ಆತ್ಮದ ಉದ್ಧಾರದ ಮೂಲಕ ಮೋಕ್ಷ ಸಾಧನೆ ಹಾಗೂ ವ್ಯಕ್ತಿತ್ವ ನಿರ್ಮಾಣವಾಗುತ್ತದೆ ಎಂದು ಬೆಂಗಳೂರು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ನಿಶ್ಚಲಾನಂದನಾಥ ಮಹಾಸ್ವಾಮಿ ನುಡಿದರು.

ರಾಣಿಬೆನ್ನೂರು: ಆತ್ಮದ ಉದ್ಧಾರದ ಮೂಲಕ ಮೋಕ್ಷ ಸಾಧನೆ ಹಾಗೂ ವ್ಯಕ್ತಿತ್ವ ನಿರ್ಮಾಣವಾಗುತ್ತದೆ ಎಂದು ಬೆಂಗಳೂರು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ನಿಶ್ಚಲಾನಂದನಾಥ ಮಹಾಸ್ವಾಮಿ ನುಡಿದರು. ನಗರದ ಹಳೆ ಪಿ.ಬಿ. ರಸ್ತೆ ದೈವಜ್ಞ ಸಮುದಾಯ ಭವನದಲ್ಲಿ ಶುಕ್ರವಾರ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ನವ ದಶಕೋತ್ಸವದ ಸಂಭ್ರಮಾಚರಣೆ ಪ್ರಯುಕ್ತ ಏರ್ಪಡಿಸಿದ್ದ ವಿಶ್ವಪರಿವರ್ತನೆಗೆ ಅಧ್ಯಾತ್ಮಿಕ ಜಾಗೃತಿ- ಸಂತ ಸಮ್ಮೇಳನದಲ್ಲಿ ಅವರು ಮಾತನಾಡಿದರು.

90 ವರುಷದಿಂದ ಪ್ರಜಾಪಿತ ಬ್ರಹ್ಮಕುಮಾರಿ ಸಂಸ್ಥೆಯು ಜನರ ಸೇವೆ ಮಾಡುತ್ತಿದೆ. ಮಹಿಳೆಯರಿಂದ ನಿರ್ವಹಿಸಲ್ಪಡುತ್ತಿರುವ ವಿಶ್ವದ ಅತೀ ದೊಡ್ಡ ಮತ್ತು ಏಕೈಕ ಆಧ್ಮಾತ್ಮಿಕ ಸಂಘಟನೆಯಾಗಿದೆ. ಕಳೆದ 90 ವರ್ಷಗಳಲ್ಲಿ ಮಹಿಳಾ ಮುಂದಾಳತ್ವವು ನಿರಂತರ ದೃಢತೆ, ಕ್ಷಮಾಭಾವ ಹಾಗೂ ಐಕ್ಯತೆಗೆ ಬದ್ಧರಾಗಿರುವ ಮೂಲಕ ಸೇವಾ ಮಾರ್ಗದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಾ ಬಂದಿದೆ. ಇದಲ್ಲದೆ ರಾಜಯೋಗದ ಮೂಲಕ ಬದುಕಿನ ಮಾರ್ಗ ತೋರಿಸುತ್ತದೆ. ನಮ್ಮದು ವಿವಿಧತೆಯಲ್ಲಿ ಏಕತೆ ಇರುವ ದೇಶ ಎಂಬುದನ್ನು ಜಗತ್ತು ನೋಡುತ್ತಿದೆ. ಅನಾದಿ ಕಾಲದಿಂದಲೂ ಸಂಪ್ರದಾಯ ಬದ್ದರೂ ಭಗವಂತನನ್ನು ನಂಬುತ್ತಿದ್ದು, ಸುಖ ಸಂತೋಷದಿಂದ ಜೀವನ ನಡೆಸುತ್ತಿದ್ದಾರೆ. ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳುವ ಮೂಲಕ ಶಾಂತಿಯನ್ನು ಕಾಯ್ದುಕೊಳ್ಳಬೇಕಿದೆ ಎಂದರು. ರಾಜಸ್ಥಾನ ಅಬುರಾಜ್ ಪ್ರಧಾನ ಕೇಂದ್ರದ (ಧಾರ್ಮಿಕ ವಿಭಾಗ) ಸಂಯೋಜಕ ರಾಜಯೋಗಿ ಬ್ರಹ್ಮಾಕುಮಾರ ರಾಮನಾಥಜಿ ಮಾತನಾಡಿ, ಮನುಷ್ಯ ಜೀವನದಲ್ಲಿ ಭೌತಿಕ ಮತ್ತು ಆಧ್ಯಾತ್ಮಿಕ ಎಂಬ ಎರಡು ಶಕ್ತಿಗಳಿವೆ. ಆಧ್ಯಾತ್ಮಿಕ ಧ್ಯಾನ ಜೀವನದಲ್ಲಿ ಪರಿವರ್ತನೆ ಮಾಡುತ್ತದೆ. ಮನಸ್ಸು ಮತ್ತು ಬುದ್ಧಿ ಒಂದಾಗಿ ಕೆಲಸ ಮಾಡಬೇಕು. ಅಭ್ಯಾಸದಿಂದ ಮನಸ್ಸನ್ನು ಗೆಲ್ಲಬಹುದು ಎಂದರು. ದಾವಣಗೆರೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗಿನಿ ಬಿಕೆ ಲೀಲಾಜಿ ಮಾತನಾಡಿ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ಸಂಸ್ಥೆಯು ಆಧ್ಯಾತ್ಮಿಕ ಜಾಗೃತಿ ಮೂಲಕ ವಿಶ್ವದ ಪರಿವರ್ತನೆ ಕೆಲಸ ಮಾಡುತ್ತಿದೆ. ಮನುಷ್ಯರನ್ನು ದುಶ್ಚಟಗಳಿಂದ ದೂರಮಾಡಿ ಸನ್ಮಾರ್ಗದಲ್ಲಿ ಸಾಗುವಂತೆ ಮಾಡುವುದು. ಸನಾತನ ಭಾರತದ ಪುನಃ ಸ್ಥಾಪನೆ. ದೈವಿ ರಾಜ್ಯ ಸ್ಥಾಪನೆಯ ಚಿಂತನೆಯನ್ನು ಹೊಂದಿದೆ ಎಂದರು. ರಾಜಸ್ಥಾನ ಅಬುರಾಜ್ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಹಿರಿಯ ರಾಜಯೋಗ ಶಿಕ್ಷಕ ಬಿಕೆ ಸುರೇಶಜಿ, ಸ್ಥಳೀಯ ರಾಮಕೃಷ್ಣ ವಿವೇಕಾನಂದ ಆಶ್ರಮದ ಪ್ರಕಾಶಾನಂದಜಿ ಮಹಾರಾಜ್, ದೊಡ್ಡಪೇಟೆ ವಿರಕ್ತ ಮಠದ ಗುರುಬಸವ ಮಹಾಸ್ವಾಮಿಗಳು, ಗುಡ್ಡದ ಆನ್ವೇರಿ ವಿರಕ್ತ ಮಠದ ಶಿವಯೋಗೇಶ್ವರ ಮಹಾಸ್ವಾಮಿಗಳು, ಬೆಳಗಾವಿ ಕಾರಂಜ ಮಠದ ಶಿವಯೋಗಿ ದೇವರು, ತುಮ್ಮಿನಕಟ್ಟಿ ಪದ್ಮಶಾಲಿ ಗುರುಪೀಠದ ಪ್ರಭುಲಿಂಗ ಮಹಾಸ್ವಾಮಿಗಳು ಮಾತನಾಡಿದರು. ಐರಣಿಯ ಗಜದಂಡ ಮಹಾಸ್ವಾಮಿಗಳು, ಲಿಂಗದಹಳ್ಳಿ ಹಿರೇಮಠದ ವೀರಭದ್ರ ಶಿವಾಚಾರ್ಯರು, ಹಲಗೇರಿ ಗೀತಾ ಕುಟೀರದ ಮಾತಾಜಿ ಅನ್ನಪೂರ್ಣ, ಸ್ಥಳೀಯ ಶನೈಶ್ಚರ ಮಠದ ಶಿವಯೋಗಿ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಬಿಕೆ ಮಾಲತಿ ಅಕ್ಕ, ಬಿಕೆ ಚಂದ್ರಕಲಾ, ಕೆ.ಸಿ.ಕೋಮಲಾಚಾರಿ, ಕೊಟ್ರೇಶಪ್ಪ ಎಮ್ಮಿ, ನಿತ್ಯಾನಂದ ಕುಂದಾಪುರ, ದೇವೇಂದ್ರಪ್ಪ ಮತ್ತಿತರರಿದ್ದರು.