ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನ ಪ್ರಾಂಶುಪಾಲ ಅನ್ಸರ್ ಉಲ್ ಹಕ್, ಟಿಪ್ಪು ಸೇರಿದಂತೆ ಮಹಾನ್ ವ್ಯಕ್ತಿಗಳ ಕುರಿತು ನಮ್ಮಲ್ಲಿರುವ ತಪ್ಪು ತಿಳಿವಳಿಕೆ ತೊಡೆದು ಹಾಕಬೇಕು. ಇಲ್ಲದಿದ್ದರೆ ಒಳ್ಳೆಯವರ ಬಗ್ಗೆಯೂ‌ ತಪ್ಪಾಗಿ ಮಾತಾಡುವವರ ಸಂಖ್ಯೆ ಹೆಚ್ಚಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ರಾಮನಗರ

ಮೈಸೂರು ಹುಲಿ ಖ್ಯಾತಿಯ ಟಿಪ್ಪು ಸುಲ್ತಾನ್ ಮೈಸೂರು ಸಂಸ್ಥಾನದ ಕೀರ್ತಿ ಬೆಳಗಿದವರು. ಆದರೆ, ಅವರನ್ನು ಖಳನಾಯಕನನ್ನಾಗಿ ಬಿಂಬಿಸುತ್ತಿರುವ ಪಟ್ಟಭದ್ರರು ಹೇಳುತ್ತಿರುವ ಕಪೋಲಕಲ್ಪಿತ ಕಥೆಗಳನ್ನು ನಂಬುವುದು ಇತಿಹಾಸಕ್ಕೆ ಮಾಡುವ ಅವಮಾನ ಎಂದು ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್ ಹೇಳಿದರು.

ನಗರದ ರಾಮ್ ಕಮಲ್ ಪಾರ್ಟಿ ಹಾಲ್‌ನಲ್ಲಿ ನಮ್ಮ‌ವರು ಬಳಗವು ಭಾನುವಾರ ಸಂಜೆ ಹಮ್ಮಿಕೊಂಡಿದ್ದ ‘ಕರಾವಳಿಯ ಚರಿತ್ರೆಯಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್’ ಪುಸ್ತಕ ಬಿಡುಗಡೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಟಿಪ್ಪು ಆಡಳಿತಲ್ಲಿ ಧರ್ಮ ಸಹಿಷ್ಣುತೆ ಇತ್ತು. ಇತಿಹಾಸವನ್ನು ವಸ್ತುನಿಷ್ಠವಾಗಿ ನೋಡಬೇಕು. ಆದರೆ, ಪಟ್ಟಭದ್ರರು ತಮ್ಮ ಹಿತಾಸಕ್ತಿಗಾಗಿ ಇತಿಹಾಸವನ್ನು ತಿರುಚಿ ಟಿಪ್ಪುವನ್ನು ಖಳನಾಯಕನನ್ನಾಗಿ ಬಿಂಬಿಸುತ್ತಾ ಬಂದಿದ್ದಾರೆ.

ಪಟ್ಟಭದ್ರರ ಇಂತಹ ನಡೆಗಳು ನೈಜ ಚರಿತ್ರೆ ಮತ್ತು ವಾಸ್ತವದತ್ತ ಜನರ ಗಮನ ಸೆಳೆಯುವಂತೆ ಮಾಡಿರುವುದು ಉತ್ತಮ ಬೆಳವಣಿಗೆ. ಅದೇ ಕಾರಣಕ್ಕೆ ಟಿಪ್ಪು ಕುರಿತು ಹಲವು ಸಂಶೋಧನಾ ಕೃತಿಗಳು ಬಂದವು. ಆ ಪೈಕಿ ಕರಾವಳಿಯಲ್ಲಿ ಟಿಪ್ಪು ಕುರಿತ ತಪ್ಪು ಗ್ರಹಿಕೆಗೆ ನವೀನ್ ಅವರ ಈ ಪುಸಕ್ತ ಮದ್ದಾಗಿದೆ ಎಂದು ಹೇಳಿದರು.

ಇದೇ ಪಟ್ಟಭದ್ರರು ಹಿಂದೆ ಸಂವಿಧಾನ ಬದಲಾವಣೆ ಕುರಿತು ಮಾತನಾಡಿದಾಗ ದೇಶದಲ್ಲಿ ಸಂವಿಧಾನ ಪ್ರಜ್ಞೆ ಮೊಳಗಿತು. ಅದುವರೆಗೆ ಚರ್ಚೆಯ ವಸ್ತುವೇ ಆಗಿಲ್ಲದ ಸಂವಿಧಾನ ಕುರಿತು ಎಲ್ಲರೂ ಮಾತನಾಡತೊಡಗಿದರು. ಕಡೆಗೆ ಶಾಲೆಗಳಲ್ಲಿ ಸಂವಿಧಾನದ ಪೀಠಿಕೆ ಓದುವಷ್ಟರ ಮಟ್ಟಿಗೆ ಜಾಗೃತಿ ಮೂಡಿತು ಎಂದು ಹೇಳಿದರು.

ಬ್ರಿಟಿಷರ ಎದೆ ನಡುಗಿಸಿದ್ದ ವೀರ:

ಕೃತಿ ಬಿಡುಗಡೆ ಮಾಡಿದ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ), ಬ್ರಿಟಿಷರ ಎದೆ ನಡುಗಿಸಿದ್ದ ಟಿಪ್ಪು ಸುಲ್ತಾನ್ ಎಂದಿಗೂ ರಾಜಿ ಮಾಡಿಕೊಳ್ಳಲಿಲ್ಲ. ಯುದ್ಧದಲ್ಲಿ ಸೋತರೂ ತನ್ನ ಮಕ್ಕಳನ್ನು ಒತ್ತೆ ಇಟ್ಟು, ಹೋರಾಡುತ್ತಲೇ ಮಡಿದ ವೀರ. ಸರ್ಕಾರ ಟಿಪ್ಪು ಜಯಂತಿ ಆಚರಿಸಲು ಮುಂದಾದಾಗ ಪಟ್ಟಭದ್ರರು ಟಿಪ್ಪು ವಿರುದ್ಧ ಧರ್ಮ ದ್ವೇಷ ಹಾಗೂ ಅಪಪ್ರಚಾರದ ರಾಜಕಾರಣ ಮಾಡಿದರು ಎಂದು ಬೇಸರ ವ್ಯಕ್ತಪಡಿಸಿದರು.

