ಬಿಜೆಪಿ ಕಾರ್ಯಕರ್ತರಿಂದ ಕಾಂಗ್ರೆಸ್ ಕಚೇರಿ ಮುತ್ತಿಗೆ ಯತ್ನ

| Published : Feb 29 2024, 02:01 AM IST

ಬಿಜೆಪಿ ಕಾರ್ಯಕರ್ತರಿಂದ ಕಾಂಗ್ರೆಸ್ ಕಚೇರಿ ಮುತ್ತಿಗೆ ಯತ್ನ
Share this Article
  • FB
  • TW
  • Linkdin
  • Email

ಸಾರಾಂಶ

‘ಭಾರತ್ ಮಾತಾ ಕೀ ಜೈ’, ‘ಕಾಂಗ್ರೆಸ್ ಪಕ್ಷಕ್ಕೆ ಧಿಕ್ಕಾರ’, ‘ನಾಸೀರ್ ಹುಸೇನ್‌ಗೆ ಧಿಕ್ಕಾರ’ ಎಂಬ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು. ಸ್ವಲ್ಪ ಸಮಯದವರೆಗೆ ಹೈಡ್ರಾಮ ಹಾಗೆಯೇ ಮುಂದುವರೆದಿತ್ತು. ನಂತರ ಪೊಲೀಸರು, ಬಿಜೆಪಿ ಮುಖಂಡರು-ಕಾರ್ಯಕರ್ತರನ್ನು ಬಂಧಿಸಿ ವಾಹನದಲ್ಲಿ ಕರೆದೊಯ್ದರು.

ಕನ್ನಡಪ್ರಭ ವಾರ್ತೆ ಮಂಡ್ಯ

ವಿಧಾನಸೌಧದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದರೆಂಬ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರ ಕರೆಯ ಮೇರೆಗೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಮಂಗಳವಾರ ನಡೆಯಿತು.

ಬಿಜೆಪಿ ಪಕ್ಷದ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆಯಲ್ಲಿ ಆಗಮಿಸಿದ ಮುಖಂಡರು-ಕಾರ್ಯಕರ್ತರನ್ನು ಕಾಂಗ್ರೆಸ್ ಕಚೇರಿ ಬಳಿಗೆ ತೆರಳದಂತೆ ಬ್ಯಾರಿಕೇಡ್‌ಗಳನ್ನು ಹಾಕಿಕೊಂಡಿದ್ದ ಪೊಲೀಸರು ದೂರದಿಂದಲೇ ಅವರನ್ನು ತಡೆದು ನಿಲ್ಲಿಸಿದರು. ಬ್ಯಾರಿಕೇಡ್‌ಗಳನ್ನು ಬೇಧಿಸಿ ಒಳನುಗ್ಗುವುದಕ್ಕೆ ಹಲವರು ಪ್ರಯತ್ನಿಸಿದರಾದರೂ ಪೊಲೀಸರು ಅದೆಲ್ಲವನ್ನೂ ವಿಫಲಗೊಳಿಸಿದರು.

‘ಭಾರತ್ ಮಾತಾ ಕೀ ಜೈ’, ‘ಕಾಂಗ್ರೆಸ್ ಪಕ್ಷಕ್ಕೆ ಧಿಕ್ಕಾರ’, ‘ನಾಸೀರ್ ಹುಸೇನ್‌ಗೆ ಧಿಕ್ಕಾರ’ ಎಂಬ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು. ಸ್ವಲ್ಪ ಸಮಯದವರೆಗೆ ಹೈಡ್ರಾಮ ಹಾಗೆಯೇ ಮುಂದುವರೆದಿತ್ತು. ನಂತರ ಪೊಲೀಸರು, ಬಿಜೆಪಿ ಮುಖಂಡರು-ಕಾರ್ಯಕರ್ತರನ್ನು ಬಂಧಿಸಿ ವಾಹನದಲ್ಲಿ ಕರೆದೊಯ್ದರು.

ಇದಕ್ಕೂ ಮುನ್ನ ಮಾತನಾಡಿದ ಬಿಜೆಪಿ ಮುಖಂಡ ಎಚ್.ಆರ್.ಅರವಿಂದ್, ವಿಧಾನಸೌಧದ ಒಳಗೆ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿರುವುದು ದೇಶದ್ರೋಹದ ಕೆಲಸ. ಮಂಗಳವಾರ ವಿಧಾನಸೌಧದಲ್ಲಿ ನಡೆದದ್ದು ರಾಜ್ಯಸಭೆ ಚುನಾವಣೆಯೇ ಹೊರತು ಭಾರತ-ಪಾಕಿಸ್ತಾನ ಯುದ್ಧವಲ್ಲ. ಪಾಕಿಸ್ತಾನ್ ಜಿಂದಾಬಾದ್ ಎಂದು ಬೆಂಬಲಿಗರು ಘೋಷಣೆ ಕೂಗಿದರೂ ರಾಜ್ಯಸಭೆಗೆ ಆಯ್ಕೆಯಾಗಿರುವ ನಾಸೀರ್ ಹುಸೇನ್ ಅದನ್ನು ಸಮರ್ಥಿಸಿಕೊಂಡು ಉದ್ಧಟತನ, ದುರಹಂಕಾರ ಪ್ರದರ್ಶಿಸಿದ್ದಾರೆ. ಇಂತಹವರು ರಾಜ್ಯಸಭೆ ಪ್ರವೇಶಕ್ಕೆ ಆಯೋಗ್ಯರಾಗಿದ್ದು, ಕೂಡಲೇ ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಪಡಿಸಿದರು.

