ಸಾರಾಂಶ
ಆರ್‌ಎಸ್‌ಎಸ್‌ಗೆ 100 ವರ್ಷ ತುಂಬಿದ ಅಂಗವಾಗಿ ಕಲಬುರಗಿ ಜಿಲ್ಲೆ ಚಿತ್ತಾಪುರದಲ್ಲಿ ಭಾನುವಾರ ಆಯೋಜಿಸಿದ್ದ ಪಥ ಸಂಚಲನಕ್ಕೆ ಸ್ಥಳೀಯ ಆಡಳಿತ ಅನುಮತಿ ನಿರಾಕರಿಸಿದ ಬೆನ್ನಲ್ಲೇ, ಜಿಲ್ಲೆಯ ಸೇಡಂನಲ್ಲೂ ಆರ್‌ಎಸ್‌ಎಸ್ ಪಥ ಸಂಚಲನಕ್ಕೆ ಸ್ಥಳೀಯ ತಾಲೂಕು ಆಡಳಿತ ಅನುಮತಿ ನಿರಾಕರಿಸಿದೆ.
ಬೆಂಗಳೂರು/ಕಲಬುರಗಿ : ಆರ್‌ಎಸ್‌ಎಸ್‌ಗೆ 100 ವರ್ಷ ತುಂಬಿದ ಅಂಗವಾಗಿ ಕಲಬುರಗಿ ಜಿಲ್ಲೆ ಚಿತ್ತಾಪುರದಲ್ಲಿ ಭಾನುವಾರ ಆಯೋಜಿಸಿದ್ದ ಪಥ ಸಂಚಲನಕ್ಕೆ ಸ್ಥಳೀಯ ಆಡಳಿತ ಅನುಮತಿ ನಿರಾಕರಿಸಿದ ಬೆನ್ನಲ್ಲೇ, ಜಿಲ್ಲೆಯ ಸೇಡಂನಲ್ಲೂ ಆರ್‌ಎಸ್‌ಎಸ್ ಪಥ ಸಂಚಲನಕ್ಕೆ ಸ್ಥಳೀಯ ತಾಲೂಕು ಆಡಳಿತ ಅನುಮತಿ ನಿರಾಕರಿಸಿದೆ. ಆದರೆ, ಸೇಡಂ ತಹಶೀಲ್ದಾರ್ ಕ್ರಮಕ್ಕೆ ಕ್ಯಾರೆ ಎನ್ನದೆ ಸಂಘದ ಗಣವೇಷಧಾರಿಗಳು ಪಥ ಸಂಚಲನ ನಡೆಸಿದ್ದಾರೆ.
ಈ ವೇಳೆ, ಮಾಜಿ ಶಾಸಕ ತೇಲ್ಕೂರ್ ಸೇರಿ ಪಥ ಸಂಚಲನದಲ್ಲಿ ಭಾಗಿಯಾಗಿದ್ದ ಹಲವರನ್ನು ಪೊಲೀಸರು ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಿದರು.ಈ ಮಧ್ಯೆ, ಸಂಘ ಶತಾಬ್ದಿ ನಿಮಿತ್ತ ಹುಮನಾಬಾದ್, ಯಾದಗಿರಿ, ಬಾಗಲಕೋಟೆ, ಹರಿಹರಗಳಲ್ಲಿಯೂ ಆರೆಸ್ಸೆಸ್ ನಿಂದ ಪಥ ಸಂಚಲನ ಆಯೋಜಿಸಲಾಗಿತ್ತು. ಯಾವುದೇ ಅಹಿತಕರ ಘಟನೆಗಳಿಲ್ಲದೆ, ಪಥ ಸಂಚಲನ ಎಲ್ಲೆಡೆ ಶಾಂತಿಯುತವಾಗಿ ಮುಕ್ತಾಯವಾಯಿತು.
ಸೇಡಂನಲ್ಲಿ ಪಥ ಸಂಚಲನಕ್ಕೆ ತಡೆ:ಸಂಘ ಶತಾಬ್ದಿ ನಿಮಿತ್ತ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ್ ತವರು ಕ್ಷೇತ್ರ ಸೇಡಂನಲ್ಲಿ ಭಾನುವಾರ ಮಧ್ಯಾಹ್ನ 4 ಗಂಟೆಗೆ ಪಥ ಸಂಚಲನ ಹಮ್ಮಿಕೊಳ್ಳಲಾಗಿತ್ತು. ಆದರೆ, ಕಾನೂನು ರೀತ್ಯಾ ಅನುಮತಿ ಪಡೆದಿಲ್ಲ ಎಂಬ ಕಾರಣ ನೀಡಿ ಸೇಡಂ ತಹಶೀಲ್ದಾರ್ ಅವರು ಕೊನೆ ಗಳಿಗೆಯಲ್ಲಿ, ಮಧ್ಯಾಹ್ನ 3 ಗಂಟೆಯ ವೇಳೆಗೆ ಪಥ ಸಂಚಲನಕ್ಕೆ ಅನುಮತಿ ನಿರಾಕರಿಸಿದರು.
ಆದರೆ, ಅನುಮತಿ ನಿರಾಕರಣೆ ನಡುವೆಯೂ ಸೇಡಂ ಪಟ್ಟಣದ ನಿಗದಿತ ಮಾರ್ಗದಲ್ಲಿ ಗಣವೇಷಧಾರಿಗಳು ಪಥ ಸಂಚಲನಕ್ಕೆ ಮುಂದಾದರು.ಇಲ್ಲಿನ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಮಾತೃಛಾಯಾ ಕಾಲೇಜಿನಿಂದ ಪಥ ಸಂಚಲನ ಆರಂಭವಾಗುತ್ತಿದ್ದಂತೆ, ಪೊಲೀಸರು ಅವರನ್ನು ತಡೆದರು. ಈ ವೇಳೆ, ಮಾತಿನ ಚಕಮಮಕಿ ನಡೆದು, ಮಾಜಿ ಶಾಸಕ ತೇಲ್ಕೂರ್ ಸೇರಿ ಹಲವು ಗಣವೇಷಧಾರಿಗಳನ್ನು ಪೊಲೀಸರು ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಿದರು.