ಸಾರಾಂಶ
ತೀರ್ಥಹಳ್ಳಿ: ಈಡಿಗ ದಿವರು ಬಿಲ್ಲವ ಸೇರಿದಂತೆ 26 ಉಪಪಂಗಡಗಳ ವತಿಯಿಂದ ಮಾ.5ರಂದು ಸಾಗರದಲ್ಲಿ ಶಕ್ತಿ ಸಾಗರ ಸಂಭ್ರಮ ಹೆಸರಿನಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ರಾಜ್ಯಮಟ್ಟದ ಸನ್ಮಾನ ಸಮಾರಂಭ ಆಯೋಜಿಸಿದ್ದೇವೆ ಎಂದು ಸನ್ಮಾನ ಸಮಿತಿ ಅಧ್ಯಕ್ಷ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು.
ಬುಧವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸಮುದಾಯದ ಹಿತೈಷಿಗಳಾಗಿದ್ದ ಯಡಿಯೂರಪ್ಪ ಅವರು ಅಧಿಕಾರವಧಿಯಲ್ಲಿ ಸಾಕಷ್ಟು ಅನುಕೂಲತೆಗಳನ್ನು ಕಲ್ಪಿಸಿದ್ದರು. ಅದಕ್ಕೆ ಪ್ರತಿಯಾಗಿ ಅವರನ್ನು ಗೌರವಿಸುವ ಅವಕಾಶ ನಮಗೆ ದೊರೆತಿರಲಿಲ್ಲ. ಇದೀಗ ಚುನಾವಣಾ ರಾಜಕಾರಣದಿಂದಲೂ ನಿವೃತ್ತಿ ಆಗಿರುವ ಶ್ರೀಯುತರನ್ನು ಇಡೀ ಸಮುದಾಯ ಸೇರಿ ರಾಜ್ಯಮಟ್ಟದಲ್ಲಿ ಗೌರವಿಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದರು.ಸಮಾವೇಶದಲ್ಲಿ 40 ಸಾವಿರ ಜನರನ್ನು ಸೇರಿಸುವ ಉದ್ದೇಶವಿದೆ. ಸನ್ಮಾನ ಸಮಿತಿಯಲ್ಲಿ ನಮ್ಮ ಪಕ್ಷದವರೇ ಆಗಿರುವ ಮಾಜಿ ಸಚಿವರಾದ ಶ್ರೀನಿವಾಸ ಪೂಜಾರಿ, ಸುನಿಲ್ ಕುಮಾರ್ ಮಾಲೀಕಯ್ಯ ಗುತ್ತೇದಾರ್ ಮುಂತಾದವರು ಇದ್ದಾರೆ ಎಂದು ತಿಳಿಸಿದರು.
ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಸಿದ್ದತೆ ದೃಷ್ಟಿಯಿಂದಲೂ ಯಡಿಯೂರಪ್ಪ ಅವರ ಸನ್ಮಾನ, ಸಮಾವೇಶ ಮಹತ್ವ ಹೊಂದಿದೆ. ಹೇಳಿ ಕೇಳಿ ರಾಜಕಾರಣಿಗಳಿಗೆ ಚುನಾವಣೆ ಎಂದರೆ ಒಂದು ರೀತಿಯ ಹಬ್ಬವೇ ಆಗಿದೆ ಎಂದು ಹಾಲಪ್ಪ ಹಾಸ್ಯ ಚಟಾಕಿ ಹಾರಿಸಿದರು.ಮಂಡಿ ಬಿಜೆಪಿ ಅಧ್ಯಕ್ಷ ಹೆದ್ದೂರು ನವೀನ್, ಅಶೋಕಮೂರ್ತಿ,ಬೇಗುವಳ್ಳಿ ಸತೀಶ್, ಬೇಗುವಳ್ಳಿ ಕವಿರಾಜ್, ಬಾಳೇಬೈಲು ರಾಘವೇಂದ್ರ ನಾಯಕ್, ಸುರೇಶ್ ಸ್ವಾಮಿರಾವ್ ಮುಂತಾದವರು ಇದ್ದರು.
- - -ಬಾಕ್ಸ್ ಮುಳುಗಡೆ ಸಂತ್ರಸ್ತರ ಸಮಸ್ಯೆ ಜೀವನ್ಮರಣ ಪ್ರಶ್ನೆಶರಾವತಿ ಮುಳುಗಡೆ ಸಂತ್ರಸ್ತರ ವಿಚಾರಕ್ಕೆ ಸಂಬಂಧಿಸಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಈ ಸಮಸ್ಯೆ ನನ್ನನ್ನೂ ಸೇರಿದಂತೆ ನಮ್ಮ ಸಮುದಾಯದವರ ಜೀವನ್ಮರಣದ ಪ್ರಶ್ನೆಯಾಗಿದೆ. ಈ ಬಗ್ಗೆ ಸಾಕಷ್ಟು ಹೋರಾಟವನ್ನೂ ನಡೆಸಿದ್ದೇವೆ. ಅರಣ್ಯ ಕಾಯ್ದೆ ತೊಡಕಿನಿಂದಾಗಿ ಸಮಸ್ಯೆ ದಶಕಗಳಿಂದ ಉಳಿದುಕೊಂಡಿದೆ. ಈ ಸಮಸ್ಯೆಯನ್ನು ರಾಜ್ಯ ಸರ್ಕಾರ ಸುಪ್ರೀಕೋರ್ಟಿನಲ್ಲಿ ಪ್ರಶ್ನಿಸಬೇಕಿದೆ. ಹಾಲಿ ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಕಾರ್ಯೋನ್ಮುಖರಾಗಿರುವಂತೆ ಕಾಣುತ್ತಿದೆ ಎಂದು ಮಾಜಿ ಸಚಿವ ಹಾಲಪ್ಪ ಹೇಳಿದರು.
- - - -28ಟಿಟಿಎಚ್02: ತೀರ್ಥಹಳ್ಳಿ ಪಟ್ಟಣದ ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಹರತಾಳು ಹಾಲಪ್ಪ ಮತ್ತಿತರರು ಶಕ್ತಿಸಾಗರ ಸಂಭ್ರಮ ಸಮಾವೇಶದ ಪೋಸ್ಟರ್ ಬಿಡುಗಡೆಗೊಳಿಸಿದರು.