ಸಾರಾಂಶ
ಹೊಸಪೇಟೆ: ಸ್ಥಳೀಯ ನಗರಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ ಅವರು ಬುಧವಾರ ₹2,35,57,500 ಮೊತ್ತದ ಉಳಿತಾಯ ಬಜೆಟ್ ಮಂಡಿಸಿದರು. ನಗರದ ಸುಂದರೀಕರಣ, ಜನರ ಕಲ್ಯಾಣದ ಯೋಜನೆಗಳು ಸೇರಿದಂತೆ ಹಲವು ಹೊಸ ಯೋಜನೆಗಳನ್ನು ಕೂಡ ಆಯವ್ಯಯದಲ್ಲಿ ಪ್ರಸ್ತಾಪಿಸಲಾಗಿದ್ದು, ಒಟ್ಟು ₹81,76,09,000 ಮೊತ್ತದ ಭಾರೀ ಗಾತ್ರದ ಬಜೆಟ್ ಮಂಡಿಸಿದರು.
ಸ್ಥಳೀಯ ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಎ. ಲತಾ ಅವರ ಅಧ್ಯಕ್ಷತೆಯಲ್ಲಿ ನಡೆದ ಬಜೆಟ್ ಸಭೆಯಲ್ಲಿ ಮಂಡನೆ ಮಾಡಿದ ಅವರು, ಈ ಬಜೆಟ್‌ನಲ್ಲಿ ನಗರಸಭೆ ನಿಧಿ ₹29,04,24,000 ನಿರೀಕ್ಷಿಸಲಾಗಿದೆ. ಬಜೆಟ್‌ನಲ್ಲಿ ಅನುದಾನದ ರೂಪದಲ್ಲಿ ₹43,64,00,000 ನಿರೀಕ್ಷಿಸಲಾಗಿದೆ. ಇನ್ನೂ ಅಸಾಮಾನ್ಯ ಆದಾಯ ₹9,07,85,000 ಬರಲಿದೆ. ಒಟ್ಟು ₹81,76,09,000 ಮೊತ್ತದ ಬಜೆಟ್ ಮಂಡನೆ ಮಂಡಿಸಿದರು.ನಗರಸಭೆ ನಿಧಿಯಲ್ಲಿ ₹26,68,66,500 ಹಾಗೂ ಅನುದಾನಗಳಲ್ಲಿ ₹43,64,00,000 ಪಾವತಿ ಅಂದಾಜಿಸಲಾಗಿದೆ. ಬಜೆಟ್‌ನಲ್ಲಿ ₹9,07,85,000 ಅಸಾಮಾನ್ಯ ಆದಾಯ ಪಾವತಿ ಇದೆ. ಒಟ್ಟು ₹79,40,51,500 ಬಜೆಟ್‌ನಲ್ಲಿ ಪಾವತಿ ಅಂದಾಜಿಸಲಾಗಿದೆ. ಒಟ್ಟು ₹2,35,57,500 ಬಜೆಟ್‌ನಲ್ಲಿ ಉಳಿಯಲಿದೆ ಎಂದು ಸದಸ್ಯರಿಗೆ ವಿವರಣೆ ನೀಡಿದರು. ಈ ಬಜೆಟ್‌ಅನ್ನು ಸರ್ವ ಸದಸ್ಯರು ಮೇಜು ಕುಟ್ಟಿ ಅನುಮೋದಿಸಿದರು.
