ಸಾರಾಂಶ
ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಗಲಭೆ ಪ್ರಕರಣ ಹಿಂತೆಗೆದುಕೊಂಡಿರುವ ರಾಜ್ಯ ಸರ್ಕಾರದ ನಿರ್ಧಾರ ಖಂಡಿಸಿ ಮುಖ್ಯಮಂತ್ರಿ ಅವರಿಗೆ ಘೇರಾವ್ ಹಾಕಲು ಯತ್ನಿಸಿದ ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ ಸೇರಿದಂತೆ ನೂರಾರು ಜನ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ವಿವಿಧ ಕಾರ್ಯಕ್ರಮಗಳ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಭಾನುವಾರ ಹುಬ್ಬಳ್ಳಿಗೆ ಆಗಮಿಸಿದ್ದರು. ಅವರು ಸಾಗುವ ಮಾರ್ಗಮಧ್ಯದ ಅಕ್ಷಯ ಪಾರ್ಕ್ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರು.
ಹಳೇಹುಬ್ಬಳ್ಳಿ ಗಲಭೆ ಪ್ರಕರಣ ಯಾವುದೇ ಕಾರಣಕ್ಕೂ ಹಿಂಪಡೆಯಬಾರದು. ಜತೆಗೆ ಅತ್ಯಾಚಾರ ಪ್ರಕರಣದ ಆರೋಪ ಎದುರಿಸುತ್ತಿರುವ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿಗಳ ವಾಹನ ತಡೆದು ಘೇರಾವ್ ಹಾಕಿ ಮನವಿ ಸಲ್ಲಿಸಬೇಕು ಎಂದು ನಿರ್ಧರಿಸಿದ್ದರು. ಆಗ ಪೊಲೀಸ್ ಆಯುಕ್ತ ಶಶಿಕುಮಾರ ಆಗಮಿಸಿ ಪ್ರತಿಭಟನೆ ನಡೆಸಬೇಡಿ. ಇಲ್ಲಿಗೆ ನಿಲ್ಲಿಸಿ ಎಂದು ಮನವಿ ಮಾಡಿದರು. ಆದರೆ, ಬಿಜೆಪಿಗರು ಪ್ರತಿಭಟನೆ ಮುಂದುವರಿಸಿದರು.ಆಗ ಪೊಲೀಸರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸುವ ಮುನ್ನವೇ ಪ್ರತಿಭಟನಾ ನಿರತರನ್ನು ವಶಕ್ಕೆ ಪಡೆದು ಸಿಎಆರ್ ಹಳೇ ಮೈದಾನಕ್ಕೆ ಕರೆದೊಯ್ದರು. ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಪ್ರಭು ನವಲಗುಂದಮಠ, ಶಶಿ ಡಂಗನವರ, ಸಂತೋಷ ಚವ್ಹಾಣ, ರಾಜು ಜರತಾರಘರ, ಲಿಂಗರಾಜ ಪಾಟೀಲ, ಅಶೋಕ ಕಾಟವೆ, ರಾಜಣ್ಣ ಕೊರವಿ, ಉಮೇಶಗೌಡ ಕೌಜಗೇರಿ, ರವಿ ನಾಯಕ, ಅನೂಪ ಬಿಜವಾಡ, ಸಂತೋಷ ಭಟ್, ಮಂಜುನಾಥ ವಡಕಣ್ಣವರ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.
ಎರಡು ತಂಡಗಳಲ್ಲಿ ಪ್ರತಿಭಟನೆಬಿಜೆಪಿಯು ಎರಡು ತಂಡಗಳಲ್ಲಿ ಪ್ರತಿಭಟನೆ ನಡೆಸಿತು. ಮೊದಲಿಗೆ ಶಾಸಕ ಮಹೇಶ ಟೆಂಗಿನಕಾಯಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿತ್ತು, ಪೊಲೀಸರ ತಂಡ ಮೊದಲಿಗೆ ಟೆಂಗಿನಕಾಯಿ ಸೇರಿದಂತೆ 200ಕ್ಕೂ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿ ಕರೆದುಕೊಂಡು ಹೋದರು. ಆನಂತರ ಕೆಲಸಮಯ ಕಳೆದ ಮೇಲೆ ಶಾಸಕ ಅರವಿಂದ ಬೆಲ್ಲದ ನೇತೃತ್ವದಲ್ಲಿ ಮತ್ತಷ್ಟು ಬಿಜೆಪಿ ಕಾರ್ಯಕರ್ತರು ಜಮೆಯಾಗಿ ಪ್ರತಿಭಟನೆ ನಡೆಸಲು ಪ್ರಾರಂಭಿಸಿದರು. ಆಗ ಮತ್ತೆ ಪೊಲೀಸರು ಇವರನ್ನು ಬಂಧಿಸಿ ಕರೆದುಕೊಂಡು ಹೋದರು. ಆನಂತರ ಎಲ್ಲರನ್ನು ಬಿಡುಗಡೆಗೊಳಿಸಲಾಯಿತು.
