ಸಾರಾಂಶ
ಅಭಿನಂದನಾ ಸಮಾರಂಭದಲ್ಲಿ ಸಂಸದ ಗೋವಿಂದ ಕಾರಜೋಳ ಭರವಸೆ
ಕನ್ನಡಪ್ರಭ ವಾರ್ತೆ ಹಿರಿಯೂರುಕೇಂದ್ರ ಮಂತ್ರಿಗಳೊಂದಿಗೆ ಮಾತನಾಡಿ ಭದ್ರಾ ಮೇಲ್ದಂಡೆ ಯೋಜನೆಗೆ ಈ ಹಿಂದೆ ಘೋಷಿಸಿರುವಂತಹ ₹5300 ಕೋಟಿ ಶೀಘ್ರದಲ್ಲಿ ಬಿಡುಗಡೆಗೊಳಿಸಲು ಪ್ರಯತ್ನಿಸುತ್ತೇನೆ ಎಂದು ನೂತನ ಸಂಸದ ಗೋವಿಂದ ಕಾರಜೋಳ ಹೇಳಿದರು.ನಗರದ ತನ್ಯಾಸಿ ಗೌಂಡರ್ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
55 ಸಾವಿರ ಎಕರೆ ಕೃಷಿ ಭೂಮಿಗೆ ನೀರು ಉಣಿಸುವ ಹಾಗೂ 359 ಕೆರೆಗಳಿಗೆ ನೀರು ತುಂಬಿಸುವ ಗುರಿ ನಮ್ಮ ಮುಂದಿದೆ. ಈ ಭಾಗದಲ್ಲಿ ಬಹುಸಂಖ್ಯಾತರಾಗಿರುವ ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಪ್ರಕ್ರಿಯೆ ಈಗಾಗಲೇ ಕೇಂದ್ರ ಸರ್ಕಾರದ ಮುಂದಿದೆ. ಮೀಸಲಾತಿಯನ್ನು ಕೊಡಿಸುವ ನಿಟ್ಟಿನಲ್ಲಿ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಯವರು ಎನ್ ಡಿಎ ನಾಯಕರೊಂದಿಗೆ ಮಾತುಕತೆ ನಡೆಸಿದ್ದು ಅವರ ಜೊತೆ ಕೈಜೋಡಿಸುತ್ತೇನೆ ಎಂದರು.ಬಿಜೆಪಿ–ಜೆಡಿಎಸ್ ಎರಡೂ ಪಕ್ಷಗಳ ಕಾರ್ಯಕರ್ತರು ಒಂದೇ ತಾಯಿ ಮಕ್ಕಳಂತೆ ನಡೆದುಕೊಳ್ಳಬೇಕು. ಶೀಘ್ರದಲ್ಲಿಯೇ ನಡೆಯಲಿರುವ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಮೈತ್ರಿ ಪಕ್ಷ ಹೆಚ್ಚಿನ ಸಾಧನೆ ಮಾಡಬೇಕು. ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಮತ ನೀಡಿ ಆಶೀರ್ವದಿಸಿದ ಹಿರಿಯೂರು ಜನತೆಯ ಋಣ ತೀರಿಸುವ ಹೊಣೆಗಾರಿಕೆ ನನ್ನ ಮೇಲಿದೆ. ನರೇಂದ್ರ ಮೋದಿಯವರನ್ನು ಮೂರನೇ ಅವಧಿಗೆ ಪ್ರಧಾನಿಯಾಗಿಸಬೇಕೆಂಬ ನಮ್ಮ ಗುರಿ ಈಡೇರಿದ್ದು ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಕೆಲಸ ಮಾಡುತ್ತೇವೆ ಎಂದರು.
ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಎನ್.ಆರ್.ಲಕ್ಷ್ಮೀಕಾಂತ್ ಮಾತನಾಡಿ, ಕಾರಜೋಳರು ಸಜ್ಜನಿಕೆಗೆ ಹೆಸರಾದವರು. ವಿವಿಧ ಹುದ್ದೆಗಳಿಗೆ ಗೌರವ ಬರುವ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಹಿರಿಯೂರು ಕ್ಷೇತ್ರದಲ್ಲಿ ಹಾಲಿ ಸಚಿವರು, ಮಾಜಿ ಶಾಸಕಿ ಒಟ್ಟಾಗಿ ಶ್ರಮಿಸಿದರೂ ಜೆಡಿಎಸ್–ಬಿಜೆಪಿ ಸಂಘಟಿತ ಪ್ರಯತ್ನದಿಂದ ಕಾಂಗ್ರೆಸ್ ಅಭ್ಯರ್ಥಿಗಿಂತ ಹೆಚ್ಚಿನ ಮತಗಳು ಬಂದವು. ಸರ್ಕಾರಿ ಕಚೇರಿಗಳಲ್ಲಿ ಮೈತ್ರಿ ಮುಖಂಡರು ಹೇಳುವ ಕಾನೂನು ಬದ್ದ ಕೆಲಸಗಳನ್ನು ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಮನವಿ ಮಾಡಿದರು.ಜೆಡಿಎಸ್ ಮುಖಂಡ ಎಂ.ರವೀಂದ್ರಪ್ಪ ಮಾತನಾಡಿ, ಚುನಾವಣೆ ಪೂರ್ವದಲ್ಲಿ ಭರಮಗಿರಿ, ಕಲುವಳ್ಳಿ, ಕರಿಯಾಲ, ಜೆಜಿ ಹಳ್ಳಿ ಭಾಗದ ನೀರಿನ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದೇವೆ. ವಿವಿ ಸಾಗರ ಮತ್ತು ಗಾಯತ್ರಿ ಜಲಾಶಯಗಳಿಗೆ ಭದ್ರೆಯ ನೀರು ಹರಿಸುವ ಕಾಮಗಾರಿಗೆ ಕೇಂದ್ರದ ಅನುದಾನ ಕೊಡಿಸಬೇಕು. ಐಮಂಗಲ ಭಾಗದಲ್ಲಿ ಸ್ಥಗಿತಗೊಂಡಿರುವ ಭದ್ರಾ ಕಾಮಗಾರಿಯನ್ನು ಮತ್ತೆ ಆರಂಭಿಸಬೇಕು ಎಂದು ಒತ್ತಾಯಿಸಿದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಮಾತನಾಡಿ, ಸಚಿವ ಸೋಮಣ್ಣರವರ ಸಹಕಾರದೊಂದಿಗೆ ಭದ್ರಾ ಮೇಲ್ದಂಡೆ ಯೋಜನೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವ ಕೆಲಸಕ್ಕೆ ನೂತನ ಸಂಸದರು ಹೆಚ್ಚು ಒತ್ತು ನೀಡಬೇಕು ಎಂದರು.ಇದೇ ವೇಳೆ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎಚ್.ಆರ್.ತಿಮ್ಮಯ್ಯ ಸಂಸದರಿಗೆ ಮನವಿ ಸಲ್ಲಿಸಿ ವಾಣಿ ವಿಲಾಸ ಜಲಾಶಯಕ್ಕೆ ಭದ್ರಾ ಯೋಜನೆಯಲ್ಲಿ ಕೇವಲ 2 ಟಿಎಂಸಿ ಅಡಿ ನೀರು ನಿಗದಿಪಡಿಸಿದ್ದು ಜಲಾಶಯದ ಬೇಡಿಕೆ 7.50 ಟಿಎಂಸಿ ಅಡಿಯಾಗಿರುವುದರಿಂದ ಬೇಡಿಕೆಯಿರುವಷ್ಟು ನೀರು ನಿಗದಿಪಡಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಜಯಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಎ. ಮುರಳಿ, ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಡಿ.ಯಶೋಧರ್, ಜೆಡಿಎಸ್ ತಾಲೂಕು ಅಧ್ಯಕ್ಷ ಹನುಮಂತರಾಯಪ್ಪ, ಗನ್ನಾಯಕನಹಳ್ಳಿ ಮಹೇಶ್, ಶಿವಶಂಕರಮೂರ್ತಿ, ಬಿ.ಎಸ್.ರಘುನಾಥ್, ಓಂಕಾರಪ್ಪ, ಎಂ. ಜಗದೀಶ್, ಮೀಸೆ ಮಹಲಿಂಗಪ್ಪ, ವಿಶ್ವನಾಥ್, ಬಳಗಟ್ಟ ಬಸವರಾಜ್, ಮಂಜುನಾಥ್, ಡಾ. ಸಿದ್ದಾರ್ಥ್, ಅಭಿನಂದನ್, ಕೆ.ಶಂಕರಮೂರ್ತಿ, ದೊರೆ, ಅಸ್ಗರ್ ಅಹಮದ್, ರಾಜೇಶ್ವರಿ, ರಾಧಮ್ಮ, ದ್ಯಾಮೇಗೌಡ ಮುಂತಾದವರು ಇದ್ದರು.