ಬಜೆಟ್‌ನಲ್ಲಿ ಕಲ್ಯಾಣ ಯೋಜನೆ: ಈ ಬಜೆಟ್‌ನಲ್ಲಿ ನಗರದ 6,500 ವಸತಿರಹಿತರು ಹಾಗೂ ನಿವೇಶನ ರಹಿತರಿಗಾಗಿ ಕೆಎಂಇಆರ್‌ಎಲ್ ಯೋಜನೆಯಡಿಯಲ್ಲಿ ₹150 ಕೋಟಿ ಪ್ರಸ್ತಾವನೆ ಸಲ್ಲಿಕೆಗಾಗಿ ಅಗತ್ಯ ಕ್ರಮ ವಹಿಸಲು ಬಜೆಟ್ ಮಂಡನೆ ವೇಳೆ ಪ್ರಸ್ತಾಪಿಸಲಾಗಿದೆ. ನಗರಸಭೆಯ ಎಲ್ಲ 104 ಕಾಯಂ ಪೌರಕಾರ್ಮಿಕರಿಗೆ ಜಂಬುನಾಥನಹಳ್ಳಿ ಪ್ರದೇಶದಲ್ಲಿ ಮೂರು ಎಕರೆ ಪ್ರದೇಶದಲ್ಲಿ ಪೌರ ಕಾರ್ಮಿಕರಿಗೆ ಗೃಹ ನಿರ್ಮಾಣಕ್ಕಾಗಿ ಕ್ರಮ ವಹಿಸಲಾಗುವುದು. ನಗರಸಭೆ "ಕಾಗದ ರಹಿತ ಕಚೇರಿ " ಸಂಪೂರ್ಣ ಗಣಕೀಕರಣ ಕಾರ್ಯಕ್ಕೆ ಕ್ರಮವಹಿಸಲು ಕೂಡ ಬಜೆಟ್ ಮಂಡನೆ ವೇಳೆ ಪ್ರಸ್ತಾಪಿಸಲಾಯಿತು. ನಗರದಲ್ಲಿ ಸಂಚಾರ ಸುಧಾರಣೆಗೆ ₹5 ಲಕ್ಷ ಮೀಸಲಿಡಲಾಗುವುದು. ಕಂದಾಯ ಇಲಾಖೆ ಯೋಜನೆಯಲ್ಲಿ ನಗರದಲ್ಲಿ ಫಾರಂ -3 ನೀಡಲು ಏಕಗವಾಕ್ಷಿಗೆ ಕ್ರಮವಹಿಸಲು ಕೂಡ ನಿರ್ಧರಿಸಲಾಯಿತು.ನಗರದ ಸುಂದರೀಕರಣ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಲು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದ್ದು, ಈಗಾಗಲೇ ನಗರದಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡುವವರ ಮೇಲೆ ನಿಗಾ ಇಡಲು 50 ಕಡೆ ಸಿಸಿ ಕ್ಯಾಮೆರಾ ಅಳವಡಿಸಲು ಕೂಡ ಪ್ರಸ್ತಾಪಿಸಿದರು. ನಗರದ ಪ್ರಮುಖ ಉದ್ಯಾನಗಳನ್ನು ಖಾಸಗಿ ನಿರ್ವಹಣೆಗೆ ಕ್ರಮವಹಿಸಲು ಕೂಡ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಯಿತು.