ಕಪ್ಪು ಬಟ್ಟೆ ಪ್ರದರ್ಶನಈ ನಡುವೆ ಪ್ರತಿಭಟನೆ ಎರಡು ತಂಡದಲ್ಲಿ ನಡೆಸಿ ಇಬ್ಬರು ಶಾಸಕರು ಹಾಗೂ ಮುಖಂಡರೆಲ್ಲರೂ ಅರೆಸ್ಟ್ ಆದರೂ ಇಬ್ಬರು ಬಿಜೆಪಿ ಕಾರ್ಯಕರ್ತರು ಸಿಎಂ ಸಿದ್ದರಾಮಯ್ಯ ಅವರಿಗೆ ಕಪ್ಪು ಬಟ್ಟೆ ತೋರಿಸುವಲ್ಲಿ ಯಶಸ್ವಿಯಾದರು. ಜಗದೀಶ ಕಂಬಳಿ ಹಾಗೂ ಮಂಜುನಾಥ ಕಲಾಲ ಎಂಬ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳದೇ ಸಿಎಂ ವಾಹನ ಬರುವ ಮಾರ್ಗ ಮಧ್ಯೆ ನಿಂತಿದ್ದರು. ವಿಮಾನ ನಿಲ್ದಾಣದಿಂದ ಸಿಎಂ ವಾಹನ ಹೋಗುತ್ತಿದ್ದಂತೆ ರಸ್ತೆ ಬದಿಯಲ್ಲಿ ನಿಂತು ಕಪ್ಪು ಬಟ್ಟೆ ತೋರಿಸಿದರು.ಕಾಂಗ್ರೆಸ್‌ನಿಂದ ತುಷ್ಟೀಕರಣ ರಾಜಕೀಯ: ಮಾಜಿ ಸಿಎಂ ಬೊಮ್ಮಾಯಿ
ಹುಬ್ಬಳ್ಳಿ:ರಾಜ್ಯ ಸರ್ಕಾರ ಹುಬ್ಬಳ್ಳಿಯ ಪೊಲೀಸ್ ಸ್ಟೇಷನ್ ಮೇಲೆ ದಾಳಿ ಮಾಡಿರುವ ಪ್ರಕರಣವನ್ನು ಎನ್‌ಐಎ ತನಿಖೆ ನಡೆಸುತ್ತಿದ್ದು, ರಾಜ್ಯ ಸರ್ಕಾರ ವಾಪಸ್ ಪಡೆಯುವ ಮೂಲಕ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದ್ದು, ರಾಜ್ಯದ ಮೇಲಿನ ದಾಳಿಯಾಗಿದೆ. ಇದು ಗಂಭೀರವಾದ ಪ್ರಕರಣ, ಇದನ್ನು ಎನ್‌ಐಎಗೆ ನೀಡಲಾಗಿದ್ದು, ಚಾರ್ಜ್ ಶೀಟ್ ಆಗಿದೆ. ಯುಎಪಿಐ ಅಡಿ ಎನ್‌ಐಎಗೆ ತನಿಖೆಗೆ ನೀಡುವಂತಹ ಪ್ರಕರಣವನ್ನು ಹಿಂಪಡೆಯಲು ರಾಜ್ಯ ಸರ್ಕಾರಕ್ಕೆ ಅಧಿಕಾರ ಇಲ್ಲ. ಈಗ ಇವರು ಸಮಾಜವನ್ನು ಸಂತುಷ್ಟಿ ಮಾಡಲು ಈ ರೀತಿ ಮಾಡುತ್ತಿದ್ದಾರೆ. ಎನ್‌ಐಎಗೆ ನೀಡಿರುವ ಪ್ರಕರಣವನ್ನು ವಾಪಸ್ ಪಡೆಯಲು ಬರುವುದಿಲ್ಲ ಎಂದು ರಾಜ್ಯ ಸರ್ಕಾರಕ್ಕೂ ಗೊತ್ತಿದೆ. ಆದರೂ, ತುಷ್ಟೀಕರಣ ರಾಜಕಾರಣ ಮಾಡುತ್ತಿದ್ದಾರೆ ಎಂದು ಹೇಳಿದರು.