ಹತ್ತು ವರ್ಷದಲ್ಲಿ ದೇಶದಲ್ಲಿ ಆಮೂಲಾಗ್ರ ಬದಲಾವಣೆ: ಸಚಿವ ಜೈಶಂಕರ

| Published : Feb 29 2024, 02:00 AM IST

ಹತ್ತು ವರ್ಷದಲ್ಲಿ ದೇಶದಲ್ಲಿ ಆಮೂಲಾಗ್ರ ಬದಲಾವಣೆ: ಸಚಿವ ಜೈಶಂಕರ
Share this Article
  • FB
  • TW
  • Linkdin
  • Email

ಸಾರಾಂಶ

ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ಗ್ಯಾರಂಟಿ. ಅವರಲ್ಲಿನ ಗ್ಯಾರಂಟಿ, ಬದ್ಧತೆ ಹಾಗೂ ನಾಯಕತ್ವದ ಮೇಲೆ ವಿಶ್ವಾಸವಿಟ್ಟರೆ ಮುಂದಿನ 3 ವರ್ಷದಲ್ಲಿ ಭಾರತ ಆರ್ಥಿಕವಾಗಿ ಮೂರನೇ ಸ್ಥಾನಕ್ಕೇರಲಿದೆ ಎಂದು ಕೇಂದ್ರ ವಿದೇಶಾಂಗ ಸಚಿವ ಡಾ.ಎಸ್‌.ಜೈಶಂಕರ ಹೇಳಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಅಭಿವೃದ್ಧಿಗೆ ಗ್ಯಾರಂಟಿ ಎಂದರೆ ಮೋದಿ ಎಂಬಂತಾಗಿದೆ. ಕಳೆದ 10 ವರ್ಷದಲ್ಲಿ ದೇಶದಲ್ಲಿ ಆಮೂಲಾಗ್ರ ಬದಲಾವಣೆಯಾಗಿದೆ. ಯಾವುದೇ ಕ್ಷೇತ್ರವನ್ನು ತೆಗೆದುಕೊಂಡರೂ ಪ್ರಗತಿಯ ನೋಟವೇ ಕಾಣುತ್ತದೆ. ಮೋದಿ ನಾಯಕತ್ವದಿಂದ ಮುಂದಿನ 3 ವರ್ಷದಲ್ಲಿ ಭಾರತ ಜಗತ್ತಿನ ಆರ್ಥಿಕತೆಯಲ್ಲಿ 3ನೆಯ ಸ್ಥಾನ ಪಡೆದುಕೊಳ್ಳಲಿದೆ ಎಂದು ಕೇಂದ್ರ ವಿದೇಶಾಂಗ ಸಚಿವ ಡಾ.ಎಸ್‌.ಜೈಶಂಕರ ಹೇಳಿದರು.

ತಾಲೂಕಿನ ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ವಿಶ್ವದಲ್ಲೇ ಅಪರೂಪದ ಶ್ರೀ ಪದ್ಮಾವತಿ ದೇವಿ ಶಕ್ತಿಪೀಠ ಶಿಲಾನ್ಯಾಸ ಸಮಾರಂಭ, ಜೈನ್‌ ಎ.ಜಿ.ಎಂ. ಆಯುರ್ವೇದ ಮೆಡಿಕಲ್‌ ಮತ್ತು ಆಸ್ಪತ್ರೆಯ ಹೊಸ ಸಂಕೀರ್ಣ ಉದ್ಘಾಟನಾ ಸಮಾರಂಭ ಹಾಗೂ ಎ.ಜಿ.ಎಂ.ಆರ್‌. ಎಂಜಿನಿಯರಿಂಗ್‌ ಕಾಲೇಜಿನ ಆಡಳಿತ ಭವನದ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.

ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ಗ್ಯಾರಂಟಿ. ಅವರಲ್ಲಿನ ಗ್ಯಾರಂಟಿ, ಬದ್ಧತೆ ಹಾಗೂ ನಾಯಕತ್ವದ ಮೇಲೆ ವಿಶ್ವಾಸವಿಟ್ಟರೆ ಮುಂದಿನ 3 ವರ್ಷದಲ್ಲಿ ಭಾರತ ಆರ್ಥಿಕವಾಗಿ ಮೂರನೇ ಸ್ಥಾನಕ್ಕೇರಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಭವ್ಯ ಭಾರತದ ನಿರ್ಮಾಣಕ್ಕೆ ಪ್ರಧಾನಿ ಮೋದಿ ಅವರ ಕೈಯನ್ನು ಮತ್ತೊಮ್ಮೆ ಬಲಪಡಿಸಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರೂ ಸಂಕಲ್ಪ ಮಾಡಬೇಕಿದೆ ಎಂದರು.

ಹಿಂದೆಂದೂ ಕಾಣದಷ್ಟು ಅಭಿವೃದ್ಧಿ ಕೆಲಸಗಳು ಈ ಹತ್ತು ವರ್ಷದಲ್ಲಿ ಆಗಿವೆ. ವಿಕಸಿತ ಭಾರತದತ್ತ ದೇಶ ಹೆಜ್ಜೆ ಇಟ್ಟಿದೆ. ಮೋದಿ ನೇತೃತ್ವದ ಸರಕಾರದಲ್ಲಿ ಪ್ರತಿದಿನ 30 ಕಿಮೀ ರಾಷ್ಟ್ರೀಯ ಹೆದ್ದಾರಿ, ವರ್ಷಕ್ಕೆ ಒಂದು ವಿಮಾನ ನಿಲ್ದಾಣ ನಿರ್ಮಿಸಲಾಗಿದೆ. ಭಾರತದ ತಂತ್ರಜ್ಞಾನ, ವಿದೇಶಾಂಗ ನೀತಿ ಹಾಗೂ ರಕ್ಷಣಾ ವಲಯದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ದೇಶದಲ್ಲಿ ಡಿಜಿಟಲ್‌ ಬಳಕೆದಾರರ ಸಂಖ್ಯೆ ಹೆಚ್ಚಿದೆ. ಮೊದಲು 2ಜಿ, 3ಜಿ ಸೇವೆ ದೊರೆಯುತ್ತಿತ್ತು. ಈಗ 4ಜಿ, 5ಜಿ ಸೇವೆ ಭಾರತದಲ್ಲಿ ಲಭ್ಯವಿದೆ. ಯುವಕರು ಕೌಶಲ್ಯಾಧರಿತ ಶಿಕ್ಷಣ ಪಡೆಯುವ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಭಾರತದ ಮಾತನ್ನು ಇಡೀ ಜಗತ್ತೇ ಕೇಳುವಂತೆ ಮಾಡಿರುವುದು ಮೋದಿ ನಾಯಕತ್ವಕ್ಕೆ ಹಿಡಿದ ಕೈಗನ್ನಡಿ. ಉಕ್ರೇನ್‌ ಯುದ್ಧ ಹಾಗೂ ಅಪಘಾನಿಸ್ಥಾನದಲ್ಲಿ ನಡೆದ ಅಧಿಕಾರ ಹಸ್ತಾಂತರ ಸಂದರ್ಭದಲ್ಲಿ ಭಾರತೀಯರಿಗೆ ಯಾವುದೇ ಸಮಸ್ಯೆ ಆಗದಂತೆ ರಕ್ಷಣೆ ಮಾಡಿದ ಕೀರ್ತಿ ಪ್ರಧಾನಿ ಮೋದಿ ಹಾಗೂ ವಿದೇಶಾಂಗ ಸಚಿವ ಡಾ.ಜೈಶಂಕರ ಅವರಿಗೆ ಸಲ್ಲುತ್ತದೆ. ಉಕ್ರೇನ್‌ನಿಂದ 21 ಸಾವಿರ ಜನ ಭಾರತೀಯರನ್ನು ರಕ್ಷಿಸಲಾಗಿದೆ ಎಂದರು.

