ಸಾರಾಂಶ
ಮೂಡಲಗಿ ತಾಲೂಕಿನ ತುಕ್ಕಾನಟ್ಟಿ ಮತ್ತು ಕಲ್ಲೋಳಿ ಗ್ರಾಮಗಳಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ಬುಧವಾರ ದಿಢೀರ್ ನಡೆಸಿದರು. ಇದೇ ವೇಳೆ ಬೀಜ, ಗೊಬ್ಬರ ಮತ್ತು ಕೀಟನಾಶಕಗಳ ಮಾರಾಟಗಾರರ ದಾಖಲೆಗಳನ್ನು ಪರಿಶೀಲಿಸಿದರು.
ಕನ್ನಡಪ್ರಭ ವಾರ್ತೆ ಮೂಡಲಗಿ
ತಾಲೂಕಿನ ತುಕ್ಕಾನಟ್ಟಿ ಮತ್ತು ಕಲ್ಲೋಳಿ ಗ್ರಾಮಗಳಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ಬುಧವಾರ ದಿಢೀರ್ ನಡೆಸಿದರು. ಇದೇ ವೇಳೆ ಬೀಜ, ಗೊಬ್ಬರ ಮತ್ತು ಕೀಟನಾಶಕಗಳ ಮಾರಾಟಗಾರರ ದಾಖಲೆಗಳನ್ನು ಪರಿಶೀಲಿಸಿದರು.ಸಹಾಯಕ ಕೃಷಿ ನಿರ್ದೇಶಕ ಎಂ.ಎಂ.ನದಾಫ ಹಾಗೂ ಕೃಷಿ ಅಧಿಕಾರಿ ವಿನಾಯಕ ತುರಾಯಿದಾರ ಮತ್ತು ತಂಡ ಕೃಷಿ ಪರಿಕರ ರಸಗೊಬ್ಬರ ಬೀಜ ಹಾಗೂ ಕೀಟನಾಶಕ ಮಳಿಗೆಗಳ ಮೇಲೆ ದಾಳಿ ಮಾಡಿ ರಸಗೊಬ್ಬರ ಮತ್ತು ಬೀಜಗಳ ದಾಸ್ತಾನು ಮತ್ತು ವಿತರಣೆಯ ದಾಖಲಾತಿಗಳನ್ನು ಪರಿಶೀಲಿಸಿದರು.
ರಸಗೊಬ್ಬರ ಹಾಗೂ ಬೀಜಗಳನ್ನು ಹೆಚ್ಚಿನ ದರಕ್ಕೆ ರೈತರಿಗೆ ಮಾರಾಟ ಮಾಡಿದರೆ ಶಿಸ್ತು ಹಾಗೂ ಕಾನೂನು ಕ್ರಮ ಜರುಗಿಸಲಾಗುವುದು ಎಂದರು. ಜತೆಗೆ ಅಂಗಡಿಯ ಪರವಾನಗಿಯನ್ನು ರದ್ದುಪಡಿಸಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕ ಎಂ.ಎಂ.ನದಾಫ ಮಾರಾಟಗಾರರಿಗೆ ಎಚ್ಚರಿಗೆ ನೀಡಿದರು.ಮಾರಾಟಗಾರರು ಸರ್ಕಾರದ ಹಾಗೂ ಇಲಾಖೆಯ ನಿಯಮಗಳನ್ನು ಪಾಲಿಸಬೇಕು. ದರಪಟ್ಟಿ ಹಾಗೂ ರಸಗೂಬ್ಬರ ದಾಸ್ತಾನು ಲಭ್ಯತೆ ಮಾಹಿತಿ ಫಲಕಗಳನ್ನು ಅಂಗಡಿಗಳಲ್ಲಿ ಪ್ರದರ್ಶಿಸಬೇಕು. ಅಲ್ಲದೇ ರಸಗೊಬ್ಬರಗಳನ್ನು ಪಿಒಎಸ್ ಮಷಿನ್ ಮೂಲಕವೇ ವಿತರಣೆ ಮಾಡಬೇಕು ಎಂದು ಹೇಳಿದರು.ಈ ವರ್ಷ ಮುಂಗಾರು ಒಳ್ಳೆಯ ಮಳೆಯಿಂದ ಪ್ರಾರಂಭವಾಗಿದೆ. ಹೀಗಾಗಿ, ರೈತರಿಗೆ ಗುಣಮಟ್ಟದ ಗೋವಿನ ಜೋಳದ ಬಿತ್ತನೆ ಬೀಜಗಳನ್ನು ಪೂರೈಸಬೇಕು ಹಾಗೂ ಕಡ್ಡಾಯವಾಗಿ ರೈತರಿಗೆ ರಶೀದಿಗಳನ್ನು ನೀಡಬೇಕು. ಅಲ್ಲದೇ ವಿವಿಧ ಕಂಪನಿಗಳ ಮೆಕ್ಕಜೋಳ ಬಿತ್ತನೆ ಬೀಜಗಳ ಮಾದರಿಗಳನ್ನು ಸಂಗ್ರಹಿಸಿದರು. ಕೃಷಿ ಇಲಾಖೆಯಿಂದ ಪ್ರತಿಯೊಂದು ರಸಗೊಬ್ಬರ ಮಳಿಗೆಗೆ ನೋಡಲ್ ಅಧಿಕಾರಗಳನ್ನು ನಿಯೋಜಿಸಿದ್ದು, ಅಧಿಕಾರಿಗಳು ಕಾಲ ಕಾಲಕ್ಕೆ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ರಸಗೊಬ್ಬರ ಬೀಜ ಹಾಗೂ ಇತರೆ ಕೃಷಿ ಪರಿಕರಗಳ ಗುಣಮಟ್ಟ ಹಾಗೂ ಯೂರಿಯಾ/ಡಿಎಪಿ ದಾಸ್ತಾನು ಮತ್ತು ಭೌತಿಕ ದಾಸ್ತಾನು ಪರಿಶೀಲಿಸಲಿದ್ದಾರೆ. ರೈತರಿಂದ ಈ ಬಗ್ಗೆ ದೂರುಗಳು ಬಂದರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದರು. ಈ ಸಮಯದಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ಇದ್ದರು.ರಸಗೊಬ್ಬರ ಬೀಜ ಮತ್ತು ಕೀಟನಾಶಕಗಳು ಪ್ರಮುಖ ಕೃಷಿ ಪರಿಕರಗಳಾಗಿವೆ. ಅಗತ್ಯ ವಸ್ತುಗಳ ಅಧಿನಿಯಮ 1955 ರಡಿಯಲ್ಲಿ ಬರುತ್ತಿದ್ದು, ರಸಗೊಬ್ಬರ ಅಧಿನಿಯಮ 1968, ಬೀಜಗಳ ಅಧಿನಿಯಮ 1966, ಕೀಟನಾಶಕ ಅಧಿನಿಯಮ 1968 ಈ ಅಧಿನಿಯಮಗಳನ್ನು ಪಾಲಿಸದೇ ಮಾರಾಟಗಾರರು ವ್ಯವಹರಿಸುವಂತಿಲ್ಲ. ನಿಯಮಗಳನ್ನು ಮೀರಿದರೆ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುವುದು ಹಾಗೂ ಮಾರಾಟಗಾರರ ಪರವಾನಗಿಯನ್ನು ರದ್ದು ಮಾಡಲಾಗುವುದು.- ಎಂ.ಎಂ.ನದಾಫ್,
ಸಹಾಯಕ ಕೃಷಿ ನಿರ್ದೇಶಕ