವರನ್ನು ದಿಗ್ಬಂಧನದಲ್ಲಿ ಇಟ್ಟಿದ್ದೀರಾ ಎಂದು ಪ್ರಶ್ನಿಸಿದ ಮೂಡ್ನಾಕೂಡು ಪ್ರಕಾಶ್, ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿದ್ದಾಗ ಮಡಿಕೇರಿಗೆ ಭೇಟಿ ನಿಡಿದ್ದ ವೇಳೆ ಮೊಟ್ಟೆ ಎಸೆದಿದ್ದ ವ್ಯಕ್ತಿಯನ್ನು ಅಂದಿನ ಬಿಜೆಪಿ ಸರ್ಕಾರ ಬಂಧಿಸಿ ಸೂಕ್ತ ಕ್ರಮ ವಹಿಸಿತ್ತು ಎಂದರು. ವಿಪಕ್ಷದ ನಾಯಕರ ಮೇಲೆ ಹಲ್ಲೆಗೆ ಪ್ರಚೋದನೆ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು. ಘಟನೆ ಸಂಬಂಧ ಸಮಗ್ರ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಕಾಡಹಳ್ಳಿ ಕುಮಾರ್, ಸಹ ವಕ್ತಾರ ಮಂಜುನಾಥ್, ಮಾಧ್ಯಮ ಪ್ರಮುಖ್ ಶಿವಣ್ಣ ರಾಮಸಮುದ್ರ, ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಂಬಳ್ಳಿ ರಾಮಣ್ಣ, ಮುಖಂಡರಾದ ವೇಣುಗೋಪಾಲ್ ಇದ್ದರು.