ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ವಿದೇಶಿ ಶಕ್ತಿಗಳ ಜೊತೆಗೂಡಿ ನಮ್ಮ ದೇಶದಲ್ಲಿನ ಹಿತ ಶತ್ರುಗಳು ಚುನಾಯಿತ ಸರ್ಕಾರವನ್ನು ಅಸ್ತಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಇಂಥವರು ತಮ್ಮ ಪ್ರಯತ್ನದಲ್ಲಿ ಸಫಲವಾಗಲಾರರು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನುಡಿದರು.ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಉತ್ತರ ಪ್ರಾಂತದಿಂದ ಶುಕ್ರವಾರ ನಗರದಲ್ಲಿ ಹಮ್ಮಿಕೊಂಡ ವೀರ ವನಿತೆ ಕಿತ್ತೂರು ರಾಣಿ ಚನ್ನಮ್ಮನವರ 200 ವರ್ಷದ ವಿಜಯೋತ್ಸವ ಮತ್ತು ವೀರ ರಾಣಿ ಅಬ್ಬಕ್ಕನವರ 500ನೇ ಜಯಂತ್ಯೋತ್ಸವ ಆಚರಣೆಯ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿ, ರಾಷ್ಟ್ರದಲ್ಲಿ ಒಂದು ಕುಟುಂಬವನ್ನು ವೈಭವೀಕರಿಸಲು ಸ್ವಾತಂತ್ರ್ಯ ಹೋರಾಟಗಾರರ ವೀರಗಾಥೆ ಯನ್ನು ಮರೆ ಮಾಚುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ನಾವು ವಿದ್ಯಾರ್ಥಿಗಳಿದ್ದಾಗ ನಮಗೆ ‘ಅಕ್ಬರ್ ದ ಗ್ರೇಟ್’ ಎಂಬ ವಿಷಯ ಪಠ್ಯಕ್ರಮವನ್ನಾಗಿಸಲಾಗಿತ್ತು. ‘ಅಕ್ಬರ್ ದ ಗ್ರೇಟ್’ ಎಂಬುವುದು ಪಠ್ಯವಾಗಿರುವಾಗ ಕೆಚ್ಚೆದೆಯ ಸಂಗೊಳ್ಳಿ ರಾಯಣ್ಣನ ವೀರಗಾಥೆ ಪಠ್ಯಕ್ರಮ ಏಕೆ ಆಗಿಲ್ಲ ಎಂದ ಅವರು ಕಿತ್ತೂರು ರಾಣಿ ಚನ್ನಮ್ಮನವರ ಮತ್ತು ರಾಣಿ ಅಬ್ಬಕ್ಕನರ ವ್ಯಕ್ತಿತ್ವವನ್ನು ಮೈಗೂಡಿಸಿಕೊಳ್ಳುವಂತೆ ಸಚಿವೆ ಶೋಭಾ ಕರಂದ್ಲಾಜೆ ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.ಎಬಿವಿಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಶಾಲಿನಿ ವರ್ಮಾ ಮಾತನಾಡಿ, ಮತಾಂತರದ ಮತ್ತು ಲವ್ ಜಿಹಾದ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಎಬಿವಿಪಿ ಕರ್ನಾಟಕ ಉತ್ತರ ಪ್ರಾಂತದ ಕಾರ್ಯದರ್ಶಿ ಸಚಿನ್ ಕುಳಗೇರಿ ಮಾತನಾಡಿ, ಕಿತ್ತೂರು ರಾಣಿ ಚನ್ನಮ್ಮನವರ ಮತ್ತು ರಾಣಿ ಅಬ್ಬಕ್ಕನವರ ವೀರಗಾಥೆಯನ್ನು ಯುವ ವೃಂದಕ್ಕೆ ಮನವರಿಕೆ ಮಾಡಿ ರಾಷ್ಟ್ರ ಪ್ರೇಮ ಮತ್ತು ದೇಶ ಭಕ್ತಿ ವೃದ್ಧಿಸುವುದೇ ರಥಯಾತ್ರೆಯ ಉದ್ದೇಶವಾಗಿದೆ ಎಂದರು.ಬೀದರ್‌ನಿಂದ ಆರಂಭವಾದ ರಥಯಾತ್ರೆ ರಾಜ್ಯದ 50 ನಗರಗಳ ಮೂಲಕ ಸಾಗಿ 2,520 ಕಿ.ಮೀ.ಗಳನ್ನು ಕ್ರಮಿಸಿದ ಬಳಿಕ ಬೆಳಗಾವಿಯಲ್ಲಿ ಸಮಾವೇಶಗೊಂಡ ಬಳಿಕ ರಥವು ಉತ್ತರ ಪ್ರದೇಶದ ಹರಿದ್ವಾರ ದಲ್ಲಿ ಆಯೋಜಿಸಲಾಗುವ ಎಬಿವಿಪಿ ರಾಷ್ಟ್ರೀಯ ಸಮಾವೇಶದಲ್ಲಿ ಪಾಲ್ಗೊಳ್ಳಲಿದೆ ಎಂದು ತಿಳಿಸಿದರು.
ಸ್ವಾಗತ ಸಮಿತಿಯ ಡಾ.ರಜನೀಶ ವಾಲಿ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರ ಕೆಚ್ಚೆದೆಯ ವೀರಗಾಥೆ ಅರಿಯುವಂತೆ ಯುವ ಸಮೂಹಕ್ಕೆ ಕರೆ ನೀಡಿದರು. ಎಬಿವಿಪಿ ರಥಯಾತ್ರೆ ಸಹ-ಸಂಚಾಲಕ ರಾದ ಸುಜ್ಞಾತಾ ಕುಲಕರ್ಣಿ ಸ್ವಾಗತಿಸಿದರು.ಈ ಸಂದರ್ಭದಲ್ಲಿ ಮುಕ್ತಿ ಮಂದಿರದ ಶ್ರೀಗಳು ಹಾಗೂ ಮಾಜಿ ವಿಧಾನ ಪರಿಷತ್ ಸಭಾಪತಿ ರಘುನಾಥರಾವ ಮಲ್ಕಾಪುರೆ ಇದ್ದರು. ಸ್ವಾಗತ ಸಮಿತಿ ಕಾರ್ಯದರ್ಶಿ ಶಶಿ ಹೊಸಳ್ಳಿ, ಉಪಾಧ್ಯಕ್ಷ ರೇವಣಸಿದ್ದಪ್ಪ ಜಲಾದೆ, ರತ್ನಾ ಪಾಟೀಲ್, ಸಂಚಾಲಕ ಗುರುನಾಥ ರಾಜಗೀರಾ, ಪ್ರಮುಖರಾದ ಸಂತೋಷ ಹಂಗರಗಿ, ಹೇಮಂತ, ಚಂದ್ರಶೇಖರ ಬಿರಾದಾರ, ವಿರೇಶ ಸ್ವಾಮಿ, ಅಶೋಕ ಶೆಂಬೆಳ್ಳಿ, ರೇವಣಸಿದ್ದ ಜಾಡರ, ಈಶ್ವರ ರುಮ್ಮಾ, ಭೀಮಣ್ಣ ಸೋರಳ್ಳಿ, ಗೋರಖನಾಥ ಕುಂಬಾರ, ನಾಗರಾಜ, ಸ್ನೆಹಾ, ಪ್ರಾರ್ಥನಾ, ಆನಂದ, ಮಹೇಶ ಹಾಗೂ ಪವನ ಕುಂಬಾರ ಸೇರಿದಂತೆ ಇತರರಿದ್ದರು.