ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಮಾದಕ ವಸ್ತು(ಎಂಡಿಎಂ)ಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ, 4.5 ಲಕ್ಷ ರು. ಮೌಲ್ಯದ ಮಾದಕ ವಸ್ತುಗಳನ್ನು ನಗರದಲ್ಲಿ ಪೊಲೀಸರು ಮಂಗಳವಾರ ಜಪ್ತಿ ಮಾಡಿದ್ದಾರೆ.ರಾಜಸ್ಥಾನದ ಸಾಂಚೂರು ಜಿಲ್ಲೆ ಚಿತ್ತಲ್‌ವಾರ್ ತಾಲೂಕಿನ ಹಾಲಿವ್ ಗ್ರಾಮದ ವಾಸಿ, ಹಾಲಿ ಬೆಂಗಳೂರು ದಕ್ಷಿಣ ಜವರೇಗೌಡ ನಗರದ ರಾಮದಾಸ್ ಲೇಔಟ್‌ನ ವಾಸಿ, ಸ್ಟೀಲ್ ರೇಲಿಂಗ್ ಕೆಲಸಗಾರ ಅಶೋಕ್ ಅಲಿಯಾಸ್ ಅಶೋಕಕುಮಾರ (25 ವರ್ಷ) ಬಂಧಿತ ಆರೋಪಿ. ದಾವಣಗೆರೆ ಕೆಆರ್ ನಗರದ ಎಲ್‌ಐಸಿ ಕಚೇರಿ ಹಿಂಭಾಗ ಬಿಟಿ ಲೇಔಟ್‌ನ 1ನೇ ಮೇನ್, 4ನೇ ಕ್ರಾಸ್‌ನ ಪಾರ್ಕ್ ಗೇಟ್ ಬಳಿ ಯಾರೋ ವ್ಯಕ್ತಿ ಮಾದಕ(ಎಂಡಿಎಂಎ) ವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ದೊರೆದ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದ್ದರು.
ಆಜಾದ್ ನಗರ ಠಾಣೆ ಪೊಲೀಸ್ ಇನ್ಸಪೆಕ್ಟರ್ ಅಶ್ವಿನಕುಮಾರ ನೇತೃತ್ವದಲ್ಲಿ ಡಿಸಿಆರ್‌ಬಿ ಘಟಕದ ಸಿಬ್ಬಂದಿ ಒಳಗೊಂಡ ತಂಡ ರಚನೆ ಮಾಡಿ, ದಾಳಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಸೂಚಿಸಿದ್ದರು. ಎಎಸ್ಪಿಗಳಾದ ವಿಜಯಕುಮಾರ ಎಂ.ಸಂತೋಷ, ಮಂಜುನಾಥ, ಡಿವೈಎಸ್ಪಿ ಮಲ್ಲೇಶ ದೊಡ್ಮನಿ ಮಾರ್ಗದರ್ಶನದಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿ ಒಳಗೊಂಡ ತಂಡವು ಪಂಚರು ಸಿಬ್ಬಂದಿ ಸಮೇತ ಸ್ಥಳಕ್ಕೆ ತೆರಳಿ, ದಾಳಿ ಮಾಡಿದ್ದಾರೆ. ಪಾರ್ಕ್‌ನ ಗೇಟ್ ಬಳಿ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಓರ್ವ ವ್ಯಕ್ತಿ ಕುಳಿತಿದ್ದು, ಆತನನ್ನು ಸುತ್ತುವರಿದು, ವಿಚಾರಿಸಿದಾಗ ಆತ ತಡವರಿಸುತ್ತಾ ಪ್ರತಿಕ್ರಿಯಿಸಿದ್ದಾನೆ.