ನಗರದಲ್ಲಿ ತೆರಿಗೆ ಸಂಗ್ರಹಕ್ಕಾಗಿ ಸದಸ್ಯರನ್ನೊಳಗೊಂಡ ಟಾಸ್ಕ್‌ಫೋರ್ಸ್ ಸಮಿತಿ ರಚನೆಗೂ ಸದಸ್ಯ ಅಬ್ದುಲ್ ಖದೀರ್ ಸಲಹೆ ನೀಡಿದರು. ಒಂದು ವೇಳೆ ಸಮಿತಿಯಿಂದಲೂ ತೆರಿಗೆ ಸಂಗ್ರಹ ನಿರೀಕ್ಷಿತ ಮಟ್ಟದಲ್ಲಿ ಆಗದಿದ್ದರೆ ಎಲ್ಲ ಸದಸ್ಯರು ಜತೆಗೂಡಿ ತೆರಿಗೆ ಸಂಗ್ರಹಿಸೋಣ. ಈ ಮೂಲಕ ನಗರಸಭೆಯನ್ನು ಆರ್ಥಿಕವಾಗಿ ಸದೃಢಗೊಳಿಸೋಣ ಎಂದರು. ಇದಕ್ಕೆ ಸರ್ವ ಸದಸ್ಯರು ಸಮ್ಮತಿ ಸೂಚಿಸಿದರು.ಸದಸ್ಯರಾದ ತಾರಿಹಳ್ಳಿ ಜಂಬುನಾಥ, ಕೆ. ಗೌಸ್, ಮಹೇಶ್‌ಕುಮಾರ, ಗುಜ್ಜಲ ರಾಘವೇಂದ್ರ ಮಾತನಾಡಿ, ಫಾರಂ- 3 ವಿತರಣೆಗೆ ದಾಖಲೆ ಸಂಗ್ರಹದ ವೇಳೆಯೇ ಪ್ರಾಥಮಿಕವಾಗಿ ಪರಿಶೀಲನೆ ನಡೆಸಬೇಕು. ಇದಕ್ಕಾಗಿ ಮುತುವರ್ಜಿ ವಹಿಸಬೇಕು. ಜನರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕಾ ಕ್ರಮವಹಿಸಬೇಕು ಎಂದರು. ಪೌರಾಯುಕ್ತ ಶಿವಕುಮಾರ ಎರಗುಡಿ ಪ್ರತಿಕ್ರಿಯಿಸಿ, ನಾವು ಎಲ್ಲವನ್ನೂ ನಿಯಮಾನುಸಾರ ಪರಿಶೀಲನೆ ನಡೆಸಿ ಕ್ರಮ ವಹಿಸುತ್ತಿದ್ದೇವೆ ಎಂದರು.
ಮುಂಬರುವ ಪೌರಾಯುಕ್ತರಿಗೆ ಸಹಕಾರ ಕೊಡಿಹೊಸಪೇಟೆ: ಈಗ ನಾನು ವರ್ಗಾವಣೆಗೊಂಡಿದ್ದು, ಮುಂಬರುವ ಪೌರಾಯುಕ್ತರಿಗೆ ಸಹಕಾರ ಕೊಡಿ, ಕಳೆದ ಎರಡು ತಿಂಗಳಲ್ಲಿ ನಾನು ಶ್ರಮವಹಿಸಿ ಕೆಲಸ ಮಾಡಿರುವೆ. ಜತೆಗೆ ಅಧಿಕಾರಿಗಳೂ ಅಷ್ಟೇ ಸಹಕಾರ ನೀಡಿದ್ದಾರೆ. ಅವರಿಗೆ ವಹಿಸಿದ್ದ ಟಾಸ್ಕ್‌ಗಳನ್ನು ಪೂರೈಸಿದ್ದಾರೆ. ಸರ್ವ ಸದಸ್ಯರು ಕೂಡ ಸಹಕಾರ ನೀಡಿದ್ದಾರೆ ಎಂದು ಪೌರಾಯುಕ್ತ ಶಿವಕುಮಾರ ಎರಗುಡಿ ತಿಳಿಸಿದರು.
ಈ ವಿಷಯ ಪ್ರಸ್ತಾಪವಾಗುತ್ತಿದ್ದಂತೆಯೇ ಸಭೆಯಲ್ಲಿ ಮೌನ ಆವರಿಸಿತು. ಬಳಿಕ ಸದಸ್ಯರಾದ ಮಹೇಶ್‌ಕುಮಾರ ಹಾಗೂ ತಾರಿಹಳ್ಳಿ ಜಂಬುನಾಥ ಮಾತನಾಡಿ, ಲೋಕಸಭೆ ಎಲೆಕ್ಷನ್‌ಗೋಸ್ಕರ್ ನಿಮ್ಮ ವರ್ಗಾವಣೆ ಆಗಿದೆ ಎಂದು ತಿಳಿದುಬಂದಿದೆ. ನೀವು ಉತ್ತಮ ಕೆಲಸ ಮಾಡಿದ್ದೀರಿ. ಮತ್ತೆ ಮುಂದೆ ನಿಮ್ಮನ್ನೇ ಕರೆಯಿಸಿಕೊಳ್ಳಲು ಸದಸ್ಯರೆಲ್ಲರೂ ಪಕ್ಷಾತೀತವಾಗಿ ಪ್ರಯತ್ನ ಮಾಡುತ್ತೇವೆ ಎಂದರು.