ರಾಮನಗರದ ಹೆಮ್ಮೆ ರೇಷ್ಮೆಯನ್ನು ನಾಡಿಗೆ ಪರಿಚಯಿಸಿದ ಕೀರ್ತಿ ಟಿಪ್ಪು ಅವರದ್ದು. ನವೀನ್ ಅವರು ಟಿಪ್ಪು ನೈಜ ವ್ಯಕ್ತಿತ್ವವನ್ನು ತಮ್ಮ ಪುಸ್ತಕದಲ್ಲಿ ಬಿಂಬಿಸಿದ್ದಾರೆ. ಹಿಂದೆ ಸತ್ಯ ಹೇಳಿದ್ದ ಕಾರಣಕ್ಕೆ ಸಂಕಷ್ಟ ಎದುರಿಸಿ ಜೈಲು ಕಂಡಿರುವ ಅವರು ಸತ್ಯದ ಹಾದಿಯಲ್ಲಿ ರಾಜಿ ಮಾಡಿಕೊಳ್ಳದ ದಿಟ್ಟ ಪತ್ರಕರ್ತ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನ ಪ್ರಾಂಶುಪಾಲ ಅನ್ಸರ್ ಉಲ್ ಹಕ್, ಟಿಪ್ಪು ಸೇರಿದಂತೆ ಮಹಾನ್ ವ್ಯಕ್ತಿಗಳ ಕುರಿತು ನಮ್ಮಲ್ಲಿರುವ ತಪ್ಪು ತಿಳಿವಳಿಕೆ ತೊಡೆದು ಹಾಕಬೇಕು. ಇಲ್ಲದಿದ್ದರೆ ಒಳ್ಳೆಯವರ ಬಗ್ಗೆಯೂ‌ ತಪ್ಪಾಗಿ ಮಾತಾಡುವವರ ಸಂಖ್ಯೆ ಹೆಚ್ಚಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಲೇಖಕ ಕೊತ್ತಿಪುರ ಜಿ. ಶಿವಣ್ಣ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನವೀನ್ ಸೂರಿಂಜೆ ಹಾಗೂ ಕಾವ್ಯ ದಂಪತಿಯನ್ನು ಸನ್ಮಾನಿಸಲಾಯಿತು. ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಶಿವಕುಮಾರಸ್ವಾಮಿ, ಮುಸ್ಲಿಂ ಪದವೀಧರರ ವೇದಿಕೆಯ ಕಾರ್ಯದರ್ಶಿ ನಯಾಜ್ ಅಹಮದ್, ನಮ್ಮವರು ಬಳಗದ ಪದ್ಮರೇಖಾ, ನಗರಸಭೆ ಸದಸ್ಯ ಸಮದ್, ನಮ್ಮವರು ಬಳಗದ ಡಾ. ಅಂಕನಹಳ್ಳಿ ಪಾರ್ಥ, ಡಾ. ಕೃಷ್ಣ ಹಾಗೂ ಇತರರು ಇದ್ದರು. ಬಳಗದ ಆರ್.‌ ನಾಗರಾಜು ಸ್ವಾಗತ ಮತ್ತು ನಿರೂಪಣೆ ಮಾಡಿದರು. ಬ್ಯಾಡರಹಳ್ಳಿ ಶಿವಕುಮಾರ್ ಸೌಹಾರ್ದ ಹಾಡುಗಳನ್ನು ಹಾಡಿದರು.

--

ಕೋಟ್...

ಟಿಪ್ಪು ಸುಲ್ತಾನ್ ತನ್ನ ಆಡಳಿತದಲ್ಲಿ ಸ್ವಧರ್ಮ ಸೇರಿದಂತೆ ಯಾವ ಧರ್ಮವನ್ನೂ ಓಲೈಕೆ ಮಾಡಲಿಲ್ಲ. ಬ್ರಿಟಿಷರ ಕಾಲದಲ್ಲೇ ಟಿಪ್ಪು ಬಗ್ಗೆ ವ್ಯವಸ್ಥಿತವಾಗಿ ಅಪಪ್ರಚಾರ ಮಾಡುವ ಕೆಲಸ ನಡೆದಿತ್ತು. ಅದು ಈಗಲೂ ನಡೆಯುತ್ತಿದೆ. ಅದಕ್ಕೆ ಈ ಪುಸ್ತಕ ಉತ್ತರವಾಗಿದೆ.

– ನವೀನ್ ಸೂರಿಂಜೆ, ಕೃತಿಯ ಲೇಖಕ

-

ಕೋಟ್...

ಮುಸ್ಲಿಮರನ್ನು ಅಂಚಿಗೆ ತಳ್ಳುತ್ತಾ ಅಪರಾಧಿ ಸಮುದಾಯವಾಗಿ ಬಿಂಬಿಸುವ ಕೆಲಸವಾಗುತ್ತಿದೆ. ಮುಸ್ಲಿಮರಲ್ಲಿ ಸಮರ್ಥ ನಾಯಕತ್ವದ ಕೊರತೆ, ಒಳಗೊಳ್ಳುವಿಕೆ ಮತ್ತು ಪ್ರಗತಿಪರತೆ ಇಲ್ಲದಿರುವುದು, ಎಲ್ಲವನ್ನು ಧರ್ಮದ ಚೌಕಟ್ಟಿನಲ್ಲಿ ನೋಡುವುದು ಇದಕ್ಕೆ ಕಾರಣವಾಗಿದೆ.

ಮುನೀರ್ ಕಾಟಿಪಳ್ಳ, ಹೋರಾಟಗಾರ.