ಪುನರ್ವಸತಿ ಕಾರ್ಯಕರ್ತರ ಕಾಯಂಗೊಳಿಸಬೇಕು ಎಂದು ಆಗ್ರಹಿಸಿ ಸುವರ್ಣ ಸೌಧ ಮತ್ತಿಗೆಗೆ ಯತ್ನ ; ಮೂವರು ಅಸ್ವಸ್ಥ

| Published : Dec 14 2024, 12:49 AM IST / Updated: Dec 14 2024, 12:12 PM IST

ಪುನರ್ವಸತಿ ಕಾರ್ಯಕರ್ತರ ಕಾಯಂಗೊಳಿಸಬೇಕು ಎಂದು ಆಗ್ರಹಿಸಿ ಸುವರ್ಣ ಸೌಧ ಮತ್ತಿಗೆಗೆ ಯತ್ನ ; ಮೂವರು ಅಸ್ವಸ್ಥ
Share this Article
  • FB
  • TW
  • Linkdin
  • Email

ಸಾರಾಂಶ

ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರು, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಹಾಗೂ ನಗರ ಪುನರ್ವಸತಿ ಕಾರ್ಯಕರ್ತರನ್ನು ಕಾಯಂಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ವಿಕಲಚೇತನರ ಗೌರವಧನ ಕಾರ್ಯಕರ್ತರ ಸಂಘ ರಾಜ್ಯ ಘಟಕದಿಂದ ಸಾವಿರಕ್ಕೂ ಅಧಿಕ ಅಂಗವಿಕಲರು ಸುವರ್ಣ ಗಾರ್ಡನ್‌ ಬಳಿ ಪ್ರತಿಭಟನೆ ನಡೆಸಿದರು.

  ಬೆಳಗಾವಿ : ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರು, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಹಾಗೂ ನಗರ ಪುನರ್ವಸತಿ ಕಾರ್ಯಕರ್ತರನ್ನು ಕಾಯಂಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ವಿಕಲಚೇತನರ ಗೌರವಧನ ಕಾರ್ಯಕರ್ತರ ಸಂಘ ರಾಜ್ಯ ಘಟಕದಿಂದ ಸಾವಿರಕ್ಕೂ ಅಧಿಕ ಅಂಗವಿಕಲರು ಸುವರ್ಣ ಗಾರ್ಡನ್‌ ಬಳಿ ಪ್ರತಿಭಟನೆ ನಡೆಸಿದರು.

ಇಲಾಖೆ ಸಚಿವರಾದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರೇ ಸಮಸ್ಯೆ ಆಲಿಸಲು ಸ್ಥಳಕ್ಕೆ ಬರುವಂತೆ ಪಟ್ಟುಹಿಡಿದರು. ಮಧ್ಯಾಹ್ನ ಕಳೆದರೂ ಸಚಿವೆ ಮನವಿ ಆಲಿಸಲು ಬಾರದ ಕಾರಣ ಆಕ್ರೋಶಗೊಂಡ ವಿಕಲಚೇತನರು ಸುವರ್ಣವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಹೊರಟರು. ಈ ವೇಳೆ ಪೊಲೀಸರು ವಿಕಲಚೇತರನ್ನು ಬ್ಯಾರಿಕೇಡ್ ಹಾಕಿ ಸುವರ್ಣ ಗಾರ್ಡನ್‌ದಿಂದ ತೆರಳದಂತೆ ತಡೆದರು. ಈ ಮಧ್ಯೆ ಅಸ್ವಸ್ಥಗೊಂಡ ಮೂವರು ವಿಕಲಚೇತರನ್ನು ಪೊಲೀಸರು ಆಂಬ್ಯುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ಸಾಗಿಸಿದರು. ಹಿರಿಯ ಪೊಲೀಸ್ ಅಧಿಕಾರಿಗಳು ಮನವೊಲಿಸಿ ಮರಳಿ ಹೋರಾಟದ ವೇದಿಕೆಗೆ ಕಳಿಸಿದರು. ಸಂಜೆ 6 ಗಂಟೆ ಕಳೆದರೂ ಸಚಿವರು ಬಾರದ್ದರಿಂದ ವಿಕಲಚೇತನರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೊನೆಗೆ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ನಿರ್ದೇಶಕರು ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ಬಳಿಕ ಪ್ರತಿಭಟನೆ ಸ್ಥಗಿತಗೊಳಿಸಲಾಯಿತು.

ಸದನದಲ್ಲಿ ಧ್ವನಿ ಎತ್ತುವೆ: ವಿಜಯೇಂದ್ರ ಭರವಸೆ

ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಕಲಚೇತರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿದರು. ಈ ವೇಳೆ ಮಾತನಾಡಿದ ಅವರು, ತಡವಾಗಿ ಬಂದಿದ್ದಕ್ಕೆ ಕ್ಷಮೆ ಕೋರಿದ ವಿಜಯೇಂದ್ರ. ಅಧಿವೇಶನದ ವೇಳೆ ಹೋರಾಟ ಮಾಡುತ್ತೇವೆ ಎಂದು ಭರವಸೆ ನೀಡಿದರು. 17 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೀರಿ. ನಮ್ಮದು ನ್ಯಾಯಯುತ ಬೇಡಿಕೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿಕಲಚೇತನರ ನೇಮಕ ಮಾಡಿಕೊಂಡು ಸಂಬಳ ಏರಿಕೆ ಮಾಡಲಾಗಿತ್ತು. ಯಾವುದೇ ಸರ್ಕಾರವಿದ್ದರೂ ಇತಿಮಿತಿಯಲ್ಲಿ‌ ಬೇಡಿಕೆ ಈಡೇರಿಸಬೇಕು. ಈಗ ಆಡಳಿತದಲ್ಲಿರುವ ಸರ್ಕಾರ ಕಣ್ಣಿದ್ದು ಕುರುಡು, ಕಿವಿಯಿದ್ದು ಕಿವುಡಾಗಿದೆ. ರೈತರೂ ಸಹ ಹೋರಾಟ ಮಾಡುತ್ತಿದ್ದಾರೆ. ಯಡಿಯೂರಪ್ಪ ಸಿಎಂ ಆಗಿದ್ದಾಗ ಇಂಥ ಪರಿಸ್ಥಿತಿ ಇರಲಿಲ್ಲ. ಮುಂದಿನ ವಾರ ಸದನದಲ್ಲಿ ನಮ್ಮ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿಕಲಚೇತನರ ಪರ ಧ್ವನಿ ಎತ್ತುವೆ ಎಂದು ತಿಳಿಸಿದರು.

ತಡರಾತ್ರಿ ಬಂದ ಸಚಿವೆ ಹೆಬ್ಬಾಳಕರ್‌!

ಸಮಸ್ಯೆ ಆಲಿಸಲು ಸ್ಥಳಕ್ಕೆ ಬರುವಂತೆ ಪಟ್ಟುಹಿಡಿದಿದ್ದ ಪ್ರತಿಭಟನಾಕಾರರ ಬೇಡಿಕೆಯಂತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಅವರು ರಾತ್ರಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಬೇಡಿಕೆಗಳಿಗೆ ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.