ರಾಜ್ಯ ಸರ್ಕಾರ ದೊಡ್ಡ ತಪ್ಪು ಸಂದೇಶ ರವಾನೆ ಮಾಡುತ್ತಿದೆ. ರಾಜ್ಯದಲ್ಲಿ ಡಿಜೆ ಹಳ್ಳಿ, ಕೆಜೆ ಹಳ್ಳಿ ಪ್ರಕರಣ, ಮಂಗಳೂರಿನಲ್ಲಿ ಗಲಭೆ, ಹುಬ್ಬಳ್ಳಿಯಲ್ಲಿ ಪೊಲೀಸ್ ಸ್ಟೇಶನ್ ಮೇಲೆ ದಾಳಿ ಮಾಡಲಾಗಿದೆ. ಹಾಗಿದ್ದರೆ ಇನ್ಮುಂದೆ ಪೊಲೀಸ್ ಸ್ಟೇಶನ್ ಮೇಲೆ ದಾಳಿ ಮಾಡಿದರೆ ಪೊಲೀಸರು ಏನೂ ಮಾಡುವಂತಿಲ್ಲವೇ ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರ ತಮ್ಮ ರಕ್ಷಣೆ ಮಾಡಿಕೊಳ್ಳದಂತಹ ಪರಿಸ್ಥಿತಿಗೆ ಬಂದಿದೆ. ನನ್ನ ಪ್ರಕಾರ ಕಾನೂನು ಸುವ್ಯವಸ್ಥೆ ಕಿತ್ತು ಹೋಗಿದೆ. ಈ ತರಹ ಒಂದು ಕಾನೂನಾತ್ಮಕ ಚಿಂತನೆಯನ್ನೂ ರಾಜ್ಯ ಸರ್ಕಾರ ಕಳೆದುಕೊಂಡಿದೆಯಲ್ಲ ಎಂದು ಖೇದ ಅನಿಸುತ್ತಿದೆ. ತಮ್ಮ ತಪ್ಪು ಹಾಗೂ ಹಗರಣಗಳನ್ನು ಮುಚ್ಚಿಕೊಳ್ಳಲು ಈ ರೀತಿಯ ಆತುರದ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಹೇಳಿದರು.ಮನವಿ ಸಲ್ಲಿಸಲು ಪೊಲೀಸರು ಅನುಮತಿ ನೀಡದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದು ಪೊಲೀಸ್ ರಾಜ್ಯವಾಗಿದೆ. ಇಲ್ಲಿ ಪ್ರಜಾಪ್ರಭುತ್ವ ಇಲ್ಲದಾಗಿದೆ ಎಂದರು.
ರಾಜ್ಯ ಸರ್ಕಾರ ದುಷ್ಟರ ಸಂಹಾರ ಮಾಡುವ ಬಗ್ಗೆ ಜಾಹೀರಾತು ನೀಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಇದು ಅಪರಾಧಿ ಮನೋಭಾವ. ತಾವು ಏನೂ ತಪ್ಪು ಮಾಡಿಲ್ಲ ಎಂಬ ಭಾವನೆ ಮೂಡಿಸುವ ಸಲುವಾಗಿ ಇತರರನ್ನು ದುಷ್ಟರು ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ರೀತಿ ಹಿಂದೆ ಆಗಿರಲಿಲ್ಲ. ಸರ್ಕಾರಿ ಜಾಹೀರಾತನ್ನು ತಮ್ಮ ಸ್ವಂತ ರಾಜಕಾರಣಕ್ಕೆ ಬಳಕೆ ಮಾಡಿಕೊಳ್ಳುತ್ತಿರುವುದು ಇದೇ ಪ್ರಥಮ. ಇದು ಅತ್ಯಂತ ಖಂಡನೀಯ ಎಂದು ಹೇಳಿದರು.