ಸಾರಾಂಶ
ಇಂದು ಚಿಕ್ಕವರಿಂದ ಯುವಕರ ವರೆಗೆ ಮೊಬೈಲ್‌ನಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಭಜನೆ ಎಂದಾಕ್ಷಣ ನಮಗೆ ಸಂಬಂಧಿಸಿದ್ದಲ್ಲ ಎನ್ನುವ ಮನಸ್ಥಿತಿಗೆ ಬಂದಿದ್ದಾರೆ.
ಕನಕಗಿರಿ:
ದಾಸರ ಕೀರ್ತನೆ, ಶರಣರ ತತ್ವಪದಗಳ ಸ್ಮರಣೆಯಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಕಲಾವಿದ ಗುಂಡಪ್ಪ ಚಿತ್ರಗಾರ ಹೇಳಿದರು.ಶ್ರಾವಣ ಮಾಸದಂಗವಾಗಿ ಶ್ರೀಕನಕಾಚಲ ಭಜನಾ ಸಂಘ ಹಮ್ಮಿಕೊಂಡಿದ್ದ ತಿಂಗಳ ಪರ್ಯಂತ ಭಜನೆ ಸಹಿತ ನಗರ ಪ್ರದಕ್ಷಣೆ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.
ಕರ್ನಾಟಕ ಸಂಗೀತ ಪಿತಾಮಹರೆನಿಸಿದ ಪುರಂದರದಾಸರು, ಭಕ್ತ ಕನಕದಾಸರು, ಹರಿಕಥಾಮೃತಸಾರದ ಕರ್ತೃ ಜಗನ್ನಾಥದಾಸರು, ಕನಕಾಚಲಪತಿ ದರ್ಶನಕ್ಕೆ ಬಂದಿದ್ದ ವಿಜಯದಾಸ, ಗೋಪಾಲದಾಸರ ದಿವ್ಯತೆಯಿಂದ ಹಾಗೂ ಜೀವಂತ ಸಮಾಧಿಯಾಗಿರುವ ಚಿದಾನಂದರು, ಹಾಲಪ್ಪಯ್ಯನಸ್ವಾಮಿ ಹಾಗೂ ಸುವರ್ಣಗಿರಿ ವಿರಕ್ತ ಮಠದ ಗುರು ರುದ್ರದೇವರು ತಪಸ್ಸಿನಿಂದ ಕನಕಗಿರಿ ಪುಣ್ಯ ಭೂಮಿಯಾಗಿದೆ. ಇಂತಹ ಪರಂಪರೆ ನಾಡಿಯಲ್ಲಿ ದಾಸರ ಹಾಗೂ ಶರಣರು ರಚಿಸಿದ ಕಿರ್ತನೆಗಳನ್ನಾಡಿ ಹಿಂದಿನ ಸಂಸ್ಕೃತಿ ಬೆಳೆಗಿಸುವ ಕಾಯಕ ನಮ್ಮದಾಗಬೇಕು ಎಂದು ತಿಳಿಸಿದರು.ಭಜನಾ ಸಂಘದ ಅಧ್ಯಕ್ಷ ಗೋಪಾಲರೆಡ್ಡಿ ಮಹಲನಿಮನಿ ಮಾತನಾಡಿ, ಇಂದು ಚಿಕ್ಕವರಿಂದ ಯುವಕರ ವರೆಗೆ ಮೊಬೈಲ್‌ನಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಭಜನೆ ಎಂದಾಕ್ಷಣ ನಮಗೆ ಸಂಬಂಧಿಸಿದ್ದಲ್ಲ ಎನ್ನುವ ಮನಸ್ಥಿತಿಗೆ ಬಂದಿದ್ದಾರೆ. ಭಜನೆಯಿಂದ ಏನೆಲ್ಲ ಉಪಯೋಗವಿದೆ ಎನ್ನುವುದು ಮನೆಯ ಹಿರಿಯರು ಮಕ್ಕಳಿಗೆ ತಿಳಿಸಬೇಕು ಎಂದರು.
ಬೆಳಗಿನ ಜಾವ ೫ಕ್ಕೆ ಶ್ರೀಕನಕಾಚಲಪತಿ ದೇವಸ್ಥಾನದಿಂದ ಆರಂಭಗೊಂಡ ನಗರ ಪ್ರದಕ್ಷಣೆ ಪ್ರತಾಪರಾಯ, ಚಿದಾನಂದಮಠ, ಆನೆಗೊಂದಿ ಅಗಸಿ, ಗ್ರಾಮದೇವತೆ ದ್ಯಾಮಮ್ಮದೇವಿ, ತೆಗ್ಗಿನಮನಿ ಓಣಿಯ ಬಸವೇಶ್ವರ ದೇವಸ್ಥಾನ, ಗಂಗಾಮತ ಓಣಿಯ ವೆಂಕಟರಮಣ ದೇವಸ್ಥಾನ, ಮೆಲುಗಡೆ ಅಗಸಿ ಹನುಮಪ್ಪ ದೇಗುಲದಿಂದ ರಾಜಬೀದಿಯ ಮಾರ್ಗವಾಗಿ ಕನಕಾಚಲಪತಿ ದೇವಸ್ಥಾನದವರೆಗೂ ದೀಪರಾಧನೆ ನಡೆಯಿತು.ಕಲಾವಿದರಾದ ಶ್ರೀನಿವಾಸರೆಡ್ಡಿ ಓಣಮನಿ, ವೀರಪ್ಪ ಕೊಡ್ಲಿ, ರಾಮಣ್ಣ ಗುಂಜಳ್ಳಿ, ಹನುಮಂತರೆಡ್ಡಿ ಮಹಲಿನಮನಿ, ಮಹಾಂತೇಶ ಕೊಡ್ಲಿ, ಶರಣಬಸವ ಕಾರಪುಡಿ, ಕನಕರಾಯ ನಾಯಕ, ಕರುಣಾಕರರೆಡ್ಡಿ, ರಾಮಾಂಜನೇಯ್ಯರಡ್ಡಿ ಓಣಿಮನಿ, ನರಸಿಂಹರೆಡ್ಡಿ ಕೆರಿ ಸೇರಿ ಇತರರಿದ್ದರು.