ತನಗೆ ಹಿಂದಿ, ಗುಜರಾತಿ ಭಾಷೆ ಮಾತ್ರ ಬರುತ್ತದೆಂದು ಹಿಂದಿ ಭಾಷೆಯಲ್ಲಿ ಅಶೋಕ ಯಾನೆ ಅಶೋಕಕುಮಾರ ಎಂಬುದಾಗಿ ಆತ ತಿಳಿಸಿದ್ದಾನೆ. ಸ್ಟೀಲ್ ರೇಲಿಂಗ್ ಕೆಲಸ ಮಾಡಿಕೊಂಡು, ಬೆಂಗಳೂರಿನಲ್ಲಿದ್ದೇನೆ. ತಾನು ರಾಜಸ್ಥಾನದವನೆಂದು ಬಾಯಿ ಬಿಟ್ಟಿದ್ದು, ಆತನಿಗೆ ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ತಾನು ಮಾದಕ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಕುಳಿತುಕೊಂಡಿದ್ದಾಗಿ ಹೇಳಿದ್ದಾನೆ. ಪಂಚರ ಸಮಕ್ಷಮ ಆರೋಪಿತನನ್ನು ಅಂಗಶೋಧನೆ ಮಾಡಿದಾಗ, ಆತನ ಬಳಿ ಅಫೀಮ್ ಮೊಗ್ಗಿನ ಒಣಗಿದ ಪೌಡರ್ ಇದ್ದು, ಪ್ಲಾಸ್ಟಿಕ್ ಕವರ್ ಸಮೇತ 345 ಗ್ರಾಂ, ಎಂಪಿಎಂಎ ಕ್ರಿಸ್ಟರ್ ಸಣ್ಣ ಪ್ಲಾಸ್ಟಿಕ್ ಕವರ್‌ನಲ್ಲಿ ಗೋಧಿ ಬಣ್ಣದಂತೆ ಕಂಡು ಬಂದಿದ್ದು, ಪ್ಲಾಸ್ಟರ್ ಕವರ್ ಸಮೇತ 08 ಗ್ರಾಂ, ಓಪಿಯಂ ಪೇಸ್ಟ್ ಪ್ಲಾಸ್ಟಿಕ್ ಕವರ್ ಸಮೇತ 07 ಗ್ರಾಂ, ಎಂಪಿಎಂ ಕ್ರಿಸ್ಟಲ್ ಬಿಳಿ ಬಣ್ಣದಂತೆ ಕಂಡು ಬರುವ ಪ್ಲಾಸ್ಟಿಕ್ ಕವರ್ ಸಮೇತ ಸುಮಾರು 15 ಗ್ರಾಂ ಸೇರಿ ಮಾದಕ ವಸ್ತು ಒಟ್ಟು 65 ಗ್ರಾಂ ತೂಕವಿದ್ದು, ಇದರ ಮೌಲ್ಯ ಸುಮಾರು 4.5 ಲಕ್ಷ ರು. ಮೌಲ್ಯದ್ದಾಗಿದ್ದು, ಅಷ್ಟನ್ನೂ ಜಪ್ತು ಮಾಡಲಾಯಿತು.
ಕಾನೂನು ಬಾಹಿರವಾಗಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಅಶೋಕಕುಮಾರ ವಿರುದ್ಧ ಇಲ್ಲಿನ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಜಾದ್ ನಗರ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕ ಅಶ್ವಿನಕುಮಾರ, ಪಿಎಸ್‌ಐ ಇಮ್ತಿಯಾಜ್, ಸಿಬ್ಬಂದಿ ಡಿಸಿಆರ್‌ಬಿ ವಿಭಾಗದ ಮಜೀದ್, ರಮೇಶ ನಾಯ್ಕ, ಕೆ.ಟಿ. ಆಂಜನೇಯ, ಬಾಲರಾಜ, ಮಾಲತೇಶ ಕೆಳಗಿನಮನೆ, ಕೃಷ್ಣ ನಂದ್ಯಾಲ, ತಿಪ್ಪೇಸ್ವಾಮಿ, ಡಿ.ಬಿ.ನಾಗರಾಜ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.