ಪ್ರಾಚೀನ ಆಯುರ್ವೇದ ಚಿಕಿತ್ಸೆ ಭಾರತ ವಿಶ್ವಗುರು ಆಗಲು ತನ್ನದೇ ಆದ ಕೊಡುಗೆ ನೀಡುತ್ತಿದೆ. ದೇಶದಲ್ಲಿ ಆಯುರ್ವೇದ ಔಷಧಿಯ ಉತ್ಪಾದನೆ 1.64 ಲಕ್ಷ ಕೋಟಿ ದಾಟಿದೆ. ವಿದೇಶದಲ್ಲೂ ಭಾರತದ ಆಯುರ್ವೇದ ಚಿಕಿತ್ಸಾ ಪದ್ಧತಿಗೆ ಬಹಳಷ್ಟುಬೇಡಿಕೆ ಇದೆ ಎಂದು ತಿಳಿಸಿದರು.

ಬದುಕಿಗೆ ಆಯುರ್ವೇದ ಅವಶ್ಯ:

ವರೂರಿನ ಗುಣಧರನಂದಿ ಮಹಾರಾಜರು, ಮನುಷ್ಯ ಅನ್ಯ ಪದಾರ್ಥಗಳಿಲ್ಲದೇ ಬದುಕಬಹುದು. ಆದರೆ ಆಯುರ್ವೇದ ಇಲ್ಲದೇ ಬದುಕಲು ಸಾಧ್ಯವಿಲ್ಲ. ಆಯುರ್ವೇದ ಭಾರತೀಯ ಪರಂಪರೆಯ ಪ್ರತೀಕ, ಇದು ತನ್ನದೇ ಇತಿಹಾಸ ಹೊಂದಿದೆ. ಪ್ರಧಾನಿ ಮೋದಿ ವಿಶ್ವಕ್ಕೆ ಯೋಗ ಪರಿಚಯಿಸುವ ಕೆಲಸ ಮಾಡಿದ್ದಾರೆ. ದೇಶದಲ್ಲಿ ತಂತ್ರಜ್ಞಾನ ಬಹಳ ಮುಂದುವರಿದಿದೆ. ಭಾರತ ದೇಶ ನಂಬರ್‌ ಒನ್‌ ಆಗಲಿದ್ದು, ಮೋದಿ ಮತ್ತೊಮ್ಮೆ ಪ್ರಧಾನಿ ಆಗಲಿದ್ದಾರೆ ಎಂದು ಭವಿಷ್ಯ ನುಡಿದರು.

ವಿಶ್ವಶಾಂತಿ ಸಂಸ್ಥೆ ಸಂಸ್ಥಾಪಕ ಆಚಾರ್ಯ ಡಾ. ಲೋಕೇಶ ಮುನೀಜಿ, ಭಾರತ ವಿಕಾಸದತ್ತ ಮುಖ ಮಾಡಿದೆ. ಇದಕ್ಕೆ ಕಾರಣ ಮೋದಿ ಅವರ ದೂರದೃಷ್ಟಿತ್ವ. 10 ವರ್ಷಗಳಲ್ಲಿ ಹಲವಾರು ಅಭಿವೃದ್ಧಿ ಕಾರ್ಯ ಮಾಡುವ ಮೂಲಕ ದೇಶದ ಜನರ ವಿಶ್ವಾಸ ಗಳಿಸಿದ್ದಾರೆ ಎಂದು ಶ್ಲಾಘಿಸಿದರು.

ಅದಕ್ಕೂ ಮುನ್ನ ಗುಣಧರನಂದಿ ಮಹಾರಾಜರು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಕರ್ಮಯೋಗಿ ಬಿರುದು ನೀಡಿ ಸನ್ಮಾನಿಸಿದರು.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕ ಎಂ.ಆರ್‌. ಪಾಟೀಲ, ಮಾಜಿ ಶಾಸಕರಾದ ನಾಗರಾಜ ಛಬ್ಬಿ, ಅಭಯ ಪಾಟೀಲ, ಬೆಳಗಾವಿ ವಿಟಿಯುನ ಉಪ ಕುಲಪತಿ ಡಾ. ಎಸ್‌. ವಿದ್ಯಾಶಂಕರ, ಸಂಸ್ಥೆ ನಿರ್ದೇಶಕ ಸಂದೀಪ ಕೆ. ಸೇರಿದಂತೆ ಅನೇಕರಿದ್ದರು.