ಸಾರಾಂಶ
ಮುಖ್ಯಮಂತ್ರಿಗಳು ಸಚಿವ ನಾಗೇಂದ್ರನನ್ನು ಕರೆದು ರಾಜಿನಾಮೆ ಕೊಡಲು ಹೇಳಿದ್ದಾರಂತೆ. ಆದರೆ ನನ್ನ ರಾಜೀನಾಮೆ ಕೇಳಿದರೆ ಎಲ್ಲರ ವಿಚಾರ ಬಹಿರಂಗ ಮಾಡುತ್ತೇನೆ ಎಂದು ನಾಗೇಂದ್ರ ಬೆದರಿಸಿದ್ದಾರೆ. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂದಿಗ್ಧತೆಯಲ್ಲಿದ್ದಾರೆ ಎಂದು ಕೋಟ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ವಾಲ್ಮೀಕಿ ನಿಗಮದ ಹಗರಣದಲ್ಲಿ ರಾಜ್ಯ ಸರ್ಕಾರ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ನಿಗಮದ ಹಣ ಹೈದರಾಬಾದ್ ಮೂಲದ ಕಂಪನಿಗಳಿಗೆ ಹೋಗಿದೆ. ಇದು ರಾಜ್ಯವನ್ನು ಮೀರಿದ ಹಗರಣವಾದ್ದರಿಂದ ಇದನ್ನು ಸಿಬಿಐ ತನಿಖೆ ನಡೆಸಬೇಕು. ಆದರೆ ಸರ್ಕಾರ ಎಸ್‌ಐಟಿ ನೇಮಕ ಮಾಡಿ ತನಿಖೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ವಾಗ್ದಾಳಿ ನಡೆಸಿದರು.ಪರಿಶಿಷ್ಟ ಜಾತಿ ಪಂಗಡದವರ ಕೆಲಸ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಆದರೆ ಬಡವರ ಹಣ ಇವತ್ತು ಹೈದರಾಬಾದ್ ಮೂಲದ 9 ಕಂಪನಿಗಳಿಗೆ ಹೋಗಿದೆ. ಯೂನಿಯನ್ ಬ್ಯಾಂಕ್ ಸಿಬಿಐಗೆ ಪತ್ರ ಬರೆದು ತನಿಖೆ ಮಾಡುವಂತೆ ಹೇಳಿದೆ. ನಾವು ಸಿಬಿಐ ತನಿಖೆಗೆ ಮುಖ್ಯಮಂತ್ರಿಗಳನ್ನ ಒತ್ತಾಯ ಮಾಡಿದ್ದೇವೆ. ಆದರೆ ಸಿಬಿಐ ತನಿಖೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ರಾಜ್ಯ ಸರ್ಕಾರ ಮಾಡಿದೆ ಎಂದರು.ಮುಖ್ಯಮಂತ್ರಿಗಳು ಸಚಿವ ನಾಗೇಂದ್ರನನ್ನು ಕರೆದು ರಾಜಿನಾಮೆ ಕೊಡಲು ಹೇಳಿದ್ದಾರಂತೆ. ಆದರೆ ನನ್ನ ರಾಜೀನಾಮೆ ಕೇಳಿದರೆ ಎಲ್ಲರ ವಿಚಾರ ಬಹಿರಂಗ ಮಾಡುತ್ತೇನೆ ಎಂದು ನಾಗೇಂದ್ರ ಬೆದರಿಸಿದ್ದಾರೆ. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂದಿಗ್ಧತೆಯಲ್ಲಿದ್ದಾರೆ. ಸಚಿವರ ರಾಜೀನಾಮೆ ಪಡೆಯಲಾಗದಷ್ಟು ಸಿದ್ದರಾಮಯ್ಯ ದುರ್ಬಲರಾಗಿದ್ದಾರೆ. ಮುಖ್ಯಮಂತ್ರಿಗಳ ಮಾತಿಗೆ ಮನ್ನಣೆ ಕೊಡುವುದಿಲ್ಲ, ನನ್ನದೇ ನನಗೆ ದಾರಿ ಎಂದು ಸಚಿವರು ವರ್ತಿಸಿದ್ದಾರೆ. ತಕ್ಷಣ ಸಚಿವರ ರಾಜೀನಾಮೆ ಪಡೆಯಲು ಮುಖ್ಯಮಂತ್ರಿಗಳಿಗೇನು ಏನು ತೊಂದರೆ? ಹೀಗೆ ಆದರೆ ನಿಮ್ಮ ರಾಜೀನಾಮೆಗೂ ನಾವು ಆಗ್ರಹಿಸಬೇಕಾಗುತ್ತದೆ ಎಂದರು.
* ವಿಪಕ್ಷಕ್ಕೆ ವಿಷಯ ಇಲ್ಲದೆ ಧ್ಯಾನದ ಬಗ್ಗೆ ಟೀಕೆ:ಪ್ರಧಾನಿ ಮೋದಿ ಧ್ಯಾನ ವಿಪಕ್ಷಗಳ ಆಕ್ಷೇಪ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಕೋಟ, ವಿದೇಶ ಪ್ರಯಾಣ, ಐಷಾರಾಮಿ ಜೀವನದ ಬಗ್ಗೆ ವಿಪಕ್ಷಗಳಿಗೆ ಹೆಚ್ಚಿನ ಆಸಕ್ತಿ ಇದ್ದು, ಭಾರತೀಯ ಸಂಸ್ಕೃತಿಯ ಧ್ಯಾನ ಅವರ ಮನಸ್ಸಿಗೆ ಒಪ್ಪಿಗೆ ಆಗೋದಿಲ್ಲ. ದೇಶಕ್ಕೋಸ್ಕರ ದುಡಿಯುವ ಪ್ರಧಾನಿಯನ್ನು ಕಂಡು ಬೇರೆನು ಟೀಕೆ ಮಾಡಲು ಸಾಧ್ಯವಾಗಿಲ್ಲ. ಆದ್ದರಿಂದ ಅಸಹಾಯಕರಾಗಿ ಧ್ಯಾನವನ್ನು ಕೂಡ ಟೀಕೆ ಮಾಡಿದ್ದಾರೆ ಎಂದರು.