ಇಲ್ಲಿಯ ಅನ್ನ ತಿಂದು, ನೀರು ಕುಡಿದು, ಇಲ್ಲೇ ಜೀವಿಸುತ್ತಿರುವವರು ನಾಡಿನ ಬಗ್ಗೆ, ದೇಶದ ಬಗ್ಗೆ ಅಭಿಮಾನ, ಗೌರವವಿಟ್ಟುಕೊಳ್ಳದೆ ಪಾಕಿಸ್ತಾನದ ಪರ ಜೈಕಾರ ಮೊಳಗಿಸಿ ಅಭಿಮಾನ ತೋರ್ಪಡಿಸಿದ್ದಾರೆ. ಅಂತಹವರು ಅಲ್ಲೇ ಹೋಗಿ ಬದುಕು ಕಟ್ಟಿಕೊಳ್ಳಲಿ. ಅವರಿಗೆ ನಮ್ಮಲ್ಲಿ ವಾಸಿಸಲು ಯಾವ ಯೋಗ್ಯತೆಯೂ ಇಲ್ಲ. ಕೂಡಲೇ ಘೋಷಣೆ ಕೂಗಿದವರನ್ನು ನಮ್ಮ ನೆಲದಿಂದ ಪಾಕಿಸ್ತಾನಕ್ಕೆ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.

ಮತ್ತೋರ್ವ ಬಿಜೆಪಿ ಮುಖಂಡ ಅಶೋಕ್ ಜಯರಾಂ ಮಾತನಾಡಿ, ಚುನಾವಣೆಯಲ್ಲಿ ಯಾರೇ ಗೆಲ್ಲಲಿ. ಅಂಧಾಭಿಮಾನಕ್ಕೆ ಒಳಗಾಗಿ ದೇಶ ವಿರೋಧಿ ಘೋಷಣೆಗಳನ್ನು ಕೂಗುವುದು ಸರಿಯಲ್ಲ. ರಾಜ್ಯಸಭೆ ಪ್ರವೇಶಿಸುತ್ತಿರುವವರು ಕೂಡ ಗೂಂಡಾ ರೀತಿ ವರ್ತಿಸಿದ್ದಾರೆ. ಅಧಿಕಾರದ ಮದ ಏರಿಸಿಕೊಂಡಿರುವ ಇಂತಹವರಿಂದ ರಾಜ್ಯಸಭೆ ಕಲುಷಿತವಾಗುತ್ತದೆ. ಕೂಡಲೇ ನಾಸೀರ್ ಹುಸೇನ್ ಅವರನ್ನು ರಾಜ್ಯಸಭಾ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಪಡಿಸಿದರು.

ಕಾಂಗ್ರೆಸ್ ನಾಯಕರು ದುಡ್ಡಿಗಾಗಿ ಅಯೋಗ್ಯರನ್ನು ರಾಜ್ಯಸಭೆ ಪ್ರವೇಶಿಸುವಂತೆ ಮಾಡಿದ್ದಾರೆ. ಗೌರವ-ಮರ್ಯಾದೆ ಇಲ್ಲದಂತೆ ವರ್ತಿಸಿರುವ ನಾಸೀರ್ ಹುಸೇನ್ ದುರಹಂಕಾರದ ಮಾತುಗಳನ್ನಾಡಿರುವುದು ಎಲ್ಲರ ಮನಸ್ಸಿಗೆ ಘಾಸಿ ಉಂಟುಮಾಡಿದೆ. ದೇಶದ್ರೋಹಿಗಳ ಪಡೆಯನ್ನು ಹೊಂದಿರುವ ಇಂತಹವರನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ, ಬಿಜೆಪಿ ಮಾಧ್ಯಮ ವಕ್ತಾರ ಸಿ.ಟಿ.ಮಂಜುನಾಥ್, ಎಚ್.ಆರ್.ಅಶೋಕ್‌ ಕುಮಾರ್, ಭೀಮೇಶ್, ಜ್ಯೋತಿ ಕೃಷ್ಣೇಗೌಡ, ಪುಟ್ಟಮ್ಮ, ನರಸಿಂಹಮೂರ್ತಿ, ವಸಂತ್, ಕೇಶವ, ನರಸಿಂಹಾಚಾರ್, ನಾಗಾನಂದ್, ನವೀದ್‌ಗೌಡ, ಶಂಕರ್, ಧರಣಿ, ಶಶಿಕುಮಾರ್, ಮಳವಳ್ಳಿ ಕೃಷ್ಣ, ನಾಗಮಂಗಲ ಸೋಮಶೇಖರ್, ಪ್ರಸನ್ನಕುಮಾರ್, ಹೊಸಹಳ್ಳಿ ಶಿವು, ಮಾದರಾಜೇ ಅರಸ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.