ನೇಹಾಳ ಮತಾಂತರಕ್ಕೆ ಯತ್ನ: ಪ್ರಹ್ಲಾದ್ ಜೋಶಿ

| Published : Apr 22 2024, 02:03 AM IST

ಸಾರಾಂಶ

ರಾಜ್ಯ ಸರ್ಕಾರವೇ ಲವ್ ಜಿಹಾದ್ ಪರ ನಿಂತಿದ್ದು, ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಕಾಂಗ್ರೆಸ್ ಯಾವುದೇ ಹಂತಕ್ಕೆ ಬೇಕಾದರೂ ಇಳಿಯುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಗಂಭೀರ ಆರೋಪ ಮಾಡಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಆರೋಪಿ ಫಯಾಜ್ ನೇಹಾಳನ್ನು ಮತಾಂತರ ಮಾಡಿ ಮದುವೆ ಮಾಡಿಕೊಳ್ಳಲು ಪ್ರಯತ್ನಿಸಿದ್ದ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಗಂಭೀರ ಆರೋಪ ಮಾಡಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಮಗಳಿಗೆ ಮತಾಂತರಕ್ಕೆ ಯತ್ನಿಸಿದ ವೇಳೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾಳೆ. ಒಪ್ಪದಿದ್ದಾಗ ಅಂತಿಮವಾಗಿ ಕೊಲೆ ಮಾಡಿದ್ದಾನೆ ಎಂದು ಅವಳ‌ ತಂದೆ ನಿರಂಜನ ಅವರೇ ಹೇಳಿದ್ದಾರೆ. ಕಾಂಗ್ರೆಸ್ ಕಾರ್ಪೊರೇಟರ್ ಆದ ನನ್ನ ಮಗಳ ಪ್ರಕರಣದಲ್ಲಿಯೇ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದೀರಿ. ಇನ್ನು ಜನ ಸಾಮಾನ್ಯರ ಗತಿಯೇನು? ಕಾಂಗ್ರೆಸ್‌ ಸರ್ಕಾರದ ವಿರುದ್ಧ ತಂದೆಯೇ ತಮ್ಮ ಮುಂದೆ ಕಿಡಿಕಾರಿದ್ದಾರೆ.

ರಾಜ್ಯ ಸರ್ಕಾರವೇ ಲವ್ ಜಿಹಾದ್ ಪರ ನಿಂತಿದ್ದು, ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಕಾಂಗ್ರೆಸ್ ಯಾವುದೇ ಹಂತಕ್ಕೆ ಬೇಕಾದರೂ ಇಳಿಯುತ್ತದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹ ಸಚಿವರ ತುಷ್ಟೀಕರಣದ ನೀತಿಯಿಂದಾಗಿ ಇಂತಹ ಪ್ರಕರಣಗಳು ನಡೆಯುತ್ತಿವೆ. ನೇಹಾಳಿಗೆ 9-10 ಬಾರಿ ಚೂರಿ ಇರಿದು ಕೊಲೆ ಮಾಡಿದ ದೃಶ್ಯ ನೋಡಿದಾಗಲೂ ಅವರಿಗೆ ಕರುಣೆ ಬಂದಿಲ್ಲ. ಅವಳ ಕುಟುಂಬಕ್ಕೆ ನ್ಯಾಯ ಕೊಡಬೇಕೆಂಬ ಕಿಂಚಿತ್ತೂ ಜವಾಬ್ದಾರಿಯೂ ಇಲ್ಲವಾಗಿದೆ. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಈ ರೀತಿ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ ಎಂದು ಹರಿಹಾಯ್ದರು.

ತುಷ್ಟೀಕರಣ ಮಿತಿಮೀರಿದೆ:

ಡಿಜೆ ಹಳ್ಳಿ-ಕೆಜೆ ಹಳ್ಳಿ, ರಾಮೇಶ್ವರ್ ಕೆಫೆ ಬಾಂಬ್ ಸ್ಫೋಟ, ಪಾಕಿಸ್ತಾನ್ ಜಿಂದಾಬಾದ್ ಘೋಷಣೆ, ಉಡುಪಿಯ ಶೌಚಾಲಯದ ಒಳಗೆ ಕ್ಯಾಮೆರಾ ಇಟ್ಟ ಪ್ರಕರಣಗಳಲ್ಲೂ ಇವರ ತುಷ್ಟೀಕರಣ ನೀತಿ ಮಿತಿಮೀರಿದೆ ಎಂದು ಕಾಂಗ್ರೆಸ್ ವಿರುದ್ಧ ಜೋಶಿ ಹರಿಹಾಯ್ದರು.