ಸಾರಾಂಶ
ಕಾರಟಗಿ:
೫೦ ವರ್ಷದಿಂದ ಭೂಮಿ ಸಾಗುವಳಿ ಮಾಡುತ್ತಿರುವ ದಲಿತ ಕುಟುಂಬಗಳಿಗೆ ಭೂಮಿ ಮಂಜೂರಿ ಮಾಡುವಂತೆ ಆಗ್ರಹಿಸಿ ಸಿಪಿಐಎಂ ಪಕ್ಷದ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ನಿವಾಸಕ್ಕೆ ಮುತ್ತಿಗೆ ಹಾಕುವ ವಿಫಲಯತ್ನ ಪಟ್ಟಣದಲ್ಲಿ ಗುರುವಾರ ನಡೆಯಿತು.ತಾಲೂಕಿನ ಸಿಂಗನಾಳ ಗ್ರಾಮದ ದಲಿತ, ದೇವದಾಸಿ ಕುಟುಂಬಗಳು ಕಳೆದ ೪೫ ದಿನಗಳಿಂದ ತಾವು ಸಾಗುವಳಿ ಮಾಡುತ್ತಿರುವ ಭೂಮಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಇಲ್ಲಿನ ತಹಸೀಲ್ದಾರ್ ಕಚೇರಿ ಆವರಣದಲ್ಲಿ ನಿರಂತರ ಪ್ರತಿಭಟನೆ ನಡೆಸಿದರೂ ನ್ಯಾಯ ದೊರಕಿರಲಿಲ್ಲ. ಹೀಗಾಗಿ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಸರ್ಕಾರದ ಗಮನ ಸೆಳೆಯಲು ಸಚಿವರ ಮನೆಗೆ ಮುತ್ತಿಗೆ ಹಾಕಲು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಬಿ. ವೆಂಕಟ್ ನೇತೃತ್ವದಲ್ಲಿ ಬೆಳಗ್ಗೆ ಎಪಿಎಂಸಿಯಲ್ಲಿನ ತಹಸೀಲ್ ಕಚೇರಿಯಿಂದ ಬೃಹತ್ ಮೆರವಣಿಗೆ ನಡೆಸಿದರು.
ಮೆರವಣಿಗೆ ಉದ್ದಕ್ಕೂ ಬಡವರಿಗೆ ಭೂಮಿ ನೀಡದ ಸರ್ಕಾರಕ್ಕೆ ಧಿಕ್ಕಾರವೆಂದು ಘೋಷಣೆ ಕೂಗಿದರು. ಕನಕದಾಸ ವೃತ್ತದಿಂದ ನವಲಿ ರಸ್ತೆ ಮುಖಾಂತರ ಸಚಿವರ ಮನೆಗೆ ಕಡೆಗೆ ಪ್ರತಿಭಟನಾಕಾರರು ತಿರುಗಿದಾಗ ಪೊಲೀಸರು ಮಧ್ಯಪ್ರವೇಶಿಸಿ ಹಳೇ ನಾಡ ಕಚೇರಿಯಲ್ಲಿ ಆವರಣದಲ್ಲಿ ಪ್ರತಿಭಟನೆ ನಡೆಸಿ, ಸ್ಥಳಕ್ಕೆ ಸಚಿವರು ಬರುತ್ತಾರೆ. ಅಲ್ಲಿಯೇ ನಿಮ್ಮ ಮನವಿ ಸಲ್ಲಿಸಿ ಎಂದು ಸಾಗ ಹಾಕಿದರು.ಇದಕ್ಕೆ ಒಪ್ಪಿದ ಪ್ರತಿಭಟನಾಕಾರರು ಎರಡು ಗಂಟೆ ಕಾದರು ಸಚಿವರ ಆಗಮನದ ಬಗ್ಗೆ ಪೊಲೀಸರಿಂದ ಸ್ಪಷ್ಟ ಮಾಹಿತಿ ಬರಲಿಲ್ಲ. ಆಗ ಪ್ರತಿಭಟನಕಾರರು ಪುನಃ ಸಚಿವರ ಮನೆಯತ್ತ ಚಳ್ಳೂರು ಕ್ರಾಸ್ ವರೆಗೆ ಸಾಗಿದರು. ಆಗ ಪುನಃ ಪೊಲೀಸರ ತಡೆದಾಗ ಪ್ರತಿಭಟನಾಕಾರರೊಂದಿಗೆ ಮಾತಿನ ಚಕಮಕಿ ನಡೆಯಿತು. ಅಲ್ಲಿಯೇ ಮತ್ತೊಮ್ಮೆ ಧರಣಿ ಕುಳಿತು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಕೊನೆಗೂ ಸ್ಥಳಕ್ಕೆ ಆಗಮಿಸಿದ ಸಚಿವ ಶಿವರಾಜ ತಂಗಡಗಿ ಅವರೊಂದಿಗೆ ಮಾತನಾಡಿದ ಹೋರಾಟಗಾರರು, ಸಿಂಗನಾಳ ಗ್ರಾಮದ ಸರ್ವೇ ನಂ. ೬೩ರಲ್ಲಿ ಸಾಗುವಳಿ ಮಾಡುವ ೧೮ ಜನರಿಗೆ, ಸರ್ವೇ ನಂ ೭,೮,೯,೧೦ರಲ್ಲಿನ ೧೦ ಮಂದಿಗೆ ಸ್ಥಳದಲ್ಲಿಯೇ ಹಕ್ಕುಪತ್ರ ನೀಡಬೇಕೆಂದು ಪಟ್ಟು ಹಿಡಿದರು. ಇದಕ್ಕೆ ಸಚಿವರು, ನಿಮಗೆ ಅಲ್ಲಿರುವ ಒಟ್ಟು ಸರ್ಕಾರಿ ಭೂಮಿಯಲ್ಲಿ ಅರ್ಧದಷ್ಟು ಭೂಮಿ ನೀಡುವುದಾಗಿ, ಇನ್ನುಳಿದ ಅರ್ಧದಷ್ಟು ಭೂಮಿಯಲ್ಲಿ ಸರ್ಕಾರಿ ಆಸ್ಪತ್ರೆ ನಿರ್ಮಾಣಕ್ಕೆ ಕೊಡುವುದಾಗಿ ತಿಳಿಸಿಲ್ಲವೇ ಎಂದು ಪ್ರಶ್ನಿಸಿದರು. ಈ ವೇಳೆ ದೇವದಾಸಿಯರಿಗೂ ಕೂಡಾ ಭೂಮಿ ನೀಡಬೇಕು ಎಂದರು. ಅದಕ್ಕೆ ಸಚಿವರು, ಈ ಕುರಿತು ನೀವು ಈ ವರೆಗೂ ಮನವಿ ಕೊಟ್ಟಿಲ್ಲ. ಇನ್ನು ಒಂದು ವಾರದೊಳಗೆ ಅಧಿಕಾರಿಗಳ ಸಭೆ ನಡೆಸಿ ದೇವದಾಸಿಯರಿಗೂ ಭೂಮಿ ನೀಡುವ ಬಗ್ಗೆ ನಿರ್ಧರಿಸಲಾಗುವುದು ಎಂದು ಭರವಸೆ ನೀಡಿದರು.ಇಡೀ ರಾಜ್ಯದಲ್ಲಿಯೇ ಬಡವರಿಗೆ, ದಲಿತರಿಗೆ ಹಕ್ಕುಪತ್ರ ನೀಡುವ ಕೆಲಸ ಚುರುಕು ಪಡೆದಿದ್ದು, ವಿಳಂಬ ಮಾಡುವುದಿಲ್ಲ. ಈ ಬಗ್ಗೆ ಯಾವುದೇ ಸಂಶಯ ಬೇಡ ಎಂದು ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ ಅಲ್ಲಿಂದ ಸಚಿವರು ತೆರಳಿದರು.
ಈ ವೇಳೆ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಯು. ಬಸವರಾಜ, ಜಿಲ್ಲಾ ಕಾರ್ಯದರ್ಶಿ ನಿರುಪಾದಿ ಬೆಣಕಲ್, ರಾಜ್ಯ ಕಾರ್ಯದರ್ಶಿ ಚಂದ್ರಪ್ಪ ಹೊಸಕೇರಾ, ಮುನಿವೆಂಕಟಪ್ಪ, ಎಂ. ಬಸವರಾಜ, ಹುಸೇನಪ್ಪ, ಶಿವಣ್ಣ ಬೆಣಕಲ್, ಮಂಜುನಾಥ ಡಗ್ಗಿ, ಆರ್.ಕೆ. ದೇಸಾಯಿ ಕುಷ್ಟಗಿ, ಮರಿನಾಗಪ್ಪ, ಸುಂಕಪ್ಪ ಗದಗ, ಸಿಐಟಿಯು ಮಂಜು, ದೇವದಾಸಿ ರಾಜ್ಯಾಧ್ಯಕ್ಷೆ ಹುಲಿಗೆಮ್ಮ, ವಿವಿಧ ಸಂಘಟನೆಗಳ ಮುಖಂಡರಾದ ದುರುಗಮ್ಮ, ಲಕ್ಷ್ಮೀ ಸೋನಾರ, ಮುದುಕಮ್ಮ ಇದ್ದರು.